More

    ಆನೆ ಸಂತತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

    ಬೆಳಗಾವಿ: ಆನೆ ಸಂತತಿಗಳ ಸಂರಕ್ಷಣೆ ಜತೆಗೆ ಅವುಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ನಿರ್ಮಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಳಗಾವಿ ಅರಣ್ಯ ವಿಭಾಗದ ಡಿಸಿಎಫ್ ಅಶೋಕ ಪಾಟೀಲ ತಿಳಿಸಿದರು.

    ‘ವಿಶ್ವ ಆನೆ ದಿನ’ ಆಚರಣೆ ನಿಮಿತ್ತ ಬೆಳಗಾವಿ ಅರಣ್ಯ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವನ್ಯಪ್ರಾಣಿಗಳ ರಕ್ಷಣೆ, ಪೋಷಣೆ ಹಾಗೂ ಅವುಗಳ ಆವಾಸ ಸ್ಥಾನಗಳನ್ನು ಮಾನವ ಚಲನವಲನ ಮುಕ್ತ ಮಾಡಲು ಹೆಚ್ಚಿನ ಪರಿಶ್ರಮ ಪಡಬೇಕು ಎಂದರು.

    ಆನೆಗಳ ಮತ್ತು ಇತರೆ ವನ್ಯಜೀವಿಗಳ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ಷ್ಮ ಮತ್ತು ಆಯಕಟ್ಟಿನ ಅರಣ್ಯ ಪ್ರದೇಶ ಗುರುತಿಸಿ 28 ಕಳ್ಳ ಭೇಟೆ ತಡೆ ಶಿಬಿರ ನಿರ್ಮಿಸಿ ಅಲ್ಲಿ ಹಗಲು ಮತ್ತು ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ದಿನದ 24 ಗಂಟೆ ಗಸ್ತು ತಿರುಗಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ರೈಲು ಮಾರ್ಗ ಇರುವ ಕಡೆಗಳಲ್ಲಿ, ಇಲಾಖೆಯೊಂದಿಗೆ ಸಭೆ ನಡೆಸಲಾಗಿದೆ. ರಾತ್ರಿ ಸಮಯದಲ್ಲಿ ರೈಲುಗಳ ವೇಗ ಮಿತಿ ಕಡ್ಡಾಯವಾಗಿ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟವರಿಗೆ ಸೂಚಿಸಲಾಗಿದೆ ಎಂದರು.

    ಅಂಡರ್‌ಪಾಸ್‌ಗೆ ನಿರ್ದೇಶನ: ಅರಣ್ಯ ಪ್ರದೇಶಗಳಲ್ಲಿ ರೈಲ್ವೆ ಇಲಾಖೆಯಿಂದ ಡಬಲ್ ಲೈನ್ ನಿರ್ಮಾಣ ಕಾರ್ಯ ಹಾಗೂ ಬೆಳಗಾವಿ ಗೋವಾ ಎನ್‌ಎಚ್-4ಎ ರಸ್ತೆ ಅಗಲೀಕರಣ ಕೆಲಸ ಕೂಡ ನಡೆಯುತ್ತಿದ್ದು, ಆ ಪ್ರದೇಶಗಳಲ್ಲಿ ಆನೆ ಹಾಗೂ ಇತರೆ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಹೀಗಾಗಿ ಕಡ್ಡಾಯವಾಗಿ ಅಂಡರ್‌ಪಾಸ್ ನಿರ್ಮಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ರೈಲ್ವೆ ಲೈನ್‌ಗಳನ್ನು ಕ್ರಾಸ್ ಮಾಡದಂತೆ ಉಪಯೋಗಿಸಿದ ಹಳಿಗಳ ಬ್ಯಾರಿಕೇಡ್ ತಯಾರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

    20 ಲಕ್ಷ ರೂ. ಪರಿಹಾರ: ವನ್ಯಪ್ರಾಣಿಗಳಿಂದ ರೈತರ ಬೆಳೆ ಹಾನಿ ಆಗಿದ್ದಲ್ಲಿ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಲಾಗಿದೆ. ಜುಲೈ ಅಂತ್ಯದವರೆಗೆ 368 ವನ್ಯಜೀವಿಗಳಿಂದ ಆದ ಬೆಳೆ ಹಾನಿ ಪ್ರಕರಣ ದಾಖಲಾಗಿದ್ದು, ಈ ಎಲ್ಲ ಪ್ರಕರಣಗಳಿಗೆ ವಿಭಾಗದಿಂದ 20 ಲಕ್ಷ ರೂ.ಬೆಳೆ ಪರಿಹಾರ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು. ಎಸಿಎಫ್ ಎಂ. ಬಿ. ಕುಸನಾಳ, ಆರ್‌ಎಫ್‌ಒ ಆರ್.ಎಚ್. ಡೊಂಬರಗಿ,
    ಡಿಆರ್‌ಎಫ್‌ಒ ವಿನಯ ಗೌಡರ, ರಮೇಶ ಗಿರಿಯಪ್ಪನವರ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts