More

    ಖಾಸಗಿಗೆ ಸಮನಾದ ಸರ್ಕಾರಿ ಶಾಲೆ

     ಮಂಗಳೂರು: ಸರ್ಕಾರಿ ಶಾಲೆ ಎಂದಾಕ್ಷಣ ಕಣ್ಮುಂದೆ ಬರುವುದು ಹಂಚಿನ ಮಾಡಿನ ಕಟ್ಟಡ, ಜಗಲಿಯ ಕಂಬಗಳಲ್ಲಿ ಕೇಸರಿ ಬಿಳಿ ಹಸಿರು ಬಣ್ಣಗಳು, ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದ ಯೂನಿಫಾರಂ ಧರಿಸಿದ ವಿದ್ಯಾರ್ಥಿಗಳು. ಆದರೆ ಮಂಗಳೂರಿನ ಬೊಕ್ಕಪಟ್ಣ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರೆ ಸರ್ಕಾರಿ ಶಾಲೆಯೋ-ಖಾಸಗಿ ಶಾಲೆಯೋ ಎಂಬ ಅನುಮಾನ ಕಾಡಬಹುದು.

    1948ರಲ್ಲಿ ಆರಂಭವಾದ ಶಾಲೆಯಲ್ಲಿ ಒಂದರಿಂದ ಏಳನೇ ತನಕ ತರಗತಿಯಿದೆ. ಸುಸಜ್ಜಿತ ಕಟ್ಟಡದೊಂದಿಗೆ, ಪಾಠ-ಪಠ್ಯೇತರ ಚಟುವಟಿಕೆಗಳಲ್ಲಿ ಖಾಸಗಿ ಶಾಲೆಯನ್ನು ಮೀರಿ ಬೆಳೆದಿದೆ. ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳ ಮಾದರಿ ದಿನಕ್ಕೊಂದು ಸಮವಸ್ತ್ರ, ಕಂಪ್ಯೂಟರ್, ಸಂಗೀತ, ನೃತ್ಯ, ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಆರು ವರ್ಷದ ಹಿಂದೆ ಮುಖ್ಯಶಿಕ್ಷಕಿಯಾಗಿ ಮ್ಯಾಗ್ದಲಿನ್ ಡಿಸೋಜ ಕರ್ತವ್ಯ ನಿರ್ವಹಿಸಲು ಆರಂಭಿಸಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

    ಶಾಲಾಭಿವೃದ್ಧಿಗೆ ಹಲವರ ಸಹಕಾರ: ಸಾಫ್ಟ್‌ವೇರ್ ಸಂಸ್ಥೆ ಕಾಗ್ನಿಜೆಂಟ್ ತನ್ನ ಔಟ್‌ರೀಚ್ ಕಾರ್ಯಕ್ರಮಕ್ಕಾಗಿ ಈ ಶಾಲೆಯನ್ನು ಆಯ್ಕೆ ಮಾಡಿದೆ. ರೆನಿಟಾ ರಾಡ್ರಿಗಸ್ ನೇತೃತ್ವದ ತಂಡ ಪ್ರತಿ ವಾರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹಲವು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನೆರವಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕಾಮತ್ ಸಹಕಾರ, ಎಂಸಿಎಫ್ ಹಾಗೂ ಲಯನ್ಸ್ ಕ್ಲಬ್ ಕೊಡುಗೆಗಳನ್ನು ಶಿಕ್ಷಕರು ನೆನಪಿಸಿಕೊಳ್ಳುತ್ತಾರೆ.

    ಹಚ್ಚ ಹಸುರಿನ ಕೈತೋಟ: ಹಚ್ಚ ಹಸುರಿನ ಪರಿಸರದಲ್ಲಿರುವ ಶಾಲೆಯ ಸುತ್ತ ಕಣ್ಣಾಡಿಸಿದರೆ ತೆಂಗು, ಬಾಳೆ, ಮಾವು, ಹಲಸಿನ ಮರಗಳ ಜತೆಗೆ, ಕೈತೋಟದಲ್ಲಿ ಬೆಂಡೆ, ಬದನೆ, ಬಸಳೆ, ಪಪ್ಪಾಯಿ, ಕಬ್ಬು ಬೆಳೆದಿರುವುದು ಕಂಡು ಬರುತ್ತದೆ. ಮಧ್ಯಾಹ್ನದ ಬಿಸಿಯೂಟಕ್ಕೂ ಇದನ್ನೇ ಬಳಸುತ್ತಾರೆ. ವಿದ್ಯಾರ್ಥಿಗಳೇ ಬೆಳಗ್ಗೆ-ಸಾಯಂಕಾಲ ತೋಟಕ್ಕೆ ನೀರು ಹಾಕಿ, ಕಳೆ ಕಿತ್ತು, ಗೊಬ್ಬರ ಹಾಕಿ ಪೋಷಣೆ ಮಾಡುತ್ತಿದ್ದಾರೆ. ಎಸ್‌ಯುಪಿಡಬ್ಲುೃ ಕಾರ್ಯಕ್ರಮದಡಿ ಕೈತೋಟ ಬೆಳೆಸಲಾಗುತ್ತಿದೆ.  

    ಇಂಗ್ಲಿಷ್‌ಗೆ ಬಡ್ಡಿ ಟೀಚರ್ಸ್‌!: ಸರ್ಕಾರಿ ಶಾಲೆಯಾದರೂ ವಿದ್ಯಾರ್ಥಿಗಳು ಪಟಪಟನೆ ಇಂಗ್ಲಿಷ್ ಮಾತನಾಡುತ್ತಾರೆ. ಕಾರಣ ವಿದ್ಯಾರ್ಥಿಗಳಿಗೆ ಇಂಗಿಷ್ ಸ್ಪೀಕಿಂಗ್ ಕೋರ್ಸ್ ಕಡ್ಡಾವಾಗಿದೆ. ಮೂವರು ವಿದ್ಯಾರ್ಥಿಗಳನ್ನು ‘ಬಡ್ಡಿ ಟೀಚರ್ಸ್‌’ ಎಂದು ನೇಮಕ ಮಾಡಿದ್ದು, ಸಣ್ಣ ತರಗತಿ ಮಕ್ಕಳಿಗೆ ಅವರೇ ಕಲಿಸುತ್ತಾರೆ. ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದ್ದು, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮುಖ್ಯ ಶಿಕ್ಷಕಿಯ ಮಗ ಅನಿಲ್ ಲ್ಯಾಪ್‌ಟಾಪ್, ಸಮವಸ್ತ್ರ ಕೊಡುಗೆಯಾಗಿ ನೀಡಿದ್ದಾರೆ.
     
    ವಿದ್ಯಾರ್ಥಿಗಳ ಕೊರತೆ: ಒಂದರಿಂದ ಏಳನೇ ತರಗತಿವರೆಗೆ 43 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರು ಹಾಗೂ ಇಬ್ಬರು ಗೌರವ ಶಿಕ್ಷಕಿಯರಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳು. ಆಂಗ್ಲಮಾಧ್ಯಮ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ಮ್ಯಾಗ್ದಲಿನ್ ಟೀಚರ್.

    ಸ್ವಂತ ಖರ್ಚು ಹಾಗೂ ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇನ್ನಷ್ಟು ಅಭಿವೃದ್ಧಿಗೆ ಸರ್ಕಾರದ ಸಹಕಾರವೂ ಅಗತ್ಯವಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಮಾದರಿ ಶಾಲೆಯಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
    ಮ್ಯಾಗ್ದಲಿನ್ ಡಿಸೋಜ ಶಾಲಾ ಮುಖ್ಯಶಿಕ್ಷಕಿ
     
    ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸಹಕಾರ ಶಿಕ್ಷಕರು ನೀಡುತ್ತಾರೆ. ಇಂಗ್ಲಿಷ್ ತರಗತಿ, ಸಂಗೀತ, ಕೃಷಿ, ಆಟೋಟ ಎಲ್ಲಕ್ಕೂ ಅವಕಾಶವಿದೆ. ನಾವೇ ತೋಟ ಮಾಡಿ ಕೃಷಿ ಚಟುವಟಿಕೆ ಮಾಡುತ್ತೇವೆ. ಬೆಳೆದ ಉತ್ಪನ್ನ ಮಧ್ಯಾಹ್ನದ ಊಟಕ್ಕೆ ಉಪಯೋಗಿಸುತ್ತೇವೆ.
    ಪ್ರೀತಿ 7ನೇ ತರಗತಿ ವಿದ್ಯಾರ್ಥಿನಿ

    ಭರತ್ ಶೆಟ್ಟಿಗಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts