More

    ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿ

    ಬಾಗಲಕೋಟೆ : ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತರ ಸಾವು-ನೋವುಗಳಿಗಿಂತ ರಸ್ತೆ ಅಪಘಾತದ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿಯಾದ ಸಂಗತಿ ಎಂದರು.

    ರಸ್ತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಎಲ್ಲಿಯೂ ರಾಜಿ ಮಾಡಿಕೊಳ್ಳುವಂತಿಲ್ಲ. ಅವೈಜ್ಞಾನಿಕ ರಸ್ತೆ ತಿರುವುಗಳು ಮತ್ತು ರಸ್ತೆ ನಿರ್ಮಾಣದಿಂದ ಅಮಾಯಕರ ಜೀವಹಾನಿ ಆದ ವರದಿಗಳಿವೆ. ಅಪಘಾತಗಳನ್ನು ತಡೆಯಲು ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಾಣ, ಗುಣಮಟ್ಟದ ಹೈಮಾಸ್ಟ್ ದೀಪಗಳು, ರಿಫ್ಲೆಕ್ಟರ್ ಹಾಗೂ ಸೈನ್ ಬೋರ್ಡ್ ಅಳವಡಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

    ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

    ಹುನಗುಂದ ತಾಲೂಕಿನ ಬಾಣಂತಿಕೊಳ್ಳದ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಆಗಿರುವ ವರದಿ ಇದೆ. ಇಲ್ಲಿನ ರಸ್ತೆಯನ್ನು ಸಂಬಂಧಿಸಿದ ಇಲಾಖೆಯವರು ಸರಿಪಡಿಸಬೇಕು. ಬ್ಲಾೃಕ್ ಸ್ಪಾಟ್‌ನಲ್ಲಿರುವ ರಸ್ತೆಗಳನ್ನು ಪಟ್ಟಿ ಮಾಡಿ ಆದ್ಯತೆ ಮೇರೆಗೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಆಯಾ ರಸ್ತೆ ಪ್ರಾಧಿಕಾರರನ್ನೇ ಹೊಣೆಗಾರರನ್ನಾಗಿ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು ಎಂದರು.

    ಜನರಲ್ಲಿ ರಸ್ತೆ ಸುರಕ್ಷತೆ ಕುರಿತು ಸಾಕ್ಷರತೆ ಕಡಿಮೆ ಇರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯನ್ನು ಇನ್ನು ಮುಂದೆ ಪ್ರತಿ ತಿಂಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಕಡಿವಾಲ, ಆರ್‌ಟಿಒ ಆರ್.ಎಲ್ ಹೊಸಮನಿ ಸೇರಿ ಇತರರು ಇದ್ದರು.

    ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸದಂತೆ ಸುಧಾರಣಾ ಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳಬೇಕು. ರಸ್ತೆ ಅಪಘಾತಗಳು ನಡೆಯುವ ಪ್ರಮುಖ ಸ್ಥಳಗಳನ್ನು ಗುರುತಿಸಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು. ಸಾರ್ವಜನಿಕರಲ್ಲಿ ರಸ್ತೆ ಸುರಕ್ಷೆ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಸ್ತೆ ಅಪಘಾಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ಪ್ರಯತ್ನಿಸಬೇಕು. ಜಾನಕಿ ಕೆ.ಎಂ. ಜಿಲ್ಲಾಧಿಕಾರಿ
    ರಸ್ತೆ ಅಪಘಾತಗಳ ಮಾಹಿತಿ
    ಡಿವೈಎಸ್‌ಪಿ ಪ್ರಸನ್ನ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ 2021ರ ವರ್ಷದಲ್ಲಿ ಒಟ್ಟು 802 ರಸ್ತೆ ಅಪಘಾತಗಳು ಸಂಭವಿಸಿ 343 ಜನ ಸಾವನ್ನಪ್ಪಿದ್ದರೆ, 1069 ಜನ ಗಾಯಾಳುಗಳಾಗಿರುತ್ತಾರೆ. 2022ರಲ್ಲಿ ಒಟ್ಟು 900 ರಸ್ತೆ ಅಪಘಾತಗಳಾಗಿದ್ದು, 379 ಸಾವು ಸಂಭವಿಸಿವೆ. 1280 ಜನ ಗಾಯಾಳುಗಳಾಗಿರುತ್ತಾರೆ. ಪ್ರಸ್ತುತ 2023ನೇ ವರ್ಷದ ಜೂನ್ ಅಂತ್ಯದವರೆಗೆ 449 ರಸ್ತೆ ಅಪಘಾತಗಳಾಗಿದ್ದು, 195 ಜನ ಸಾವಿಗೀಡಾಗಿದ್ದಾರೆ. 673 ಜನ ಗಾಯಾಳುಗಳಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts