More

    ಹಳ್ಳಿಕಾರ್ ಮಠಕ್ಕೆ ಇಂಜಿನಿಯರಿಂಗ್ ಕಾಲೇಜು; ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ 

    ತುರುವೇಕೆರೆ: ಜೆಡಿಎಸ್ ಸರ್ಕಾರ ಬಂದರೆ ಹಳ್ಳಿಕಾರ್ ಮಠಕ್ಕೆ ಇಂಜಿನಿಯರ್ ಕಾಲೇಜು ಮಂಜೂರು ಮಾಡಲಾಗುವುದು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

    ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಶನಿವಾರ ಹಳ್ಳಿಕಾರ್ ಮಠ ಉದ್ಘಾಟನೆ, ಕೃಷ್ಣ ಪ್ರತಿಮೆಗೆ ಅದಿವಾಸ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಠಕ್ಕೆ 5 ಕೋಟಿ ರೂ.ಅನುದಾನ ನೀಡಲಾಗುವುದು. ದೇವೇಗೌಡರ ರಾಜ್ಯಸಭಾ ಅನುದಾನದಲ್ಲಿ ಕೂಡಲೇ 10 ಲಕ್ಷ ರೂ., ಪುನಃ ಮೇನಲ್ಲಿ 10 ಲಕ್ಷ ರೂ., ಅನುದಾನ ನೀಡಲಾಗುವುದು ಎಂದರು.

    ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಹಳ್ಳಿಕಾರ್ ಜನಾಂಗ ನೀಡಿದ ಬೆಂಬಲ ಹಾಗೂ ಸಹಕಾರ ಎಂದಿಗೂ ಮರೆಯುವಂತಿಲ್ಲ. 1962ರಿಂದ ಇಲ್ಲಿಯವರೆಗೆ ಹಳ್ಳಿಕಾರ್ ಜನಾಂಗ ನಮ್ಮ ಕುಟುಂಬ, ನಮ್ಮ ಮನೆ ಇದ್ದಂತೆ. ಸಮುದಾಯದವರು ಸ್ವಲ್ಪ ಒರಟರಾದರೂ ಪ್ರೀತಿಸುವ ಜನ. ಮಹಾಭಾರತದಲ್ಲಿ ಶ್ರೀಕೃಷ್ಣ ಸಾರಥಿಯಾಗಿದ್ದರಿಂದಲೇ ಅರ್ಜುನನಿಗೆ ಗೆಲ್ಲಲು ಸಾಧ್ಯವಾಯಿತು. ಅದರಂತೆ ಶ್ರೀ ಕೃಷ್ಣನನ್ನು ಪೂಜಿಸುವ ಯದುಕುಲದ ಹಳ್ಳಿಕಾರ್ ಜನಾಂಗ ಜತೆಯಿದ್ದರೆ ನಮಗೆ ಗೆಲುವು
    ಖಚಿತ ಎಂಬ ನಂಬಿಕೆ ಇದೆ ಎಂದರು.

    ಮೂರನೇ ಬಾರಿಗೆ ಮುಖ್ಯಮಂತ್ರಿ: ದೇವೇಗೌಡರು ಆರೋಗ್ಯ ಸಮಸ್ಯೆ ಯಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ . ರೈತರ ಪರವಾಗಿ ಹೋರಾಟ ಮಾಡುವ
    ವ್ಯಕ್ತಿ ಅವರೊಬ್ಬರೇ. ತಮ್ಮ 60 ವರ್ಷದ ರಾಜಕೀಯ ಜೀವನದಲ್ಲಿ ಎಂದಿಗೂ ವಿಶ್ರಾಂತಿ ಪಡೆದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆನಾರೋಗ್ಯದ ನಡುವೆ ನಾಡಿನ ರೈತರಿಗಾಗಿ ಪಂಚರತ್ನ ಯಾತ್ರೆ ಮೂಲಕ ರಾಜ್ಯ ಸುತ್ತುತ್ತಿದ್ದಾರೆ. ದೇವೇಗೌಡರ ಕಣ್ಮುಂದೆ 2023 ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ಅಧಿಕಾರಕ್ಕೆ ಬರಲಿದ್ದು ಕುಮಾರಸ್ವಾಮಿ ಮೂರನೇ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ರೇವಣ್ಣ ಭವಿಷ್ಯ ನುಡಿದರು.

    ಹಳ್ಳಿಕಾರ್ ರಾಸುಗಳನ್ನು ಉಳಿಸಿ ಬೆಳೆಸುವ ಸಮುದಾಯ, ಹಾಗೂ ಮಠದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಿಸಬೇಕು ಎಂದು ಮಾಜಿ ಸಚಿವ ರೇವಣ್ಣ ಅವರಿಗೆ
    ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿದರು.

    ಕುಟುಂಬದಲ್ಲಿ ಒಡಕಿಲ್ಲ: ನಾನು ಕುಮಾರಸ್ವಾಮಿ ಚೆನ್ನಾಗಿದ್ದೇವೆ. ನಮ್ಮಕುಟುಂಬದಲ್ಲಿ ಒಡಕಿಲ್ಲ. ನಾವು ಜಗಳವಾಡುತ್ತೇವೆ ಎಂದು ಕೊಂಡವರಿಗೆ ಭ್ರಮನಿರಸನವಾಗಲಿದೆ, ಮಾಜಿ ಮುಖ್ಯಮಂತ್ರಿ ಎಲ್ಲಿ ನಿಲ್ಲಿ ಎಂದು ಹೇಳುತ್ತಾರೋ ಅಲ್ಲಿ ನಿಲ್ಲುತ್ತೇವೆ ಎಂದು ಭವಾನಿ ರೇವಣ್ಣ ಅವರ ಸ್ಪರ್ಧೆ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದರು.

    ಇಂದು ಸ್ವಾಮೀಜಿ ದೀಕ್ಷೆ: ಫೆ.12ರಂದು ಶ್ರೀಕೃಷ್ಣ ಪ್ರತಿಮೆ ಪ್ರತಿಷ್ಠಾಪನೆ, ಸ್ವಾಮೀಜಿ ಪೀಠಾರೋಹಣ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ನಾಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. ವಸತಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಭಾಗವಹಿಸಲಿದ್ದಾರೆ.

    ಉಚಿತ ಆರೋಗ್ಯ ತಪಾಸಣಾ ಶಿಬಿರ: ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ಬೆಂಗಳೂರಿನ ಸಾಗರ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಸಂಜೆ ಸಮಾರೋಪದಲ್ಲಿ ಹಳ್ಳಿಕಾರ ಇತಿಹಾಸ ಹಾಗೂ ನಡೆದು ಬಂದ ದಾರಿ ವಿಚಾರಧಾರೆ ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ ನಡೆಯಲಿದೆ.

    ಬೇರೆ ಪಕ್ಷಗಳು ಕುಟುಂಬ ರಾಜಕಾರಣ ನಿಲ್ಲಿಸಲಿ: ನಮ್ಮದು ಕುಟುಂಬ ರಾಜಕಾರಣ ಎಂದು ಹೇಳುವ ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಾನು ನಾಳೆಯೇ ಸಂಸದ ಪ್ರಜ್ವಲ್ ಅವರಿಂದ ರಾಜೀನಾಮೆ ಕೊಡಿಸುತ್ತೇನೆ. ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು ತಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದನ್ನು ನಿಲ್ಲಿಸುತ್ತಾರಾ ಹೇಳಿ?, ನಮ್ಮ ಕುಟುಂಬ ಜನರಿಂದ ನೇರವಾಗಿ ಆಯ್ಕೆಯಾಗಿ ಜನರ ಸೇವೆ ಮಾಡುತ್ತಿದೆ ಎಂದು ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

    ಹಳ್ಳಿಕಾರ್ ಮಠಕ್ಕೆ ಇಂಜಿನಿಯರಿಂಗ್ ಕಾಲೇಜು; ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ 

    ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ
    ಹಳ್ಳಿಕಾರ ಮಠದ ಸಮರ್ಪಣೆ, ಕೃಷ್ಣ ಪ್ರತಿಮೆಗೆ ಅದಿವಾಸ ಸಮರ್ಪಣಾ
    ಕಾರ್ಯಕ್ರಮದಲ್ಲಿ ಮಠಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಹಳ್ಳಿಕಾರ್
    ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

    ಮಠಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಹಳ್ಳಿಕಾರ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕೆಂಗೇರಿ ಒಂಕಾರಾಶ್ರಮದ ಮಧುಸೂದನಾನಂದಪುರಿ ಸ್ವಾಮೀಜಿ, ಬಾಲಕೃಷ್ಣಾನಂದ ಸ್ವಾಮೀಜಿ, ಆಶೀರ್ವಚನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts