More

    ಸಸ್ಯ ಸೃಷ್ಟಿಯ ವಿದ್ಯಾದೇಗುಲ, ಪರಿಸರ ರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದ ವಿದ್ಯಾರ್ಥಿಗಳು

    ಆರ್.ಬಿ ಜಗದೀಶ್ ಕಾರ್ಕಳ
    ಅಕ್ಷರ ಜ್ಞಾನದೊಂದಿಗೆ ಸಸ್ಯ ಸೃಷ್ಟಿಯ ಪಾಠವನ್ನೂ ಹೇಳಿಕೊಡುತ್ತಿದೆ ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಹೂವು, ಹಣ್ಣು, ಔಷಧೀಯ ಗುಣ ಹೊಂದಿರುವ 115 ವಿವಿಧ ಜಾತಿಯ ಸಸ್ಯಗಳು ನೆಟ್ಟು ಪೋಷಿಸುವುದನ್ನೂ ಕಲಿಸಲಾಗುತ್ತಿದೆ.
    ಶಾಲಾ ಆವರಣದಲ್ಲಿ ಗಿಡಮೂಲಿಕೆಗಳ ಧನ್ವಂತರಿ ಆಯುರ್ವೇದ ಆರೋಗ್ಯ ವನವಿದ್ದು, 115 ಸಸಿಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ಗಿಡಗಳಿಗೆ ಹೆಸರು ಕೂಡ ಬರೆಯಲಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳೇ ಆರೈಕೆ ಮಾಡುತ್ತಿದ್ದು, ಕರೊನಾ ಸಂಕಷ್ಟದ ದಿನಗಳಲ್ಲಿ ಶಿಕ್ಷಕರೇ ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯ ಆಶಯದಂತೆ ವೃತ್ತಿ ಶಿಕ್ಷಣ ಆಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಶಿಕ್ಷಕರಲ್ಲಿದೆ. ಟೈಲರಿಂಗ್, ಭರತನಾಟ್ಯ, ಸಂಗೀತ ಹೀಗೆ ಸ್ವ ಉದ್ಯೋಗಕ್ಕೆ ಪೂರಕ ಯೋಜನೆಗಳನ್ನು ಹಾಕಿಸಿಕೊಳ್ಳುವ ಚಿಂತನೆಯೂ ಇದೆ.
    ಕೋವಿಡ್-19 ಸೋಂಕು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಲಸಿಕೆ ನೀಡುವ ಮುನ್ನ ಜನ ಮೊರೆಹೋಗಿರುವುದು ಆಯುರ್ವೇದ ಪದ್ಧತಿಗೆ. ಆಯುರ್ವೇದ ಔಷಧ ಬಳಕೆ ಶಾರೀರಿಕ ದೃಢತೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸರ್ವ ರೋಗಗಳಿಗೂ ಆಯುರ್ವೇದ ಔಷಧಗಳನ್ನೇ ಭಾರತೀಯರು ಅನುಸರಿಸುತ್ತಿದ್ದರು. ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ದೂರದೃಷ್ಟಿಯ ಕನಸು ಕಂಡವರು ಶಾಲೆಯ ಮುಖ್ಯಶಿಕ್ಷಕ ನಾಗೇಶ್.

    ಜ್ಞ್ಞಾನ ಸಂಪತ್ತಿನ ವಿಶೇಷಗಳು
    ಶಾಲೆಯ ಕೈತೋಟದಲ್ಲಿ ಹೂವು, ಬಸಳೆ ಮತ್ತಿತರ ತರಕಾರಿಗಳಿವೆ. ಗೋಡೆಗಳ ಮೇಲೆ ಪರಿಸರ ಸಂರಕ್ಷಣೆಯ ಜಾಗೃತಿ ವಾಣಿ, ತುಳುನಾಡ ವೈಭವ, ಮರ-ಗಿಡಗಳಲ್ಲಿ ಮಹಾತ್ಮರು, ಕವಿಗಳ ಹೆಸರು, ಸುಸಜ್ಜಿತ ಕಲಿಕಾ ಸಾಮಗ್ರಿ, ನಲಿಕಲಿ, ಶಿಕ್ಷಣದ ರಥ ಪುಟಾಣಿ ದೇವರುಗಳ ಮನೆಯಂಗಳದತ್ತ ವಿದ್ಯಾಗಮ ಶಿಕ್ಷಣ, ಗುಬ್ಬಚ್ಚಿ ಸ್ಪೋಕನ್, ಭಜನೆ, ಪ್ರಾರ್ಥನೆ, ನಿತ್ಯ ಸ್ಮರಣೆಗಳಿವೆ. ಬಹುಭಾಷಾ ದಿನಪತ್ರಿಕೆ ಓದು, ರೇಡಿಯೋ ವಾಕ್ ಮೊದಲಾದ ಚಟುವಟಿಕೆಗಳಿವೆ. ಹಸಿರು ಶಾಲೆ, ಉತ್ತಮ ಶಾಲೆ ಪ್ರಶಸ್ತಿ ಲಭಿಸಿದೆ.

    ಪುಸ್ತಕ ಉಡುಗೊರೆ
    ವಿದ್ಯಾರ್ಥಿಗಳು ಹುಟ್ಟುಹಬ್ಬದಂದು ಶಾಲೆಗೆ ಪುಸ್ತಕ ಉಡುಗೊರೆಯಾಗಿ ನೀಡುತ್ತಿದ್ದಾರೆ. ಸುಮಾರು 50 ಸಾವಿರದಷ್ಟು ಪುಸ್ತಕಗಳು ಇದೇ ಶಾಲೆಯ ಗ್ರಂಥಾಲಯದಲ್ಲಿ ಇದೆ. ಶಿಕ್ಷಣ ಅಭಿಮಾನಿಗಳು, ಪಾಲಕರು ಇದಕ್ಕೆ ಕೈಜೋಡಿಸಿದ್ದಾರೆ. ಬೌದ್ಧಿಕ ದೃಢತೆಯಷ್ಟೇ ಶಾರೀರಿಕ ಚಟುವಟಿಕೆಗೆ ಆದ್ಯತೆ ನೀಡುವ ಸಲುವಾಗಿ ಸೌಂಡ್ ಬಾಡಿ ಎನ್ನುವ ಆಟದ ಮೈದಾನವನ್ನು 7 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ.

    ಪರಶುರಾಮ ಕುಟೀರ
    ಪಠ್ಯ ಕಲಿಕೆ ಜತೆಗೆ ಜೀವನ ಮೌಲ್ಯ ತಿಳಿಸುವ ಕಾರ್ಯವಾಗಬೇಕೆಂದು ಹುಟ್ಟಿಕೊಂಡ ಕುಟೀರ ಶಿಕ್ಷಣಕ್ಕೆ ಪೂರಕವಾಗಿ ಗುರುಕುಲ ಮಾದರಿಯ ಪರಶುರಾಮ ಕುಟೀರ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದೆ. ಮಕ್ಕಳು, ನೆಮ್ಮದಿ, ಶಾಂತಿ, ತಾಳ್ಮೆ ಮೂಲಕ ಪಾಠ, ಪ್ರವಚನ ಆಲಿಸಿ ಬದುಕು ರೂಪಿಸಲು ನಾಲ್ಕು ಗೋಡೆಗಳಿಂದ ಹೊರಬಂದು ಕುಟೀರದೊಳಗೆ ತರಗತಿ ನಡೆಸಲಾಗುತ್ತದೆ.

    ಶಾಲೆಯ ಎಲ್ಲ ಚಟುವಟಿಕೆಗೆ ಶಿಕ್ಷಣ ಇಲಾಖೆ, ಶಾಸಕರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಮಕ್ಕಳು, ಪಾಲಕರು ದಾನಿಗಳು, ಶಿಕ್ಷಣ ಪ್ರೇಮಿಗಳು ಸಹಕರಿಸುತ್ತ ಬಂದಿದ್ದು, ಎಲ್ಲರ ಸಹಕಾರದಿಂದ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗಿದೆ.
    ನಾಗೇಶ್, ಮುಖ್ಯಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts