More

    ನೌಕರಿ ಆಸೆಗೆ ‘ವಯೋಮಿತಿ’ ಕಂಟಕ !

    ಬೆಳಗಾವಿ: ಪೊಲೀಸ್ ಕಾನ್‌ಸ್ಟೇಬಲ್ ಆಗಬೇಕೆಂದು ಕನಸು ಕಂಡಿದ್ದ ಸಾವಿರಾರು ಆಕಾಂಕ್ಷಿಗಳ ಆಸೆಗೆ ಲಾಕ್‌ಡೌನ್ ಬರೆ ಎಳೆದಿದೆ. ಕರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಜೂನ್ 22ರ ವರೆಗೆ ಸರ್ಕಾರ ವಿಸ್ತರಣೆ ಮಾಡಿದ್ದರಿಂದ ಸಾವಿರಾರು ಪೊಲೀಸ್ ಕಾನ್‌ಸ್ಟೇಬಲ್ ಆಕಾಂಕ್ಷಿಗಳಿಗೆ ವಯೋಮಿತಿ ಮೀರುವ ಆತಂಕ ಎದುರಾಗಿದೆ.

    ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ, ಅರ್ಜಿ ಸಲ್ಲಿಕೆಗೆ ಮೇ 22 ಕೊನೆಯ ದಿನ ಎಂದು ನಿಗದಿ ಪಡಿಸಿತ್ತು. ಇದೀಗ ದಿನಾಂಕ ವಿಸ್ತರಿಸಿದ್ದರಿಂದ ಅನೇಕರಿಗೆ ಹುದ್ದೆ ತಪ್ಪಿಹೋಗುವ ಭಯ ಆವರಿಸಿದೆ.
    ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಆಧಾರದ ಮೇಲೆ ವಯೋಮಿತಿ ನಿಗದಿ ಮಾಡಿರುವುದು ಅಭ್ಯರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ.

    ಶಾಪದಂತಾದ ನಿಯಮ: ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ 1,005, ಪೊಲೀಸ್ ಕಾನ್‌ಸ್ಟೇಬಲ್ (ನಾಗರಿಕ-ಪುರುಷ) 1,510, ಪೊಲೀಸ್ ಕಾನ್‌ಸ್ಟೇಬಲ್ (ನಾಗರಿಕ-ಮಹಿಳಾ) 497 ಹುದ್ದೆಗಳಿಗೆ ಕರ್ನಾಟಕ ಸರ್ಕಾರ ಲೋಕಸೇವಾ ಆಯೋಗದ ಮೂಲಕ ನೇಮಕ ಮಾಡಿಕೊಳ್ಳಲು ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ, ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 27 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಆದರೆ, ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಹಳಷ್ಟು ಅಭ್ಯರ್ಥಿಗಳ ವಯಸ್ಸು ಜೂನ್ 1ರಿಂದ 15ಕ್ಕೆ ವಯೋಮಿತಿ ಮುಗಿಯಲಿದೆ. ಹೀಗಾಗಿ ಗೃಹ ಇಲಾಖೆ ವಿಧಿಸಿದ ಈ ನಿಯಮ ಸಾವಿರಾರು ಅಭ್ಯರ್ಥಿಗಳ ಪಾಲಿಕೆ ಶಾಪವಾಗಿ ಪರಿಣಮಿಸಿದೆ.

    ಸದ್ಯ ಸಾವಿರಾರು ರೂ. ಖರ್ಚು ಮಾಡಿ ಕೋಚಿಂಗ್ ಪಡೆದು ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರವಾಗುತ್ತಿಲ್ಲ. ವಯೋಮಿತಿ ಮೀರಲಿದೆ ಎಂಬ ಆತಂಕ ಅಭ್ಯರ್ಥಿಗಳಿಗೆ ಶುರುವಾಗಿದೆ.

    ಕೊನೆಯ ಪ್ರಯತ್ನದಲ್ಲಿ ಯಶಸ್ಸು ಕಾಣಲು ಹಂಬಲಿಸುತ್ತಿದ್ದ ಕಾನ್‌ಸ್ಟೇಬಲ್ ಆಕಾಂಕ್ಷಿಗಳ ಆಸೆ ಕಮರುತ್ತಿದೆ.

    ನಮಗೂ ವಯೋಮಿತಿ ಸಡಿಲಿಕೆ ಮಾಡಿ

    ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತ ಬಳಿಕ ರಾಜ್ಯ ಸರ್ಕಾರ ಎಸ್‌ಐ ಹುದ್ದೆ ಆಕಾಂಕ್ಷಿಗಳ ವಯೋಮಿತಿ ಸಡಿಲಿಕೆ ಮಾಡಿದೆ. ಅದೇ ಮಾದರಿಯಲ್ಲಿ ನಮಗೂ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ವಯೋಮಿತಿ ಮೀರುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ. ಜತೆಗೆ ಅರ್ಜಿ ಸಲ್ಲಿಕೆ ಆರಂಭದ ದಿನಾಂಕದ ಆಧಾರದ ಮೇಲೆ ವಯೋಮಿತಿ ಪರಿಗಣಿಸಬೇಕು ಎಂದು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ವಯೋಮಿತಿ ವಿಸ್ತರಣೆ ಮಾಡುವುದೋ? ಅಥವಾ ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕವನ್ನೇ ಪರಿಗಣಿಸುತ್ತದೆಯೋ ಎನ್ನುವುದು ಸ್ಪಷ್ಟವಾಗಬೇಕಿದೆ.

    ಜೂನ್ 1ಕ್ಕೆ ನನ್ನ ವಯಸ್ಸು 27 ಮೀರಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೋದರೆ ಸ್ವೀಕರಿಸುತ್ತಿಲ್ಲ. ಪೊಲೀಸ್ ಸಹಾಯವಾಣಿಗೆ ಸಂಪರ್ಕಿಸಿದರೆ ನಿಮ್ಮ ವಯೋಮಿತಿ ಅವಧಿ ಮೀರಿದೆ ಎನ್ನುತ್ತಿದ್ದಾರೆ. ನನ್ನಂತೆ ಅನೇಕರು ಇದೀಗ ವಯೋಮಿತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
    | ಶ್ರೀಕಾಂತ ಐಹೊಳೆ ಪೊಲೀಸ್ ಕಾನ್‌ಸ್ಟೇಬಲ್ ಆಕಾಂಕ್ಷಿ

    ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ವಯೋಮಿತಿಯಲ್ಲಿ ಒಂದು ವರ್ಷ ಸಡಿಲಿಕೆ ಮಾಡಲಾಗಿದೆ. ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡುವ ಬಗ್ಗೆ ಸರ್ಕಾರದಿಂದ ಯಾವುದೇ ನಿಯಮಾವಳಿ ಬಂದಿಲ್ಲ. ರಾಜ್ಯ ಸರ್ಕಾರವೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ.
    | ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts