More

    ಒಬ್ಬಂಟಿಯಾದ ಬಂಡಾಯಗಾರ ಈಶ್ವರಪ್ಪ

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಬಿಜೆಪಿ ಶುದ್ಧೀಕರಣವೇ ನನ್ನ ಗುರಿ ಎಂದು ಪದೇಪದೆ ಹೇಳುತ್ತಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಈಗ ಸಂಪೂರ್ಣ ಒಬ್ಬಂಟಿಯಾಗಿದ್ದಾರೆ. ಬಿಜೆಪಿಯ ನಾಲ್ವರು ನಾಯಕರಿಗೆ ಅನ್ಯಾಯವಾಗಿದೆ ಅದಕ್ಕಾಗಿ ನನ್ನ ಹೋರಾಟ ಎಂದ ಈಶ್ವರಪ್ಪ ಬೆನ್ನಿಗೆ ಯಾವ ನಾಯಕರೂ ನಿಂತಿಲ್ಲ.

    ಪ್ರತಾಪ್ ಸಿಂಹ, ಡಿ.ವಿ.ಸದಾನಂದ ಗೌಡರಿಗೆ ಲೋಕಸಭೆ ಟಿಕೆಟ್ ತಪ್ಪಿಸಲಾಯಿತು. ಸಿ.ಟಿ.ರವಿಗೆ ಅವಕಾಶ ಕೊಡಬಹುದಿತ್ತು. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತುಳಿಯಲಾಗುತ್ತಿದೆ. ಇವರೆಲ್ಲರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ನನ್ನ ಸ್ಪರ್ಧೆ ಎಂದು ಈಗಲೂ ಈಶ್ವರಪ್ಪ ಹೇಳುತ್ತಿದ್ದಾರೆ.
    ಇವರು ಹೆಸರಿಸಿರುವ ನಾಲ್ಕೂ ಮಂದಿ ಚಕಾರವೆತ್ತದೇ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಟ್ಟರ್ ಹಿಂದುತ್ವವಾದಿ ಸಿ.ಟಿ.ರವಿ ಗುರುವಾರ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. ಅವರು ಅಪ್ಪಿ ತಪ್ಪಿಯೂ ಈಶ್ವರಪ್ಪ ಹೆಸರು ಉಲ್ಲೇಖಿಸಲಿಲ್ಲ.
    ಯಾರ ಪರವಾಗಿ ಈಶ್ವರಪ್ಪ ಹೋರಾಟ ಆರಂಭಿಸಿದ್ದರೋ ಅವರೆಲ್ಲರೂ ನಮಗೆ ಯಾವ ಸಮಸ್ಯೆಯೂ ಆಗಿಲ್ಲ ಎಂಬಂತೆ ಬಿಜೆಪಿಯಲ್ಲಿ ಮುಂಚಿಗಿಂತಲೂ ಹೆಚ್ಚು ಸಕ್ರಿಯರಾಗಿದ್ದಾರೆ. ಒಂದು ವೇಳೆ ಅವರು ಈಶ್ವರಪ್ಪ ಬೆನ್ನಿಗೆ ನಿಂತಿದ್ದೇ ಹೌದಾಗಿದ್ದರೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿರಲಿಲ್ಲ. ಇದು ಈಶ್ವರಪ್ಪ ಒನ್‌ಮ್ಯಾನ್ ಆರ್ಮಿ ಎಂಬುದಕ್ಕೆ ಸ್ಪಷ್ಟ ನಿದರ್ಶನ.
    ಇದೆಲ್ಲ ರಾಜ್ಯ ಮಟ್ಟದ ನಾಯಕರ ಕತೆಯಾದರೆ ಜಿಲ್ಲೆಯಲ್ಲೂ ಬಿಜೆಪಿ ಶಾಸಕರಾಗಲಿ, ಮಾಜಿ ಶಾಸಕರಾಗಲಿ ಈಶ್ವರಪ್ಪ ಪ್ರಯತ್ನಕ್ಕೆ ಕೈ ಜೋಡಿಸಿಲ್ಲ. ಕೆಲ ಮಾಜಿ ಮೇಯರ್, ಮಾಜಿ ಉಪಮೇಯರ್, ಪಾಲಿಕೆಯ ಮಾಜಿ ಸದಸ್ಯರು ಅವರೊಂದಿಗೆ ಇದ್ದಾರಾದರೂ ಮುಖ್ಯವಾಗಿ ಅವರು ಯಾರ ಪರವಾಗಿ ಹೋರಾಟ ಆರಂಭಿಸಿದ್ದರೋ ಅವರ‌್ಯಾರೂ ಈ ಕಡೆಗೆ ತಲೆ ಹಾಕುತ್ತಿಲ್ಲ. ಯಾರಿಗೋ ನ್ಯಾಯ ಕೊಡಿಸಲು ಹೋಗಿ ಖುದ್ದು ಈಶ್ವರಪ್ಪ ಬಲಿಪಶುವಾಗುತ್ತಾರೆಯೇ? ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿರುವುದಂತೂ ಹೌದು.
    ಆರಂಭದಲ್ಲಿ ಸಿಂಹ ಅಪಸ್ವರ: ಮೈಸೂರಿನಲ್ಲಿ ಲೋಕಸಭೆ ಟಿಕೆಟ್ ಕೈ ತಪ್ಪಿದ ಬಳಿಕ ಪ್ರತಾಪ್ ಸಿಂಹ ಸ್ವಲ್ಪ ಮಟ್ಟಿನ ಅಸಹನೆ ತೋರಿದ್ದರು. ರಾಜಮನೆತನದವರು ಸಂಸದರಾದರೆ ಜನ ಕೈಗೆ ಸಿಗುತ್ತಾರೆಯೇ ಎಂದು ಸಾರ್ವಜನಿಕವಾಗಿ ವ್ಯಂಗ್ಯವಾಡಿದ್ದರು. ಆದರೆ ಮೂರ‌್ನಾಲ್ಕು ದಿನಗಳಲ್ಲೇ ಅವರ ವರ್ತನೆ ಬದಲಾಗಿ ಪಕ್ಷದ ಶಿಸ್ತು ನೆನಪಾಗಿತ್ತು. ಅಭ್ಯರ್ಥಿ ಯಧುವೀರರ ಜತೆ ನಿಂತರು. ಈಗ ಎಲ್ಲ ಮನಸ್ತಾಪಗಳನ್ನೂ ಮರೆತು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
    ಸಿ.ಟಿ.ರವಿ ಆ್ಯಕ್ಟೀವ್: ಮಾಜಿ ಶಾಸಕ ಸಿ.ಟಿ.ರವಿ ಕೂಡ ಲೋಕ ಕಣದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ವಿಧಾನಸಭೆ ಸೋಲಿನ ಬಳಿಕ ಬೇಸರಗೊಂಡಿದ್ದ ಅವರು ಈಗ ಎಲ್ಲವನ್ನೂ ಮರೆತಂತೆ ಕಾಣುತ್ತಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಂಡು ಮತ ಯಾಚಿಸುತ್ತಿದ್ದಾರೆ. ಸಖರಾಯಪಟ್ಟಣದ ಸಭೆಯೊಂದರಲ್ಲಿ ಮಾತನಾಡಿದ್ದ ಬಿಎಸ್‌ವೈ, ಸಿ.ಟಿ.ರವಿ ಶಾಸಕರಾಗಬೇಕಿತ್ತು. ಅವರಿಗೆ ಅನ್ಯಾಯವಾಗಿದೆ. ಪರಿಷತ್‌ಗೆ ಕಳಿಸುವ ಚಿಂತನೆ ನಡೆಸುತ್ತೇವೆ ಎಂದಿದ್ದರು. ಅದಕ್ಕೆ ಪ್ರತಿಯಾಗಿ ಸಿ.ಟಿ.ರವಿ ಕೂಡಾ ನನ್ನ ಬಿಎಸ್‌ವೈ ಬಾಂಧವ್ಯದಲ್ಲಿ ಕೆಲವರು ಹುಳಿ ಹಿಂಡಿದ್ದಾರೆ ಎನ್ನುವ ಮೂಲಕ ಮತ್ತೆ ಸಂಬಂಧ ಗಟ್ಟಿಗೊಳಿಸುವ ಮಾತನ್ನಾಡಿದ್ದಾರೆ.
    ಶೋಭಾಗೆ ಗೌಡರ ಆಶೀರ್ವಾದ: ಬೆಂಗಳೂರು ಉತ್ತರ ಕೈ ತಪ್ಪಿದ್ದರಿಂದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಸಹಜವಾಗಿಯೇ ಮುನಿಸಿಕೊಂಡಿದ್ದರು. ನನ್ನ ನಿರ್ಧಾರ ಘೋಷಿಸುತ್ತೇನೆ ಎಂದು ಎರಡು-ಮೂರು ಬಾರಿ ಘೋಷಣೆ ಮುಹೂರ್ತವನ್ನು ಮುಂದೂಡಿದರು. ಇದಾದ ಮೇಲೆ ಬೆಂಗಳೂರು ಉತ್ತರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಎಲ್ಲವೂ ಸಲೀಸಾಗಿ ನಡೆದಿದೆ. ಸದಾನಂದ ಗೌಡರು ಎಂದಿನಂತೆಯೇ ನಗುತ್ತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.
    ಯತ್ನಾಳ್ ಕೂಲ್ ಕೂಲ್:ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಮೊದಲು ದನಿ ಎತ್ತಿದ್ದೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಲೋಕಸಭೆ ಚುನಾವಣೆ ಘೋಷಣೆ ಬಳಿಕ ಅವರು ಎಲ್ಲಿಯೂ ಅಪಸ್ವರ ವ್ಯಕ್ತಪಡಿಸಿಲ್ಲ. ಉಡುಪಿ, ಉತ್ತರ ಕನ್ನಡ ಮುಂತಾದ ಬಿಜೆಪಿ ಮತದಾರರು ಹೆಚ್ಚಿರುವ ಸ್ಥಳಗಳಲ್ಲಿ ಅವರು ಪ್ರಚಾರ ಭಾಷಣವನ್ನೂ ಮಾಡಿದ್ದಾರೆ. ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಬಹುತೇಕ ಸಂದರ್ಭಗಳಲ್ಲಿ ಬಹಿರಂಗವಾಗಿಯೇ ಮಾತನಾಡುವ ಯತ್ನಾಳ್ ಈಶ್ವರಪ್ಪ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಆದರೆ ಈಶ್ವರಪ್ಪ ಮಾತ್ರ ಈಗಲೂ ಯತ್ನಾಳ್ ಅವರನ್ನು ರಾಜಕೀಯವಾಗಿ ತುಳಿಯಲಾಗಿದೆ. ಅವರಿಗೆ ಮಹತ್ವದ ಸ್ಥಾನ ಸಿಗಬೇಕಿತ್ತು ಎಂದು ಹೇಳುತ್ತಲೇ ಇದ್ದಾರೆ.
    ಪ್ರಯತ್ನ ನಡೆದಿತ್ತು:ಕೆ.ಎಸ್.ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆಯೊಂದನ್ನು ಆಯೋಜಿಸಿದ್ದರು. ಅದರ ಉದ್ಘಾಟನೆಗೆ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸುತ್ತಾರೆ ಎಂದು ಈಶ್ವರಪ್ಪ ಬೆಂಬಲಿಗರು ಹೇಳುತ್ತಿದ್ದರು. ಕೊನೆಗೂ ಯತ್ನಾಳ್ ಆಗಮನವಾಗಲೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts