More

    ರಾಜ್ಯದಲ್ಲಿ ಹೂಡಿಕೆಗೆ ಉತ್ಸಾಹದ ಪ್ರತಿಕ್ರಿಯೆ

    ದಾವೋಸ್: ವಿಶ್ವ ಆರ್ಥಿಕ ಶೃಂಗ ಸಮಾವೇಶದ ಮೂರನೇ ದಿನವಾದ ಬುಧವಾರ ಕರ್ನಾಟಕದ ಪಾಲಿಗೆ ಫಲಪ್ರದವಾಗಿ ಪರಿಣಮಿಸಿತು. ಪ್ರತಿಷ್ಠಿತ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಆಹ್ವಾನಿಸಿದರು.

    ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ ಬಿಎಸ್​ವೈ, ಕರ್ನಾಟಕ ಸರ್ಕಾರವು ಹೂಡಿಕೆದಾರರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದೆ ಹಾಗೂ ಅಡಚಣೆಗಳನ್ನು ನಿವಾರಿಸಲಿದೆ. ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೂಡಿಕೆಗೆ ಸೂಕ್ತ ನೆರವು ಒದಗಿಸಲಿದ್ದಾರೆ ಎಂದು ತಿಳಿಸಿದರು.

    ದಸ್ಸಾ ಸಿಸ್ಟಮ್ಸ್ ಕಂಪನಿ ಉಪಾಧ್ಯಕ್ಷ ಫ್ಲಾರೆನ್ಸ್ ವರ್ಝೆಲೆನ್, ಬೆಂಗಳೂರು ಹಾಗೂ ಯಾವುದಾದರೂ ಜಿಲ್ಲೆಯಲ್ಲಿ ಎರಡು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. ನಾವು ಪ್ರತಿ ಕೇಂದ್ರದಲ್ಲಿ ಪ್ರತಿ ವರ್ಷ ತಲಾ 2,000 ಯುವಕರಿಗೆ ತರಬೇತಿ ನೀಡಿ, ದೊಡ್ಡ ಕಂಪನಿಗಳಲ್ಲಿ ಕೌಶಲಪೂರ್ಣ ಉದ್ಯೋಗ ಪಡೆಯಲು ಅರ್ಹರನ್ನಾಗಿಸಲಿದ್ದೇವೆ ಎಂದ ಅವರು, ಸ್ಮಾರ್ಟ್​ಸಿಟಿ ಯೋಜನೆಗಳಲ್ಲಿ ಯುವಕರಿಗೆ ತರಬೇತಿ ನೀಡಲು ಆಸಕ್ತರಾಗಿರುವುದಾಗಿಯೂ ತಿಳಿಸಿದರು. ಉಕ್ಕಿನ ಕೈಗಾರಿಕೆಗಳ ಉದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ಕರ್ನಾಟಕ ಪೆವಿಲಿಯನ್​ಗೆ ಆಗಮಿಸಿ ಉಕ್ಕು ಹಾಗೂ ಸೌರ ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ಚರ್ಚೆ ನಡೆಸಿದರು. ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ, ಕರ್ನಾಟಕದಲ್ಲಿ ಸರಕು ಸಾಗಾಣಿಕೆ ವಲಯದಲ್ಲಿ 2,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದರು. ಲಾಕ್​ಹೀಡ್ ಮಾರ್ಟಿನ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಅಂಬ್ರೋಸ್, ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದಲ್ಲಿ ಹೂಡಿಕೆಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು.

    ಡೆನ್ಸೊ ಉಪಾಧ್ಯಕ್ಷ ಹಿರೋಯುಕಿ ವಕಬಾಸ್ಯಿ ದೆಹಲಿಯಲ್ಲಿ ಶ್ರೇಷ್ಠತಾ ಮತ್ತು ಸಂಶೋಧನಾ ಕೇಂದ್ರವನ್ನು ದಕ್ಷಿಣ ಭಾರತದಲ್ಲಿ ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

    ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭ ದರದಲ್ಲಿ ಆರೋಗ್ಯ ಇಲಾಖೆ ಮೂಲಕ ಔಷಧ ಸರಬರಾಜು ಮಾಡಲು ಡ್ಯಾನಿಷ್​ನ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಯಾದ ನೋವೋ ನಾರ್​ಡಿಸ್ಕ್ ಮುಂದಾಗಿದೆ. ಕಂಪನಿ ಅಧ್ಯಕ್ಷ ಮತ್ತು ಸಿಇಒ ಫ್ರುಯರ್ ಗಾರ್ಡ್ ಜಾರ್​ಜೆನ್ಸನ್, ಸುಲಭ ದರದಲ್ಲಿ ಔಷಧ ಸರಬರಾಜು ಮಾಡುವುದಲ್ಲದೆ, ಕಾಯಿಲೆ ನಿಭಾಯಿಸಲು, ಅದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರದೊಂದಿಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

    ಇನ್ವೆಸ್ಟ್ ಕರ್ನಾಟಕ

    ಜಾಗತಿಕ ಹೂಡಿಕೆದಾರರ ಶೃಂಗಸಭೆ-2020 ಕರ್ಟನ್ ರೈಸರ್ ಅನ್ನು ಯಡಿಯೂರಪ್ಪ ಬುಧವಾರ ರಾತ್ರಿ ನೆರವೇರಿಸಿದರು. ಈ ಶೃಂಗಸಭೆಯು ನ.3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಮತ್ತು ಕಂಪನಿ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts