More

    ಎಲ್ಲವನ್ನೂ ಗೆದ್ದು ಕ್ಯಾನ್ಸರ್‌ಗೆ ಸೋತ ಮುತ್ತಪ್ಪ ರೈ

    ರಾಮನಗರ: ಭೂಗತ ಜಗತ್ತನ್ನು ಆಳುವ ಸಲುವಾಗಿಯೇ ಹುಟ್ಟಿದವರಂತೆ ಬಾಳಿ ಎಲ್ಲವನ್ನೂ ಜಯಿಸಿದ್ದ ಮುತ್ತಪ್ಪ ರೈ, ಕ್ಯಾನ್ಸರ್ ಎದುರು ಸೋಲು ಕಂಡು ಗುರುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು.

    ಮುತ್ಪಪ ರೈ ಅವರಿಗೆ ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಒಬ್ಬ ಸಹೋದರಿ ಇದ್ದಾರೆ. ಹಿರಿಯ ಪುತ್ರ ರಾಕಿ ಸದ್ಯ ಕೆನಡಾದಲ್ಲಿ ಇದ್ದಾರೆ. ಲಾಕ್‌ಡೌನ್‌ನಿಂದ ವಿಮಾನ ಸಂಚಾರ ರದ್ದಾಗಿರುವುದರಿಂದ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೀಗಾಗಿ ಕಿರಿಯ ಪುತ್ರ ರಿಕ್ತಿ ಬಿಡದಿ ತೋಟದಲ್ಲಿ ತಂದೆಯ ಅಂತಿಮ ಸಂಸ್ಕಾರದ ಕಾರ್ಯ ನೆರವೇರಿಸಿದರು.

    ಬೆಂಬಿಡದ ಸಾವಿನ ಸುದ್ದಿ: ಒಂದು ವರ್ಷದ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವಾಗ ಬೆನ್ನು ನೋವು ಕಾಣಿಸಿಕೊಂಡಿತು. ಪರೀಕ್ಷೆಗೆ ಒಳಪಟ್ಟಾಗ ಕ್ಯಾನ್ಸರ್ ಮೂರನೇ ಹಂತದಲ್ಲಿ ಇರುವುದು ಕಂಡು ಬಂತು. ನಂತರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೈ, ತಾವು ಬದುಕುವುದು ಗ್ಯಾರಂಟಿ ಇಲ್ಲ ಎಂದು ಗೊತ್ತಾದ ನಂತರ ಬಿಡದಿಯ ಗೂಡು ಸೇರಿಕೊಂಡರು. ಅವರ ಸಾವಿನ ಸಂಬಂಧ ಊಹಾಪೋಹಗಳು ಎದ್ದಾಗ, ಖುದ್ದು ಸುದ್ದಿಗೋಷ್ಠಿ ನಡೆಸಿ ತಾವು ಕ್ಯಾನ್ಸರ್‌ಗೆ ತುತ್ತಾಗಿರುವುದನ್ನು ದೃಢಪಡಿಸಿದ್ದರು. ಇತ್ತೀಚೆಗೆ ಮತ್ತೆ ಇದೇ ವಿಚಾರ ಸುದ್ದಿ ಆದಾಗ ೆಟೋಗಳನ್ನು ಹರಿ ಬಿಟ್ಟು ಆರಾಮವಾಗಿ ಇರುವುದಾಗಿ ಹೇಳಿದ್ದರು. ಆದರೆ ಕಳೆದ ಮೂರು ದಿನಗಳ ಹಿಂದೆ ಮತ್ತೆ ರೋಗ ಉಲ್ಬಣಿಸಿದಾಗ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

    ದಾರಿಯುದ್ದಕ್ಕೂ ಪುಷ್ಪ ನಮನ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಮುತ್ತಪ್ಪ ರೈ ಪಾರ್ಥಿವ ಶರೀರ ಇದ್ದ ವಾಹನಕ್ಕೆ ಕೆಂಗೇರಿ, ಹೆಜ್ಜಾಲ, ಮಂಚನಾಯ್ಕನಹಳ್ಳಿ, ಶೇಷಗಿರಿಹಳ್ಳಿ ವೃತ್ತ, ಬೈರಮಂಗಲ ವೃತ್ತ ಸೇರಿ ರಸ್ತೆಯ ಇಕ್ಕೆಲಗಳಲ್ಲಿ ರೈ ಅಭಿಮಾನಿಗಳು ಮತ್ತು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಸುಮಾರು 2.15ಕ್ಕೆ ಬಿಡದಿ ಪಟ್ಟಣ ಪ್ರವೇಶಿಸುತ್ತಿದ್ದಂತೆ ಹೆದ್ದಾರಿಯ ಮೇಲ್ಸೇತುವೆ ಮೇಲಿಂದ ಹತ್ತಾರು ಬುಟ್ಟಿಗಳಲ್ಲಿ ಹೂಗಳನ್ನು ಸುರಿದು ಬೀಳ್ಕೊಡುವ ಮೂಲಕ ಅಭಿಮಾನ ಮೆರೆದರು.

    ಮಡದಿ ಸಮಾಧಿ ಇಲ್ಲೇ ಇದೆ: ಮುತ್ತಪ್ಪ ರೈ ಅವರ ಪತ್ನಿ ರೇಖಾ ಅವರ ಸಮಾಧಿ ಬಿಡದಿಯಲ್ಲಿಯೇ ಇದೆ. 7 ವರ್ಷಗಳಿಂದ ಪ್ರತಿ ವರ್ಷ ಪುಣ್ಯ ಸ್ಮರಣೆ ಹಮ್ಮಿಕೊಂಡು ಬರುತ್ತಿದ್ದರು. ಕಳೆದ ಏ.28ರಂದೂ ಸಹ 7ನೇ ಪುಣ್ಯಸ್ಮರಣೆ ಹಮ್ಮಿಕೊಂಡಿದ್ದರು.

    ಜಯಕರ್ನಾಟಕಕ್ಕೆ ಜನ್ಮ ನೀಡಿದ ಬಿಡದಿ: ಮುತ್ತಪ್ಪ ರೈ ಮಾಜಿ ಡಾನ್ ಆದ ನಂತರದ ದಿನಗಳಲ್ಲಿ ಬಿಡದಿ ಅಚ್ಚು ಮೆಚ್ಚಿನ ಸ್ಥಳ. ಅಂಡರ್‌ವರ್ಲ್ಡ್ ನಂಟಿನಿಂದಾಗಿ ರೈ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು, ಇದರ ನಡುವೆ ಭೂಗತ ಲೋಕದ ವಿರೋಧಿಗಳಿಂದ ಪ್ರಾಣ ಬೆದರಿಕೆಯೂ ಇತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವುದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಬಿಡದಿಯಲ್ಲಿದ್ದರು. ಲ್ಯಾಂಡ್ ಡೆವಲಪರ್ ಆಗಿ ಬಿಡದಿಗೆ ಪ್ರವೇಶ ಪಡೆದ ರೈ 2004ರಿಂದ ಸ್ವಂತ ಮನೆ ಮಾಡಿಕೊಂಡು, ಇಲ್ಲಿಂದಲೇ ವ್ಯವಹಾರ ಮುಂದುವರಿಸಿದರು. ಬಿಡದಿಯಿಂದಲೇ ಬೆಂಗಳೂರಿನ ಸದಾಶಿವ ನಗರ, ಮೈಸೂರು ಮತ್ತು ಸಕಲೇಶಪುರದ ಮನೆಗಳಿಗೆ ಓಡಾಡುತ್ತಿದ್ದ ಮುತ್ತಪ್ಪ ರೈ ಅವರಿಗೆ ಕನ್ನಡ ನಾಡಿನ ಸೇವೆ ಮಾಡುವ ಹಂಬಲ ಹುಟ್ಟಿಕೊಳ್ಳುತ್ತದೆ. ನಾಡು-ನುಡಿ ರಕ್ಷಣೆ ದೃಷ್ಟಿಯಿಂದ ಜಯ ಕರ್ನಾಟಕ ಸಂಘಟನೆ ಹುಟ್ಟುಹಾಕುತ್ತಾರೆ. ಇದಕ್ಕೆ ಬೇಕಾದ ರೂಪುರೇಷೆ ಸಿದ್ಧಗೊಂಡಿದ್ದು ಬಿಡದಿ ನಿವಾಸದಲ್ಲಿಯೇ. ಸಂಘಟನೆ ಮೂಲಕವೇ ಕನ್ನಡಪರ ಹೋರಾಟ, ಸಮಾಜಸೇವೆ ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಲೇ ಬಂದವರು ಮುತ್ತಪ್ಪ ರೈ. ಇದರ ಜತೆಗೆ ಸಂಘಟನೆ ಮೂಲಕ ವೃಷಭಾವತಿ ನದಿ ಶುದ್ಧೀಕರಣ ಸಂಬಂಧ ಹೋರಾಟ ಶುರುವಾಗಲು ಅವರೇ ಕಾರಣೀಭೂತರಾಗಿದ್ದರು. ನಾಡು-ನುಡಿ ಪರವಾದ ಹತ್ತಾರು ಹೋರಾಟಗಳ ಜತೆಗೆ, ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು ಎನ್ನುವ ಬೃಹತ್ ಜಾಥಾ ಹಮ್ಮಿಕೊಳ್ಳುವ ಮೂಲಕ ಸರ್ಕಾರಕ್ಕೆ ಶಕ್ತಿಯ ಮನವರಿಕೆ ಮಾಡಿಕೊಟ್ಟಿದ್ದರು.

    ಅಂತಿಮ ದರ್ಶನ ಪಡೆದ ಗಣ್ಯರು: ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್, ರೈ ನಿವಾಸಕ್ಕೆ ತೆರಳಿ ಅಂತಿಮ ವಿಧಿವಿಧಾನದ ಸಿದ್ಧತೆ ಬಗ್ಗೆ ಸಂಬಂಧಿ ಪ್ರಕಾಶ್ ರೈ ಅವರೊಂದಿಗೆ ಚರ್ಚಿಸಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಬಿಡದಿ ಬಿಜಿಎಸ್ ವೃತ್ತದ ಬಳಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಪಿ.ರಾಜೇಶ್, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ರವಿ.ಕೆ. ಮಾಜಿ ಅಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ಅರುಣ್, ತಾಪಂ ಸದಸ್ಯ ಪ್ರಕಾಶ್, ಹೋಟೆಲ್ ಉದ್ಯಮಿ ಶಶಿ ಸೇರಿ ಪ್ರಮುಖ ಗಣ್ಯರು ಮುತ್ತಪ್ಪರೈ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

    ಈಡೇರದ ಕನಸು: ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸುವಂತೆ ಮಾಡಬೇಕು ಎನ್ನುವ ಹಂಬಲ ರೈ ಅವರದಾಗಿತ್ತು. ಈ ಕಾರಣಕ್ಕಾಗಿ ತಮಗೆ ಒಲಿದು ಬಂದ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗಾದಿ ಒಪ್ಪಿಕೊಂಡಿದ್ದ ಅವರು, ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ ಆರೋಗ್ಯ ಕೈ ಕೊಟ್ಟ ಹಿನ್ನೆಲೆಯಲ್ಲಿ ಇದರ ಜವಾಬ್ದಾರಿಯನ್ನು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಹಸ್ತಾಂತರಿಸುವ ಮಾತುಗಳನ್ನು ಆಡಿದ್ದರು.

    ಸಂಘಟನೆ ಪದಾಧಿಕಾರಿಗಳ ಅಳಲು: ರಾಜ್ಯದಲ್ಲಿ ಜಯ ಕರ್ನಾಟಕ ಸಂಘಟನೆಯನ್ನು ಸದೃಢವಾಗಿ ಕಟ್ಟಿದ್ದ ನೆಚ್ಚಿನ ನಾಯಕನ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪದಾಧಿಕಾರಿಗಳಿಗೆ ಅನುಮತಿ ನೀಡಲಿಲ್ಲ. 20 ಮಂದಿಗಷ್ಟೇ ಭಾಗವಹಿಸಲು ಅವಕಾಶ ನೀಡಿದ್ದರಿಂದ, ರೈ ನಿವಾಸದಿಂದ ಎರಡು ಕಿ.ಮೀ. ದೂರದಲ್ಲಿರುವ ಹೆದ್ದಾರಿಯಲ್ಲಿಯೇ ನಿಲ್ಲಬೇಕಾಯಿತು. ಹೆಗ್ಗಡಗೆರೆ ಕ್ರಾಸ್‌ನಲ್ಲಿಯೆ ತಡೆದಿದ್ದರಿಂದ ಮಾಧ್ಯಮದವರೂ ಸಹ ಅಂತ್ಯಸಂಸ್ಕಾರದ ಚಿತ್ರೀಕರಣ ಮಾಡಲು ಅವಕಾಶ ಇರಲಿಲ್ಲ.

    ನೂತನ ಅಧ್ಯಕ್ಷರ ನೇಮಕ: ಜಯ ಕರ್ನಾಟಕ ಸಂಘಟನೆಗೆ ನೂತನ ಅಧ್ಯಕ್ಷರನ್ನಾಗಿ ಜಗದೀಶ್ ಅವರನ್ನು ನೇಮಕ ಮಾಡಲಾಗಿದ್ದು, ನಮ್ಮ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ಈ ನಾಡಿನ ನೆಲ, ಜಲ, ಭಾಷೆ ಸಂರಕ್ಷಣೆ ವಿಚಾರದಲ್ಲಿ ಅವರು ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗುತ್ತಾರೆ ಎಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts