More

    ಜಿಲ್ಲೆಗೆ ಬಂಪರ್ ಕೊಡುಗೆ ನಿರೀಕ್ಷೆ; ಎತ್ತಿನಹೊಳೆ ಯೋಜನೆಯ ವೇಗ ಹೆಚ್ಚಳ 

    ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ ದಿನಗಣನೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್‌ನಲ್ಲಿ ಜನಪರ ಯೋಜನೆಗಳ ಘೋಷಣೆಗಳ ನಿರೀಕ್ಷೆ ಜತೆಗೆ ಈ ಬಾರಿ ಸಹಜವಾಗಿ ಜಿಲ್ಲೆಗೂ ಬಂಪರ್ ಕೊಡುಗೆಗಳು ಹರಿದುಬರಲಿವೆ ಎಂಬ ಆಸೆಕಂಗಳಲ್ಲಿ ಜನ ನೋಡುವಂತಾಗಿದೆ.

    ಕೇಂದ್ರ ಸರ್ಕಾರವು ಭದ್ರಾ ಮೇಲ್ಡಂಡೆ ಯೋಜನೆಗೆ 5300 ಕೋಟಿ ರೂ., ಅನುದಾನ ನೀಡಿರುವುದರಿಂದ ಎತ್ತಿನಹೊಳೆ ಯೋಜನೆ ತ್ವರಿತಗೊಳಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಜಿಲ್ಲೆಗೆ ಆದ್ಯತೆ ಸಿಗಲಿದೆ.

    ಜಿಲ್ಲೆಯಲ್ಲಿ ಹಾಲಿ 5 ಶಾಸಕರನ್ನು ಹೊಂದಿರುವ ಬಿಜೆಪಿಗೆ ಈ ಸ್ಥಾನಗಳನ್ನು ಉಳಿಸಿಕೊಳ್ಳುವ ಜತೆಗೆ ಇನ್ನೆರಡು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದೊಂದಿಗೆ ಜನತೆಗೆ ಬಜೆಟ್‌ನಲ್ಲಿ ಬೊಮ್ಮಾಯಿ ಮ್ಯಾಜಿಕ್ ದಂಡ ಪ್ರಯೋಗಿಸಿ ಉಡುಗೊರೆ ನೀಡಲಿದ್ದಾರೆಯೇ ಎಂಬುದು ಜನತೆಯ ನಿರೀಕ್ಷೆಯಾಗಿದೆ.

    ಕೈಗಾರಿಕೆ ಹಾಗೂ ಔದ್ಯೋಗಿಕ ವಲಯಕ್ಕೆ ಪ್ರಾಶಸ್ತ್ಯವೆನಿಸಿರುವ ಶೈಕ್ಷಣಿಕ ಜಿಲ್ಲೆ ತುಮಕೂರಿನಲ್ಲಿ ಮೂಲ ಸಂಪನ್ಮೂಲಗಳನ್ನು ಹೊಂದಿದ್ದು, ಸಾರ್ವತ್ರಿಕ ಚುನಾವಣೆ ಹತ್ತಿರವಿರುವುದರಿಂದ ಬೊಮ್ಮಾಯಿ ‘ಸಿಹಿ’ಯನ್ನು ಹಂಚಿ ಮತದಾರರ ಮನಗೆಲ್ಲುವ ಸಾಧ್ಯತೆಗಳಿವೆ. ಹೊಸ ಯೋಜನೆಗಳಿಗಿಂತ ಘೋಷಣೆ ಆಗಿರುವ ಹಳೆಯ ಯೋಜನೆಗಳಿಗೆ ಬಜೆಟ್‌ನಲ್ಲಿ ಕಾಯಕಲ್ಪ ಸಿಗಲಿದೆಯೇ ಎಂಬುದು ಉದ್ಯಮಿಗಳ ಲೆಕ್ಕಾಚಾರವಾಗಿದೆ.

    ಕರೊನಾ ಸಂಕಷ್ಟ ಸಂವತ್ಸರ ಬಳಿಕ ಚೇತರಿಕೆ ಹಾದಿಯಲ್ಲಿ ಸಾಗುತ್ತಿದ್ದು, ಪ್ರಗತಿಯ ಹೆಜ್ಜೆಗೆ ಘೋಷಣೆ ಆಗಿರುವ ಯೋಜನೆಗಳಿಗೆ ಇನ್ನಷ್ಟು ಶಕ್ತಿತುಂಬವ ಕೆಲಸ ಆಗಬೇಕಿದೆ. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಲಾಗಿದ್ದ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ವಿಶ್ವವಿದ್ಯಾಲಯ, ಸ್ಪೋರ್ಟ್ಸ್ ಹಾಗೂ ಫಿಟ್ನೆಸ್ ಉಪಕರಣಗಳ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಇಸ್ರೇಲ್ ಮಾದರಿ ನೀರಾವರಿ ಯೋಜನೆಗಳು ಟೇಕಾಫ್ ಆಗುವಂತೆ ಕಾಣುತ್ತಿಲ್ಲ. ಹೊಸ ಯೋಜನೆಗಳಿಗಿಂತ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಆದ್ಯತೆಯನ್ನಾಗಿ ಪರಿಗಣಿಸಬಹುದೆಂಬ ನಿರೀಕ್ಷೆಯಿದೆ.

    ಮೆಟ್ರೋ ವಿಸ್ತರಣೆ: ವಿಶ್ವಭೂಪಟದಲ್ಲಿ ಜಿಲ್ಲೆಯ ಛಾಪು ಮೂಡಿಸಿರುವ ಎಚ್‌ಎಎಲ್ ಹೆಲಿಕಾಪ್ಟರ್ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಕೌಶಾಲಾಭಿವೃದ್ಧಿಗೆ ಹೆಚ್ಚಿನ ಗಮನಹರಿಸಬೇಕಿದೆ. ಅಲ್ಲದೆ, ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕಿದೆ. ಇದರ ಜತೆಗೆ ತುಮಕೂರಿಗೆ ಮೆಟ್ರೋ ವಿಸ್ತರಣೆ, ವಿಮಾನ ನಿಲ್ದಾಣ ಘೋಷಣೆ ನಿರೀಕ್ಷೆ ಕೈಗಾರಿಕೋದ್ಯಮಿಗಳದ್ದಾಗಿದೆ. ದಾವಣಗೆರೆ-ತುಮಕೂರು ಹಾಗೂ ರಾಯದುರ್ಗ-ತುಮಕೂರು ರೈಲ್ವೆ ಕಾಮಗಾರಿಗೆ ರಾಜ್ಯ ಸರ್ಕಾರದ ಪಾಲನ್ನು ಈ ಬಜೆಟ್‌ನಲ್ಲಿ ಮುಡುಪಾಗಿಡುವ ಮತ್ತು ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇಗೆ ಹೆಚ್ಚಿನ ನಿರೀಕ್ಷೆಗಳು ಬಜೆಟ್‌ನಲ್ಲಿವೆ.

    ಬಜೆಟ್ ನಿರೀಕ್ಷೆಗಳು

    • ತುಮಕೂರಿಗೆ ಮೆಟ್ರೋ ವಿಸ್ತರಣೆ
    •  ವಿಮಾನನಿಲ್ದಾಣ ಘೋಷಣೆ
    •  ವಿವಿ ಹೊಸ ಕ್ಯಾಂಪಸ್‌ಗೆ ಹೆಚ್ಚಿನ ಅನುದಾನ
    •  ಹೊಸ ತಾಲೂಕುಗಳ ಘೋಷಣೆ
    • ಜಾಕ್‌ಫ್ರೂಟ್ ಪಾರ್ಕ್
    • ಇಎಸ್‌ಐ ಆಸ್ಪತ್ರೆ ಕನಸು
    • ಸರ್ಕಾರಿ ಇಂಜಿನಿಯರಿಂಗ್ ಕಾಲೇಜು
    • ಹುಣಸೆಹಣ್ಣಿನ ಕೋಲ್ಡ್ ಸ್ಟೋರೇಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts