More

    ಹೈಕಮಾಂಡ್ ಕೈಯಲ್ಲಿ ಅಧ್ಯಕ್ಷರ ಆಯ್ಕೆ ಚೆಂಡು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

    ತುಮಕೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

    ಸಂಕ್ರಾಂತಿ ಹಬ್ಬ ಹಾಗೂ 57ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಬುಧವಾರ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

    ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ವರಿಷ್ಠರಿಗೆ ಪ್ರತಿಯೊಂದು ಮಾಹಿತಿಯೂ ಇದೆ. ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ. ಸಂಕ್ರಾಂತಿ ನಂತರ ನಾಲ್ಕೈದು ದಿನದಲ್ಲಿ ಉತ್ತಮ ತೀರ್ಮಾನ ಹೊರಬೀಳಲಿದೆ ಎಂದರು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ, ಹೈಕಮಾಂಡ್ ತೀರ್ಮಾನ ಸ್ವಾಗತ ಮಾಡುತ್ತೇವೆ. ಪಕ್ಷ ಮುನ್ನಡೆಸಬಲ್ಲ ಯಾರಿಗೆ ಅವಕಾಶ ನೀಡಿದರೂ ಬೆಂಬಲ ನೀಡುತ್ತೇವೆ. ಸಿದ್ದರಾಮಯ್ಯ ಪಕ್ಷದ ಹಿರಿಯ, ಪ್ರಬಲ ನಾಯಕರಿದ್ದು, ಎಲ್ಲವನ್ನೂ ತಿಳಿದುಕೊಂಡು ಪ್ರಸ್ತಾವನೆ ಸಲ್ಲಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.

    ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸೇವೆ ಮಾಡುತ್ತಿದ್ದೇನೆ ಎಂದು ಖಂಡ್ರೆ ಸ್ಪಷ್ಟಪಡಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್, ರಾಷ್ಟ್ರೀಯ ಸಮಿತಿ ಸದಸ್ಯ ರಾಜಶೇಖರ್, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್‌ಕುಮಾರ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಜಿ.ಎಸ್.ಶ್ರೀಧರ್, ವಸಂತ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts