More

    ಸೆಂಟರ್ ಫಾರ್ ಹೆಲ್ತ್ ಎಕ್ಸಲೆನ್ಸ್ ಸ್ಥಾಪನೆ

    ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ ಸೇವೆ ಸುಧಾರಣೆ ಜತೆಗೆ ಕಾಲಕಾಲಕ್ಕೆ ಅಗತ್ಯವಿರುವ ಸಂಶೋಧನೆ ನಡೆಸಲು ಸಹಕಾರಿಯಾಗುವಂತೆ ಕಲಬುರಗಿಯಲ್ಲಿ ಸೆಂಟರ್ ಆಫ್ ಹೆಲ್ತ್ ಎಕ್ಸಲೆನ್ಸ್ ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

    ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ೫೫.೨೮ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧನಿಕ ಸಲಕರಣೆಗೊಂದಿಗೆ ನಿರ್ಮಿಸಿರುವ ಟ್ರಾಮಾ ಸೆಂಟರ್ (ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ) ಅನ್ನು ಶನಿವಾರ ಉದ್ಘಾಟಿಸಿದ ಅವರು, ಕೇಂದ್ರದ ಕಾರ್ಯಶೈಲಿ ಕುರಿತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜತೆ ಚರ್ಚಿಸಿ ಸೂಕ್ತ ಹೆಜ್ಜೆ ಇಡಲಾಗುವುದು ಎಂದರು.

    ಈ ಭಾಗದ ಬಡವರ ಆರೋಗ್ಯ ಸೇವೆಗೆ ಹೈದರಾಬಾದ್, ಬೆಂಗಳೂರು, ಸೊಲ್ಲಾಪುರಗೆ ಹೋಗುವುದನ್ನು ತಪ್ಪಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಹೈಟೆಕ್ ಚಿಕಿತ್ಸೆ ಕೊಡಿಸುವ ಸಂಕಲ್ಪದ ಭಾಗವಾಗಿ ಟ್ರಾಮಾ ಸೆಂಟರ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈದ್ಯಕೀಯ ಸವಲತ್ತು ಕಲ್ಪಿಸುವುದಾಗಿ ಭರವಸೆ ನೀಡಿದರು.

    ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಟ್ರಾಮಾ ಸೆಂಟರ್‌ಗೆ ಅಡಿಗಲ್ಲು ಹಾಕಲಾಗಿತ್ತು. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದ್ದರು. ಐದು ವರ್ಷವಾದರೂ ಸಲಕರಣೆ ಅಳವಡಿಸಿ ಸೇವೆಗೆ ಸಮರ್ಪಿಸುವ ಕೆಲಸ ಹಿಂದಿನವರು ಮಾಡಿಲ್ಲ. ಆರಂಭಿಸಲು ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಆಡಳಿತ ನಡೆಸುವವರಲ್ಲಿ ಮಾತೃ ಹೃದಯ ಇರಬೇಕು ಎನ್ನುವ ಮೂಲಕ ವಿಪಕ್ಷದವರ ಕಾಲೆಳೆದರು.
    ಇಎಸ್‌ಐಸಿ, ಜಯದೇವ ಆಸ್ಪತ್ರೆ, ನವೀಕೃತ ಕಿದ್ವಾಯಿ ಆಸ್ಪತ್ರೆ ಆರಂಭಿಸುವ ಮೂಲಕ ಕಲಬುರಗಿ ಮೆಡಿಕಲ್ ಹಬ್ ಮಾಡಲಾಗಿದೆ. ೩೭೧(ಜೆ) ಜಾರಿಯಿಂದ ಸಾಕಷ್ಟು ಅನುವು ಆಗಿದೆ. ಜನಪರ ಕೆಲಸ ಮಾಡಿದವರನ್ನು ಜನರು ಗುರುತಿಸಿ ಬೆಂಬಲಿಸಬೇಕು ಎಂದು ಕೋರಿದರು.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಹಿಂದೆ ನಾನು ವೈದ್ಯಕೀಯ ಸಚಿವನಾಗಿದ್ದಾಗ ಟ್ರಾಮಾ ಸೆಂಟರ್ ಉದ್ಘಾಟಿಸಿ ಕಾರ್ಯರಂಭಕ್ಕೆ ಹಣ ಮೀಸಲಿಟ್ಟರೂ ನಂತರ ಬಂದ ಸರ್ಕಾರ ಆರಂಭಿಸಲಿಲ್ಲ. ಅನೇಕ ಸಲ ಪತ್ರ ಬರೆದರೂ ಪ್ರಯೋಜವಾಗಲಿಲ್ಲ. ಈಗ ಅದನ್ನು ಆರಂಭಿಸುವ ಯೋಗಾಯೋಗ ನನಗೆ ಕೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಜಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ.ಶಿವಕುಮಾರ ಸಿ.ಆರ್. ಮಾತನಾಡಿ, ೧೦೦ ಹಾಸಿಗೆಯ ಟ್ರಾಮಾ ಸೆಂಟರ್‌ನಲ್ಲಿ ಅತ್ಯಾಧುನಿಕ ಎಂಆರ್‌ಐ, ಸಿಟಿ. ಸ್ಕ್ಯಾನಿಂಗ್ ಸೇರಿ ಎಲ್ಲ ಸೌಲಭ್ಯಗಳಿವೆ. ಆರು ಶಸ್ತ್ರಚಿಕಿತ್ಸಾ ಮಂದಿರಗಳಿವೆ. ೨೦ ಹಾಸಿಗೆ ಐಸಿಯು, ೩೦ ಹಾಸಿಗೆ ಮಾಸ್ ಕ್ಯಾಜುವಲ್ಟಿ, ೪೦ ಜನರಲ್ ವಾರ್ಡ್​ ಮೀಸಲಿರಿಸಿದೆ. ಮಹಿಳೆಯರಿಗೆ ಪ್ರತ್ಯೇಕ ವಾರ್ಡ್, ಅತ್ಯಾಧುನಿಕ ಬ್ಯಾಟರಿಚಾಲಿತ ಆಂಬುಲೆನ್ಸ್​ಗಳಿವೆ ಎಂದು ತಿಳಿಸಿದರು.

    ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಕನೀಜ್ ಫಾತಿಮಾ, ಎಂ.ವೈ. ಪಾಟೀಲ್, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್, ತಿಪ್ಪಣ್ಣಪ್ಪ ಕಮಕನೂರ, ಡಿಸಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಆರ್.ಚೇತನ್, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ, ಜಿಲ್ಲಾ ಶಸ್ತ್ರಜ್ಞ ಡಾ.ಅಂಬಾರಾಯ ರುದ್ರವಾಡಿ, ಟ್ರಾಮಾ ಸೆಂಟರ್ ಮೆಡಿಕಲ್ ಅಧಿಕಾರಿ ಡಾ.ರಾಜಶೇಖರ ಮಾಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಇತರರಿದ್ದರು.

    ಜಿಮ್ಸ್ ನಿರ್ದೇಶಕ ಡಾ.ಎಸ್.ಆರ್. ಉಮೇಶ ಸ್ವಾಗತಿಸಿದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಹರಸಣಗಿ ವಂದಿಸಿದರು. ಡಾ.ಶ್ರೀಕಾಂತ ಫುಲಾರಿ ನಿರೂಪಣೆ ಮಾಡಿದರು.

    ಕಲಬುರಗಿಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ನಿಮ್ಹಾನ್ಸ್ ಶಾಖೆ ಸ್ಥಾಪನೆ: ಕಲಬುರಗಿ : ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಮಕ್ಕಳ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಶಾಖೆಗಳನ್ನು ಕಲಬುರಗಿಯಲ್ಲಿ ಆರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಪ್ರಕಟಿಸಿದರು. ಟ್ರಾಮಾ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕದ ಕಲಬುರಗಿ ನಗರ ಹೆಲ್ತ್ ಹಬ್ ಆಗಿ ಬೆಳೆಯುತ್ತಿದೆ. ಜಯದೇವ ಹೃದ್ರೋಗ ಸೇರಿ ಪ್ರಮುಖ ಆಸ್ಪತ್ರೆಗಳಿವೆ. ಈ ಎರಡು ಆಸ್ಪತ್ರೆಗಳ ಶಾಖೆ ಆರಂಭಿಸುವುದರಿಂದ ಜನರಿಗೆ ಅನುವು ಆಗಲಿದೆ. ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಶೀಘ್ರ ಅನುಮೋದನೆ ಸಿಗಲಿದೆ ಎಂದರು. ಕಲಬುರಗಿಯಲ್ಲಿ ೧೧೯ ಕೋಟಿ ರೂ. ವೆಚ್ಚದ ೧೫೦ ಹಾಸಿಗೆಗಳ ಹೊಸ ಕಿದ್ವಾಯಿ ಆಸ್ಪತ್ರೆ, ಬಳ್ಳಾರಿಯಲ್ಲಿ ಟ್ರಾಮಾ ಸೆಂಟರ್, ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುವುದು. ಬೆಳಗಾವಿ ಮತ್ತು ಮೈಸೂರಿನಲ್ಲಿ ಟ್ರಾಮಾ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದರು.

    ೧೦೮ ಖಾಸಗಿ ಆಸ್ಪತ್ರೆಗೆ ಹೋದ್ರೆ ಚಾಲಕ ಸಸ್ಪೆಂಡ್: ಜಿಲ್ಲೆಯಲ್ಲಿ ೧೦೮ ಆಂಬುಲೆನ್ಸ್ಗಳು ಅಪಘಾತಗಳಲ್ಲಿ ಗಾಯಗೊಂಡವರನ್ನು ಸರ್ಕಾರಿ ಬದಲಿಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂಥ ರ‍್ಯಾಕೆಟ್ (ಜಾಲ)ವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ಮುಂದೆ ಅದಕ್ಕೆ ಕಡಿವಾಣ ಹಾಕುವುದಾಗಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂಥ ಆಂಬುಲೆನ್ಸ್ ಚಾಲಕರನ್ನು ಸಸ್ಪೆಂಡ್ ಮಾತ್ರವಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು. ಇನ್ಮುಂದೆ ಜಿಲ್ಲೆಯಲ್ಲಿ ಎಲ್ಲೇ ಅಪಘಾತವಾದರೂ ಟ್ರಾಮಾ ಸೆಂಟರ್‌ಗೆ ರೋಗಿ ಬರುವಂತಾಗಬೇಕು. ಈ ಕುರಿತು ಸುತ್ತೋಲೆ ಹೊರಡಿಸಲು ಡಿಎಚ್‌ಒಗೆ ಸೂಚಿಸಿದರು. ಜಿಲ್ಲೆಯಲ್ಲಿ ಸಣ್ಣ-ಪುಟ್ಟ ಸರ್ಜರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಬಿಲ್ ಮಾಡುತ್ತಿರುವುದರಿಂದ ಬಡವರಿಗೆ ಆರೋಗ್ಯ ಸೇವೆ ದುಬಾರಿ ಎನಿಸಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಕಾರ್ಪೋರೇಟ್ ಆಸ್ಪತ್ರೆಗೆ ಪೈಪೋಟಿ ನೀಡಲು ಇಂತಹ ಹೈಟೆಕ್ ಕೇಂದ್ರ ಆರಂಭಿಸುತ್ತಿರುವುದಾಗಿ ತಿಳಿಸಿದರು.

    ಜಿಮ್ಸ್ ಸೇರಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ಸೇರಿ ಎಲ್ಲ ಸಿಬ್ಬಂದಿ ಕಾಳಜಿಯಿಂದ ಮಾತನಾಡಿಸಿ ಕೌನ್ಸೆಲಿಂಗ್ ನಡೆಸಿ ನಿಖರವಾದ ಚಿಕಿತ್ಸೆ ನೀಡಬೇಕು. ಉತ್ತಮವಾಗಿ ಆರೈಕೆ ಮಾಡಬೇಕು. ಜಯದೇವ ಆಸ್ಪತ್ರೆ ಗುಣಮಟ್ಟದ ಸೇವೆಯಿಂದಲೇ ಯಶಸ್ವಿಯಾಗಿದೆ. ಅದೇ ರೀತಿ ಟ್ರಾಮಾ ಸೆಂಟರ್ ಯಶಸ್ಸು ಆಗುವಂತೆ ಮಾಡಿ.
    | ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವ

    ಜಿಮ್ಸ್ ಮಕ್ಕಳ ವಿಭಾಗಕ್ಕೆ ಮುಸ್ಕಾನ್ ಪ್ರಶಸ್ತಿ: ನವಜಾತ ಶಿಶು ಮಕ್ಕಳಿಗೆ ಹೈಟೆಕ್ ವೈದ್ಯಕೀಯ ಸೇವೆ ನೀಡುತ್ತಿರುವ ಜಿಮ್ಸ್ ಆಸ್ಪತ್ರೆ ಮಕ್ಕಳ ವಿಭಾಗಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಮುಸ್ಕಾನ್ ಯೋಜನೆಯಡಿ ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರ ಲಭಿಸಿದೆ. ಕಲಬುರಗಿ ಎನ್‌ಐಸಿಯು ದೇಶದಲ್ಲೇ ಮಾದರಿಯಾಗಿದೆ. ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಹರಸಣಗಿ, ಡಾ.ರೇವಣಸಿದ್ದಪ್ಪ ಸೇರಿ ಎಲ್ಲರನ್ನು ಸಚಿವರು ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts