More

    14, 20ರಂದು ಆಳ್ವಾಸ್ ವಿದ್ಯಾರ್ಥಿವೇತನಕ್ಕೆ ಪ್ರವೇಶ ಪರೀಕ್ಷೆ

    ಹಾಸನ : ಏ.14 ಹಾಗೂ 20ರಂದು ಆಳ್ವಾಸ್ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ ನಡೆಯಲಿದ್ದು, ಸರ್ವರಿಗೂ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ. ಸಿಬಿಎಸ್‌ಸಿ, ಐಸಿಎಸ್‌ಇ ಮತ್ತು ರಾಜ್ಯ ಪಠ್ಯಕ್ರಮದ ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ಶಾಲೆಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಸಾದ್ ಶೆಟ್ಟಿ ತಿಳಿಸಿದರು.

    ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳನ್ನು ನೀಡುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ (ಪದವಿಪೂರ್ವ) ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿ ರೂ.ಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    10ನೇ ತರಗತಿಯಲ್ಲಿ ಸಿಬಿಎಸ್‌ಸಿ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ), ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪಡೆಯಲು ಪರೀಕ್ಷೆಯನ್ನು ಬರೆಯಬಹುದು. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಹಾಗೂ ಅನನ್ಯ ಮಾದರಿಯ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.

    ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 120 ನಿಮಿಷಗಳ ಪರೀಕ್ಷೆ ಏಪ್ರಿಲ್ 14 ಹಾಗೂ 20ರಂದು ಎರಡು ದಿನ ನಡೆಯಲಿದೆ. ಸಿಬಿಎಸ್‌ಸಿ, ಐಸಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಮೂಡುಬಿದಿರೆಯ ವಿದ್ಯಾಗಿರಿ ಸುಂದರಿ ಆಳ್ವ ಆವರಣದಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆಯಬಹುದು. ಇಂಗ್ಲಿಷ್ ಮಾಧ್ಯಮದಲ್ಲಿ ಪತ್ರಿಕೆ ಇರಲಿದೆ ಎಂದರು.

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಆಯ್ಕೆಯ ಜತೆಯಲ್ಲಿ ಪ್ರತ್ಯೇಕವಾಗಿ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯುತ್ತವೆ. ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪಾಲಕರ ಜತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸಮಾಲೋಚನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಸಾದ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts