More

    ಇಂದು ಇಂಗ್ಲೆಂಡ್ – ಶ್ರೀಲಂಕಾ ಹಣಾಹಣಿ; ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಲಂಕಾ ಪಡೆ

    ಶಾರ್ಜಾ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಶ್ರೀಲಂಕಾ ತಂಡವನ್ನು ಸೋಮವಾರ ಎದುರಿಸಲಿದೆ. ಟೂರ್ನಿಯಲ್ಲಿ ಇದುವರೆಗೂ ನಿರೀಕ್ಷಿತ ನಿರ್ವಹಣೆ ತೋರುತ್ತಾ ಬಂದಿರುವ ಇಂಗ್ಲೆಂಡ್ ತಂಡ, ಲಂಕಾ ತಂಡವನ್ನು ಮಣಿಸಿದರೆ ಮೊದಲ ಗುಂಪಿನಿಂದ ಸೆಮಿಫೈನಲ್ ಹಂತವನ್ನು ಖಚಿತಪಡಿಸಿಕೊಳ್ಳಲಿದೆ. ಮತ್ತೊಂದೆಡೆ, 2014ರ ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದ್ದು, ಸೋತರೆ ಟೂರ್ನಿಯಿಂದ ಹೊರ ಬೀಳುವ ಆತಂಕದಲ್ಲಿದೆ. ಶನಿವಾರ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಸುಲಭವಾಗಿ ಮಣಿಸಿರುವ ಇವೊಯಿನ್ ಮಾರ್ಗನ್ ಪಡೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

    * ಆಂಗ್ಲರ ಚಿತ್ತ ಸತತ 4ನೇ ಗೆಲುವಿನತ್ತ
    ಟೂರ್ನಿಯಲ್ಲಿ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಸೆಮೀಸ್ ಪ್ರವೇಶಿಸಲು ಒಂದು ಗೆಲುವಷ್ಟೇ ಅಗತ್ಯವಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠ ನಿರ್ವಹಣೆ ತೋರುತ್ತಿರುವ ಇಂಗ್ಲೆಂಡ್ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಜೋಸ್ ಬಟ್ಲರ್, ಜೇಸನ್ ರಾಯ್, ಜಾನಿ ಬೇರ್‌ಸ್ಟೋರಂಥ ಅಗ್ರಕ್ರಮಾಂಕ ಬ್ಯಾಟರ್‌ಗಳು ಲಂಕಾ ಬೌಲಿಂಗ್ ಪಡೆಗೆ ಕಂಟಕವಾದರೂ ಅಚ್ಚರಿಯಿಲ್ಲ. ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಕ್ರಿಸ್ ವೋಕ್ಸ್, ತೈಮಲ್ ಮಿಲ್ನೆ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ.

    * ಲಂಕಾಗೆ ಗೆದ್ದರಷ್ಟೇ ಉಳಿಗಾಲ
    ಮೊದಲ ಸುತ್ತಿನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್-12 ಹಂತಕ್ಕೇರಿದ ಲಂಕಾ ತಂಡ, ಟೂರ್ನಿಯಲ್ಲಿ ಉತ್ತಮ ಆರಂಭ ಕಂಡರೂ ಕಡೇ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ನಿಸ್ತೇಜ ಬೌಲಿಂಗ್‌ನಿಂದಲೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎದುರು ಸೋಲನುಭವಿಸಿತ್ತು. ಇದೀಗ ಸೆಮೀಸ್ ಹಂತಕ್ಕೇರಲು ಲಂಕಾ ಪಡೆಗೆ ಗೆಲುವಿನೊಂದಿಗೆ ಉತ್ತಮ ರನ್‌ರೇಟ್ ಕೂಡ ಅಗತ್ಯವಾಗಿದೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 12, ಇಂಗ್ಲೆಂಡ್: 8, ಶ್ರೀಲಂಕಾ: 4
    ಟಿ20 ವಿಶ್ವಕಪ್‌ನಲ್ಲಿ: 4, ಇಂಗ್ಲೆಂಡ್: 3, ಶ್ರೀಲಂಕಾ: 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts