More

    ಚಿಕ್ಕಬಳ್ಳಾಪುರ ಜಿಲ್ಲೆ ಪ್ರಗತಿಗೆ ನೂರಾರು ಯೋಜನೆ ; ನಿರೀಕ್ಷೆ ಹೆಚ್ಚಿಸಿದೆ ರಾಜ್ಯ ಬಜೆಟ್ ಸಿಗುವುದೆ ಬಂಪರ್ ಕೊಡುಗೆ

    ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.4ರಂದು ಮಂಡಿಸುತ್ತಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಕೊಡುಗೆ ಸಿಗಬಹುದು ಎಂಬ ನಿರೀಕ್ಷೆಗಳು ಮೂಡಿವೆ.

    ಪ್ರತಿ ಬಜೆಟ್ ಸಂದರ್ಭದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಘೋಷಣೆಗಳಿಗಷ್ಟೇ ಜಿಲ್ಲೆ ತೃಪ್ತಿಪಡುವಂತಾಗಿದೆ. ಜಿಲ್ಲೆಗೆ ಚುನಾವಣಾ ಪೂರ್ವ, ಮುಖ್ಯಮಂತ್ರಿಗಳನ್ನೊಳಗೊಂಡ ಬೃಹತ್ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಕೊಡುಗೆಗೆಳು ಸಿಕ್ಕಿವೆ. ಹಾಗೆಯೇ ಸಾಕಾರ ವಿಳಂಬವಾದರೂ ಮಹತ್ತರವಾದ ಭರವಸೆಗಳು ಕೇಳಿ ಬಂದಿವೆ.

    ಜಿಲ್ಲೆಯಲ್ಲಿ ಏಕೈಕ ಬಿಜೆಪಿ ಶಾಸಕ ಹಾಗೂ ಪ್ರಭಾವಿ ಸಚಿವ ಡಾ ಕೆ.ಸುಧಾಕರ್. ಇದರ ಜತೆಗೆ ಎಂಟಿಬಿ ನಾಗರಾಜ್ ಜಿಲ್ಲಾ ಉಸ್ತುವಾರಿಯ ನೊಗ ಹೊತ್ತಿದ್ದಾರೆ. ಇಬ್ಬರೂ ಸರ್ಕಾರದ ಮೇಲೆ ಒತ್ತಡ ಹೇರಿ, ಹಲವು ಕೊಡುಗೆ ಕೊಡಿಸಬಹುದೆಂಬ ನಿರೀಕ್ಷೆಗಳು ಜನರದ್ದಾಗಿದೆ. ಕರೊನಾ ಸಮಸ್ಯೆ, ಖಜಾನೆ ಬೊಕ್ಕಸಕ್ಕೆ ಹೊರೆ ಮತ್ತು ಆರ್ಥಿಕ ಸಂಕಷ್ಟ ಸೇರಿ ನಾನಾ ಅಂಶಗಳು ನೆರವಿನ ಮೇಲೆ ಬೀರುವ ಹಿನ್ನಡೆ, ಮುನ್ನಡೆಯ ಲೆಕ್ಕಾಚಾರದ ಚರ್ಚೆಗಳು ನಡೆಯುತ್ತಿವೆ.

    ಹೊಸ ತಾಲೂಕುಗಳಿಗೆ ಕಾಯಕಲ್ಪ: ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯನ್ನು ಹೊಸ ತಾಲೂಕನ್ನಾಗಿ ಘೋಷಿಸಬೇಕೆಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಒತ್ತಡ ಯಶಸ್ವಿಯಾಗುತ್ತದೆಯೇ? ಎಂಬುದನ್ನು ನೋಡಬೇಕಿದೆ. ಮತ್ತೊಂದೆಡೆ ಚೇಳೂರು ಮತ್ತು ಮಂಚೇನಹಳ್ಳಿಯನ್ನು ತಾಲೂಕನ್ನಾಗಿ ಘೋಷಿಸಲಾಗಿದೆ. ಆದರೆ, ಕಾರ್ಯರೂಪದಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ. ಗಡಿಗಳ ಸರ್ವೇ, ತಾಲೂಕು ಮಟ್ಟದ ಹೊಸ ಆಡಳಿತ ವ್ಯವಸ್ಥೆ, ಆಡಳಿತಸೌಧ ಮತ್ತು ವಿವಿಧ ಇಲಾಖೆಯ ಕಚೇರಿಗಳ ಕಟ್ಟಡಗಳ ನಿರ್ಮಾಣ, ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನದ ನಿರೀಕ್ಷೆ ಇದೆ.

    ಸಮಗ್ರ ನೀರಾವರಿ ಯೋಜನೆ:ಬಯಲು ಸೀಮೆ ಭಾಗದ ಪ್ರಮುಖ ಬೇಡಿಕೆ ಸಮಗ್ರ ಶಾಶ್ವತ ನೀರಾವರಿ ಯೋಜನೆ. ಎರಡು ವರ್ಷಗಳಿಂದಲೂ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಹರಿಸುವ ಭರವಸೆಗಳು ಕೇಳಿ ಬರುತ್ತಿವೆ. ಎರಡು ರಾಜ್ಯಗಳ ನಡುವೆ ಮಾತುಕತೆಯ ಹಂತದಲ್ಲಿ ಉಳಿದಿದೆ. ಅನುಷ್ಠಾನದ ವಿಚಾರವಾಗಿ ಬಜೆಟ್‌ನಲ್ಲಿ ಪ್ರಸ್ತಾಪದ ನಿರೀಕ್ಷೆ ಇಲ್ಲ. ಆದರೆ, ಈಗಾಗಲೇ ಜಿಲ್ಲೆಯ 44 ಕೆರೆಗಳಿಗೆ ನೀರುಣಿಸುವ ಎಚ್.ಎನ್.ವ್ಯಾಲಿ ಯೋಜನೆಯ ಅಭಿವೃದ್ಧಿ ಕೆಲಸ, 24 ಟಿಎಂಸಿ ನೀರು ಒದಗಿಸುವ ಎತ್ತಿನಹೊಳೆ ನೀರಾವರಿ ಯೋಜನೆಯು ಅಗತ್ಯ ಭೂಸ್ವಾಧೀನ ಮತ್ತು ವಿವಿಧ ಕಾಮಗಾರಿಗಳ ನಿರ್ವಹಣೆಗೆ ತುರ್ತಾಗಿ ಕನಿಷ್ಠ 5ರಿಂದ 8 ಸಾವಿರ ರೂ. ಮೊದಲ ಹಂತದಲ್ಲಿ ಹಣ ಬಿಡುಗಡೆಯ ಜತೆಗೆ ನೀರಾವರಿ ಯೋಜನೆಗಳಿಗೆ ಚುರುಕು ನೀಡುವ ನಿಟ್ಟಿನಲ್ಲಿ ಪೂರಕವಾದ ಬಜೆಟ್ ಅಗತ್ಯವಿದೆ.

    ಕೈಗಾರಿಕೆಗಳ ಅಭಿವೃದ್ಧಿ:ಬೆಂಗಳೂರು ಮಹಾನಗರಕ್ಕೆ ಸಮೀಪದಲ್ಲಿರುವ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಯ ಮೂಲಕ ಉದ್ಯೋಗಾವಕಾಶ ಹೆಚ್ಚಿಸಬೇಕಾಗಿದೆ. ಬಾಗೇಪಲ್ಲಿ, ಗೌರಿಬಿದನೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟದಲ್ಲಿ ಕೈಗಾರಿಕಾ ವಲಯ ಪ್ರದೇಶಗಳನ್ನು ಗುರುತಿಸಲಾಗಿದೆ. ಭೂ ಸ್ವಾಧೀನ, ಕೈಗಾರಿಕೆಗಳ ಮಂಜೂರಾತಿಯು ಆಮೆಗತಿಯಲ್ಲಿದೆ. ಮೊಬೈಲ್ ಬಿಡಿ ಭಾಗಗಳ ತಯಾರು ಘಟಕ ಘೋಷಣೆಯಲ್ಲಿದೆ. ಸಚಿವ ಡಾ ಕೆ.ಸುಧಾಕರ್ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ, ಕನಿಷ್ಠ 50 ಮಂದಿಗೆ ಉದ್ಯೋಗ ನೀಡುವ ಘೋಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಜೆಟ್ ಮೂಲಕ ಪ್ರೋತ್ಸಾಹ ಮತ್ತು ಪ್ರಗತಿದಾಯಕ ಕೆಲಸಗಳು ಪ್ರಾರಂಭವಾಗಬೇಕಾಗಿದೆ.

    ಆರೋಗ್ಯ ಕ್ಷೇತ್ರ ಮತ್ತಷ್ಟು ಸುಧಾರಣೆ:ಸುಧಾಕರ್ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಆಗಿದ್ದು, 625 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಮಾನವ ಸಂಪನ್ಮೂಲ, ಮೂಲಸೌಕರ್ಯಕ್ಕೆ ವಿಶೇಷ ಅನುದಾನದ ಅಗತ್ಯವಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ ಮತ್ತು ಖಾಲಿ ಹುದ್ದೆಗಳ ಭರ್ತಿಯ ಮೂಲಕ ಜಿಲ್ಲೆಯ ಆರೋಗ್ಯ ಕ್ಷೇತ್ರ ಮತ್ತಷ್ಟು ಸುಧಾರಣೆಯಾಗಬೇಕಾಗಿದೆ.

    ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ: ಜಿಲ್ಲೆಯು ರೇಷ್ಮೆ, ಹಾಲು, ಹೂವು ಮತ್ತು ಹಣ್ಣಿಗೆ ಹೆಸರುವಾಸಿ. ದ್ರಾಕ್ಷಿ ಪ್ರೋತ್ಸಾಹಕ್ಕೆ ವೈನ್ ಯಾರ್ಡ್, ರೇಷ್ಮೆಯ ಉತ್ಪನ್ನ, ಸ್ವಸಹಾಯ ಸಂಘಗಳ ತಯಾರಿಕೆಯ ಆಹಾರ ಪದಾರ್ಥಗಳು ಮತ್ತು ಮನರಂಜನಾತ್ಮಕ ವಸ್ತುಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ವ್ಯಾಪಾರ ಪ್ರಚಾರದ ಮೂಲಕ ಜಿಲ್ಲೆಯ ವಿಶೇಷ ಉತ್ಪನ್ನಕ್ಕೆ ಹೆಚ್ಚಿನ ಮನ್ನಣೆ ದೊರಕಿಸಿಕೊಡಬೇಕಾಗಿದೆ.

    ಪ್ರವಾಸೋದ್ಯಮದ ಅಭಿವೃದ್ಧಿ:ನಂದಿ ಗಿರಿಧಾಮ, ರಂಗಸ್ಥಳ, ತಯಕಾಯಲಬೆಟ್ಟ, ಗುಮ್ಮನಾಯಕನಪಾಳ್ಯ, ಪಾಪಾಘ್ನಿ, ಆವುಲಬೆಟ್ಟ ಸೇರಿ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ತಾಣಗಳಿವೆ. ಇಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಅಭಿವೃದ್ಧಿ ಕೆಲಸಗಳಿಂದ ಪ್ರವಾಸಿಗರನ್ನು ಆಕರ್ಷಿಸಬೇಕಾಗಿದೆ. ನಂದಿ ಬೆಟ್ಟಕ್ಕೆ ರೋಪ್ ವೇ ಅಳವಡಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಇತರೆ ತಾಣಗಳಲ್ಲೂ ವಿಶೇಷ ಯೋಜನೆ ರೂಪಿಸಬೇಕಾಗಿದೆ.

    ಪ್ರಮುಖ ಇತರ ಬೇಡಿಕೆಗಳು

    • ಜಿಲ್ಲಾ ಕೇಂದ್ರವನ್ನು ಉಪ ನಗರವಾಗಿ ಘೋಷಣೆ
    • ಸಮಗ್ರ ಶಾಶ್ವತ ನೀರಾವರಿ ಯೋಜನೆ
    • ಪ್ರವಾಸೋದ್ಯಮ ಅಭಿವೃದ್ಧಿಗೆ ನಂದಿ ಅಭಿವೃದ್ಧಿ ಪ್ರಾಧಿಕಾರ ರಚನೆ
    • ಕೈಗಾರಿಕಾ ವಲಯಗಳಿಗೆ ಆದ್ಯತೆ
    • ದ್ರಾಕ್ಷಿ ಬೆಳೆಗಾರರ ಪ್ರೋತ್ಸಾಹಕ್ಕೆ ವೈನ್ ಯಾರ್ಡ್ ಸ್ಥಾಪನೆ
    • ಕೆರೆಗಳ ಅಭಿವೃದ್ಧಿ, ಅಂತರ್ಜಲ ಮಟ್ಟ ಸುಧಾರಣೆಗೆ ವಿಶೇಷ ಅನುದಾನ
    • ನಗರ, ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
    • ಚೇಳೂರು ಮತ್ತು ಮಂಚೇನಹಳ್ಳಿ ಹೊಸ ತಾಲೂಕು ಅಭಿವೃದ್ಧಿ
    • ಸಾದಲಿ ಹೋಬಳಿಯನ್ನು ಹೊಸ ತಾಲೂಕಾಗಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts