More

    ದೇಶದ ಬೆಳವಣಿಗೆಗೆ ಬೇಕಿದೆ ಮಹಿಳೆಯರ ಕೊಡುಗೆ

    ಶಿವಮೊಗ್ಗ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪುರುಷರಂತೆ ಮಹಿಳೆಯರೂ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಶ್ರಮಿಸಬೇಕು. ಸಾಮಾಜಿಕ ಮಟ್ಟದಲ್ಲಿ ಎದುರಾಗುವ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಅಪ್ರತಿಮ ಸಾಧನೆ ಮಾಡುವಲ್ಲಿ ಕಾರ್ಯತತ್ಪರರಾಗಬೇಕು ಎಂದು ಮಹಿಳಾ ಉದ್ಯಮಿ ಶಿಲ್ಪಾ ಗೋಪಿನಾಥ್ ಸಲಹೆ ನೀಡಿದರು.
    ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಮಹಿಳಾ ಸಬಲೀಕರಣ ಕೋಶದಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದುವಲ್ಲಿ ಅಲ್ಲಿನ ಮಾನವ ಸಂಪನ್ಮೂಲದ ಪಾತ್ರ ಪ್ರಮುಖವಾಗಿರುತ್ತದೆ. ಸಾಮಾಜಿಕ ಮಟ್ಟದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಹಿಮ್ಮೆಟ್ಟಿಸುವ ಮನೋಭಾವ, ಚಾಕಚಕ್ಯತೆ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ ಬಹುಮುಖ್ಯ ಎಂದರು.
    ಸಾಮಾಜಿಕ ಸಮತೋಲನ ಕಾಪಾಡಿಕೊಳ್ಳುವಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶ ಅಪ್ರತಿಮ ಸಾಧನೆ ಮಾಡುವಲ್ಲಿ ಪುರುಷರಂತೆ ಮಹಿಳೆಯರು ಕೂಡ ಸಮಾನ ಅವಕಾಶವನ್ನು ಹೊಂದಿದ್ದು ಅವುಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸಮಾಜದಲ್ಲಿ ಕೈಗಾರಿಕಾ, ಆರ್ಥಿಕ, ಸಾಮಾಜಿಕ, ವಾಣಿಜ್ಯ ಹಾಗೂ ಮುಂತಾದ ಎಲ್ಲ ವಲಯಗಳಲ್ಲಿ ಪ್ರಸಕ್ತ ಸ್ಥಿತಿಯಲ್ಲಿ ವಿಪುಲ ಅವಕಾಶಗಳು ಮಹಿಳೆಯರಿಗೂ ದೊರಕುತ್ತಿದ್ದು, ಅದರ ಸಫಲತೆ ಅಳವಡಿಸಿಕೊಳ್ಳುವಲ್ಲಿ ಅತ್ಯವಶ್ಯವಿರುವ ಜ್ಞಾನಾರ್ಜನೆ, ಧೈರ್ಯ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಹೊಂದಿರಬೇಕಾಗುತ್ತದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವಿ.ಚೈತನ್ಯಕುಮಾರ್, ಎಂಬಿಎ ವಿಭಾಗದ ಮುಖ್ಯಸ್ಥ ಹಾಗೂ ಮಹಿಳಾ ಸಬಲೀಕರಣ ಕೋಶದ ಮುಖ್ಯಸ್ಥ ಡಾ. ಟಿ.ಎಂ.ಪ್ರಸನ್ನಕುಮಾರ್, ಪಿಇಎಸ್‌ಐಟಿಎಂನ ಮುಖ್ಯಸ್ಥೆ ಸಿ.ಆರ್.ರಮ್ಯಾ, ಎಂಬಿಎ ವಿಭಾಗದ ಬೋಧಕ ಸಿಬ್ಬಂದಿ ಜಿ.ಎಚ್.ಜ್ಯೋತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts