More

    ದೃಢಸಂಕಲ್ಪದ ಓದಿನಿಂದ ನಿರೀಕ್ಷಿತ ಫಲಿತಾಂಶ

    ತಿ.ನರಸೀಪುರ: ನಕಾರಾತ್ಮಕ ಭಾವನೆ ತೊರೆದು ದೃಢಸಂಕಲ್ಪದಿಂದ ಓದಿದರೆ ಖಂಡಿತ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಪರೀಕ್ಷೆಯ ಬಗ್ಗೆ ಭಯ ಬಿಟ್ಟು ಓದನ್ನು ಸಂಭ್ರಮಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ.ಪಾಂಡು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಹಳೇ ತಿರಮಕೂಡಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬನ್ನೂರು ರೋಟರಿ ಸಂಸ್ಥೆ ಸಹಯೋಗದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಪ್ರೇರಣಾದಾಯಕ ಕಾರ್ಯಾಗಾರದಲ್ಲಿ ಮಾತನಾಡಿದರು.

    ಗುರುಗಳ ಮಾರ್ಗದರ್ಶನದೊಂದಿಗೆ ಕ್ರಮಬದ್ಧವಾಗಿ ಅಧ್ಯಯನ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಂತಸ, ಸಡಗರದಿಂದ ಎದುರಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು. ಮನಸ್ಸಿನಲ್ಲಿ ಮನೆ ಮಾಡಿರುವ ನಕಾರಾತ್ಮಕ ಅಂಶಗಳನ್ನು ತೊಡೆದುಹಾಕಿ, ಒಳ್ಳೆಯ ಫಲಿತಾಂಶ ಪಡೆದು ಹೆತ್ತವರಿಗೆ, ಶಾಲೆಗೆ, ತಾಲೂಕಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ ಮಾತನಾಡಿ, ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಫಲಿತಾಂಶ ಹೆಚ್ಚಳಕ್ಕೆ ಪೂರಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ತಾಲೂಕು ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಮಾಡಿದ್ದು, ಎಲ್ಲಾ ವಿಷಯಗಳನ್ನೊಳಗೊಂಡ ಅಭ್ಯಾಸ ಸ್ಫೂರ್ತಿ ಪರೀಕ್ಷಾ ಸಿದ್ಧತಾ ಪುಸ್ತಕ ನೀಡಲಾಗಿದೆ. ಶಿಕ್ಷಕರು ಅದರಂತೆ ಪರಿಶ್ರಮ ಹಾಕಿ ವಿದ್ಯಾರ್ಥಿಗಳ ಕಲಿಕೆಗೆ ಶ್ರಮ ವಹಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಿ ಕಲಿಕೆಗೆ ಪ್ರೇರೆಪಿಸಲಾಗುತ್ತಿದೆ. ನಾವು ಹೆಚ್ಚಿನ ಶ್ರಮ ವಹಿಸಿರುವುದರಿಂದ ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

    ರಾಮನಗರದ ಸಂಪನ್ಮೂಲ ವ್ಯಕ್ತಿ ವಿ.ಎಸ್.ಪ್ರಶಾಂತ್ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕುರಿತು ಹಲವು ತಂತ್ರಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಸಂಪನ್ಮೂಲ ಅಧಿಕಾರಿ ನಾಗೇಶ್, ಬನ್ನೂರು ರೋಟರಿ ಅಧ್ಯಕ್ಷ ಕೃಷ್ಣೇಗೌಡ, ಪದಾಧಿಕಾರಿಗಳಾದ ಜಿ.ಪಿ.ಪ್ರಸನ್ನ, ಹನುಮಂತೇಗೌಡ, ಮಾಣಿಕ್ ಚಂದ್ ಚೌಧರಿ ಬಿ.ಕೆ.ವೆಂಕಟೇಶ್ ಪ್ರಸಾದ್, ಬಿ.ಎಸ್.ಯೋಗೇಂದ್ರ, ವಡ್ಗಲ್ಲೇಗೌಡ, ಮುರುಳಿ, ಸಮಾಜ ಸೇವಕ ಕೃಷ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮದ್ದಾನಪ್ಪ,ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ವಿಶ್ವನಾಥರೆಡ್ಡಿ, ಮಂಟೆಸ್ವಾಮಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಸಾದ್, ನಾಗರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts