More

    ಪ್ರಧಾನಿ ಮಗ ಸಿಎಂ ಆಗುವುದು ದೊಡ್ಡದಲ್ಲ, ಸಾಮಾನ್ಯ ಕಾರ್ಯಕರ್ತ ಸಚಿವನಾಗುವುದು ಮುಖ್ಯ: ಮಾಜಿ ಸಿಎಂಗೆ ಶ್ರೀರಾಮುಲು ತಿರುಗೇಟು

    ಉಡುಪಿ: ಪ್ರಧಾನಮಂತ್ರಿಯ ಮಗ ಮುಖ್ಯಮಂತ್ರಿಯಾಗುವುದು ದೊಡ್ಡ ವಿಚಾರ ಅಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತಾ ಬೆಳೆದು ಸಚಿವನಾಗುವುದು ಮುಖ್ಯ ಎಂದು ಶ್ರೀರಾಮುಲು ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

    ಶ್ರೀರಾಮುಲು ಏನು ಅನ್ನುವುದು ರಾಜ್ಯದ ಜನರಿಗೆ ತಿಳಿದಿದೆ. ಐದು ಬಾರಿ ಶಾಸಕನಾಗಿ, ಒಂದು ಬಾರಿ ಸಂಸದನಾಗಿ, ಮೂರು ಬಾರಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಕುಮಾರಸ್ವಾಮಿಯ ಮಟ್ಟಕ್ಕೆ ಇಳಿದು ಮಾತನಾಡಲು ನಾನು ಸಿದ್ಧನಿಲ್ಲ. ಅವರು ಬಂಗಾರದ ಚಮಚ ಬಾಯಿಯಲ್ಲಿ ಇಟ್ಟುಕೊಂಡೇ ಹುಟ್ಟಿದವರು ಎಂದರು.

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೇನು ಅಸಮಾಧಾನವಿಲ್ಲ. ನಾನು ಮಗಳ ಮದುವೆಯ ಸಿದ್ಧತೆಯಲ್ಲಿದ್ದೇನೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೆ ಓಡಾಡಿ ಕಾರ್ಯಕರ್ತರಿಗೆ ಆಹ್ವಾನ ನೀಡುತ್ತಿದ್ದೇನೆ.

    ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಇರುವುದು ಹೌದು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿಯನ್ನು ನಾವು ಅರಿತುಕೊಳ್ಳಬೇಕಿದೆ. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಪಕ್ಷ ನನ್ನನ್ನು ಗುರುತಿಸುತ್ತೆ ಎಂಬ ನಂಬಿಕೆ ಇದೆ. ಯಡಿಯೂರಪ್ಪನವರ ಮೇಲೆ ನಮಗೆ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅಧಿಕಾರ ಕಳೆದು ಹೋದ ಮೇಲೆ ಉಗ್ರಪ್ಪ ಅವರು ಹತಾಶರಾಗಿದ್ದಾರೆ. ತನ್ನ ಜೊತೆಗಿದ್ದ ಶಾಸಕರು ಬಿಜೆಪಿಯಲ್ಲಿ ಸಚಿವರಾಗಿರುವುದು ಅವರಿಂದ ನೋಡಲಾಗುತ್ತಿಲ್ಲ. ಅವರ ಹೊಟ್ಟೆ ಉರಿಯ ಬಗ್ಗೆ ನನಗೆ ಮರುಕವಿದೆ ಎಂದು ಟಾಂಗ್​ ನೀಡಿದರು.

    ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ಮಗಳ ಮದುವೆ ಆಮಂತ್ರಣ ಪತ್ರವನ್ನು ದೇವರ ಮುಂದಿಟ್ಟು ಪೂಜೆ ನೆರವೇರಿಸಿದರು. ಬಳಿಕ ಆದಮಾರು ಶ್ರೀಗಳು ಸಚಿವರಿಗೆ ರಾಜಾಂಗಣದಲ್ಲಿ ಗೌರವ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts