More

    ಇನ್ನು ಆಂಗ್ಲ ಭಾಷೆಯಲ್ಲಿ ನಲಿ-ಕಲಿ; ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ

    ಖಾಸಗಿ ಶಾಲೆಗಳ ಮಕ್ಕಳಂತೆ ಇನ್ನು ಮುಂದೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳೂ ಪ್ರಾಥಮಿಕ ಹಂತದಲ್ಲೇ ಆಂಗ್ಲಭಾಷೆ ಕಲಿಯಲಿದ್ದಾರೆ. ನಲಿ-ಕಲಿ ಯೋಜನೆ ಅನ್ವಯ 1ರಿಂದ 3ನೇ ತರಗತಿಯವರೆಗೆ ಆಂಗ್ಲ ಭಾಷೆಯಲ್ಲಿ ಕಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿರುವ ಒಂದು ಸಾವಿರ ಶಾಲೆಗಳಲ್ಲಿ ಮಕ್ಕಳಿಗೆ ಸ್ಪೆಲ್ಲಿಂಗ್ ಹೇಳಿಕೊಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಿಕೊಡಲು ಮುಂದಿನ ಶೈಕ್ಷಣಿಕ ವರ್ಷದಿಂದ ನಲಿ-ಕಲಿ ಕಾರ್ಯಕ್ರಮದಲ್ಲಿ ಆಂಗ್ಲಭಾಷೆ ಸೇರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ಹಾಜರಾತಿ ಹೆಚ್ಚಳ ಮಾಡಿ ಮಕ್ಕಳಿಗೆ ಆಟಿಕೆಗಳ ಮೂಲಕ ಶಿಕ್ಷಣ ಕಲಿಸಲು 2008-09ರಲ್ಲಿ ಆರಂಭಿಸಲಾದ ನಲಿ-ಕಲಿ ಯೋಜನೆಯಲ್ಲಿ 1 ರಿಂದ 3ನೇ ತರಗತಿಯ ಮಕ್ಕಳಿಗೆ ಕನ್ನಡ, ಗಣಿತ, ಪರಿಸರ ಅಧ್ಯಯನ ವಿಷಯಗಳನ್ನು ಹೇಳಿಕೊಡಲಾಗುತ್ತಿದೆ.

    ಪ್ರಾಯೋಗಿಕ ಯಶಸ್ಸು: 2015-16ನೇ ಸಾಲಿನಲ್ಲಿ ಯೂನಿಸೆಫ್ ಸಂಸ್ಥೆಯ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕದಡಿ ತುಮಕೂರು, ರಾಮನಗರ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 75 ಶಾಲೆಗಳಲ್ಲಿ ಮೊದಲ ಬಾರಿಗೆ ಆಂಗ್ಲ ಭಾಷೆಯಲ್ಲಿ ನಲಿ-ಕಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿತ್ತು.

    ಆನಂತರ 2019-20ನೇ ಸಾಲಿನಲ್ಲಿ 2 ಸಾವಿರ ಶಾಲೆಗಳಲ್ಲಿ ಅನುಷ್ಠಾನ ಮಾಡಲಾಯಿತು. ಈ ಎಲ್ಲ ಶಾಲೆಗಳ ಪ್ರಗತಿಯನ್ನು ಪರಿಶೀಲಿಸಿ ವರದಿ ಪಡೆದಾಗ ಉತ್ತಮ ಫಲಿತಾಂಶ ಬಂದ ಕಾರಣ ಎಲ್ಲ ಶಾಲೆಗಳಲ್ಲಿ ಇದನ್ನು ಅನುಷ್ಠಾನ ಮಾಡಲು ನಿರ್ಧರಿಸಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದಕ್ಕಾಗಿ 27 ಕೋಟಿ ರೂ.ವೆಚ್ಚ ಮಾಡುತ್ತಿದೆ. ಶಿಕ್ಷಣ ಇಲಾಖೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿರುವ 43 ಸಾವಿರ ಕನ್ನಡ ಶಾಲೆ ಮತ್ತು 5 ಸಾವಿರ ಉರ್ದು ಮಾಧ್ಯಮ ಶಾಲೆಯಲ್ಲಿ ಇದರ ಅನುಷ್ಠಾನ ಮಾಡುತ್ತಿದೆ.

    ಪಠ್ಯಕ್ರಮವೇನು?

    ಮಕ್ಕಳ ವಯಸ್ಸಿನ ಆಧಾರ ಮೇಲೆ ಅವರಿಗೆ ಸುಲಭ ಮತ್ತು ಸುಲಲಿತವಾಗಿ ಕಲಿಸಲು ಪಠ್ಯಕ್ರಮವನ್ನು ಯೂನಿಸೆಫ್ ರೂಪಿಸಿದೆ. ಇದರಲ್ಲಿ ಮಕ್ಕಳಿಗೆ ಪದ್ಯ, ಮಾತನಾಡುವಾಗ ಬಳಸುವ ಭಾಷೆ, ಸಣ್ಣ ಕತೆಗಳು, ಮಕ್ಕಳನ್ನು ಆಕರ್ಷಿಸುವ ಗೊಂಬೆಗಳು ಎಲ್ಲವೂ ಸೇರಿದೆ. ಇದಕ್ಕೆ ಪೂರಕವಾಗಿ ಆಟಿಕೆಗಳನ್ನು ರೂಪಿಸಿದೆ. ಇಲ್ಲಿ ಪಠ್ಯಪುಸ್ತಕ ಎನ್ನುವ ಬದಲಾಗಿ ವರ್ಕ್ ಬುಕ್ ಎಂದು ಕರೆಯಲಿದ್ದು, ಇದನ್ನು ಮುದ್ರಿಸಿ ನೀಡಲು ಕರ್ನಾಟಕ ಪಠ್ಯ ಪುಸ್ತಕ ಸಂಘಕ್ಕೆ ಜವಾಬ್ದಾರಿ ನೀಡಲಾಗಿದೆ.

    ಶಿಕ್ಷಕರಿಗೆ ತರಬೇತಿ

    ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಲು ಈಗಾಗಲೇ 2,700 ಶಿಕ್ಷಕರಿಗೆ ಶಿಕ್ಷಣ ಇಲಾಖೆ ತರಬೇತಿ ನೀಡಿದೆ. ಈ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿರುವ ಇತರೆ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ. ಶೀಘ್ರದಲ್ಲೇ ತರಬೇತಿ ಆರಂಭವಾಗಲಿದೆ. ಇದು ಮುಂದಿನ ಶೈಕ್ಷಣಿಕ ಅವಧಿ ಆರಂಭಕ್ಕೂ ಮುನ್ನವೇ ಮುಕ್ತಾಯವಾಗಲಿದೆ.

    ಸಂಘಟನೆ ವಿರೋಧ

    ರಾಜ್ಯ ಸರ್ಕಾರ ಒಂದು ಸಾವಿರ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವುದಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರ ಈ ನಿರ್ಧಾರ ಹಿಂಪಡೆಯಬೇಕೆಂದು ಒತ್ತಾಯಿಸಿವೆ. ಈ ಮಧ್ಯೆ ಮುಂದಿನ ವರ್ಷದಿಂದ ಪೂರ್ವ ಪ್ರಾಥಮಿಕ ಅವಧಿಯಲ್ಲೇ ಮಕ್ಕಳಿಗೆ ಆಂಗ್ಲ ಭಾಷೆಯ ನಲಿ-ಕಲಿ ಯೋಜನೆ ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆಯು ಸಾಕಷ್ಟು ಕಷ್ಟಪಡಬೇಕಿದೆ.

    | ದೇವರಾಜ್ ಎಲ್. ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts