More

    ಆನೆ ಕಾವಲು ಪಡೆ ಸಿಬ್ಬಂದಿ ಧರಣಿ

    ಎಚ್.ಡಿ.ಕೋಟೆ: ಒಂದು ವರ್ಷದಿಂದ ಕೆಲಸ ಮಾಡಿಸಿಕೊಂಡು ಈಗ ಏಕಾಏಕಿ ನಮ್ಮನ್ನು ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬ ಬೀದಿ ಪಾಲಾಗಿದೆ ಎಂದು ಆರೋಪಿಸಿ ಆನೆ ಕಾವಲು ಪಡೆ ಸಿಬ್ಬಂದಿ ಪಟ್ಟಣದ ಹ್ಯಾಂಡ್ ಪೋಸ್ಟ್ ಅರಣ್ಯ ಇಲಾಖೆ ಕಚೇರಿ ಎದುರು ಬುಧವಾರ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ.

    ವಿವಿಧ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿರುವ ಆನೆ ಕಾವಲು ಪಡೆ ಸಿಬ್ಬಂದಿ, ಒಂದು ವರ್ಷದ ಹಿಂದೆ ಗುತ್ತಿಗೆ ಆಧಾರದ ಮೇಲೆ ನಮ್ಮನ್ನು ಆನೆ ಓಡಿಸಲು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿ, ಬೇರೆಯವರನ್ನು ನೇಮಿಸಿಕೊಂಡಿದ್ದಾರೆ ಎಂದು ದೂರಿದರು.

    ನಿಂಗರಾಜು ಮಾತನಾಡಿ, ಒಂದು ತಿಂಗಳ ಹಿಂದೆ ಆನೆ ಕಾವಲು ಪಡೆಯ ವಾಹನ ಚಾಲಕ ವಿನೋದ ಎಂಬುವರಿಗೆ ಸಹಾಯಕ ಅರಣ್ಯ ವಲಯ ಅಧಿಕಾರಿಯೊಬ್ಬರು ಮಾನಸಿಕವಾಗಿ ಹಿಂಸೆ ನೀಡಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಮಗೆ ಭದ್ರತೆ ಬೇಕು ಎಂದು ಕೇಳಿದಕ್ಕೆ ಅಧಿಕಾರಿಗಳು ನಿಮಗೆ ಯಾವುದೇ ರೀತಿಯ ಭದ್ರತೆಯನ್ನು ಇಲಾಖೆಯಿಂದ ನೀಡಲು ಸಾಧ್ಯವಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದರು. ಹಾಗಾಗಿ ಭದ್ರತೆ ಬಗ್ಗೆ ಪತ್ರ ನೀಡಿದರೆ ಮಾತ್ರ ಕೆಲಸ ನಿರ್ವಹಣೆ ಮಾಡುತ್ತೇವೆ ಎಂದು ಒತ್ತಾಯಿಸಿದ ಕಾರಣ ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದಾಗಿ ಕೆಲಸ ಕಳೆದುಕೊಂಡ ನಮ್ಮ ಕುಟುಂಬ ಈಗ ಬೀದಿ ಪಾಲಾಗಿದೆ. ಮತ್ತೆ ಕೆಲಸ ನೀಡುವವರಿಗೆ ಇಲ್ಲಿಂದ ಹೋಗುವುದಿಲ್ಲ ಎಂದು ಎಚ್ಚರಿಸಿದರು.

    ಸ್ಥಳಕ್ಕೆ ಎಸಿಎಫ್ ಮಹಾದೇವಯ್ಯ ಹಾಗೂ ಆರ್‌ಎಫ್‌ಒ ಅನಿತರಾಜ್ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಡಿಸಿಎಫ್ ಅವರ ಗಮನಕ್ಕೆ ತರುವುದಾಗಿ ತಿಳಿಸಿ ತೆರಳಿದರು. ಆದರೂ ನಮಗೆ ನ್ಯಾಯ ಸಿಗುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತಿದ್ದಾರೆ.

    ಪ್ರತಿಭಟನೆಯಲ್ಲಿ ಆನೆ ಕಾವಲು ಪಡೆ ನೌಕರರಾದ ಶಿವಕುಮಾರ್, ಅಣ್ಣಯ್ಯ, ರವಿ, ಭಾಸ್ಕರ್, ಶಿವಪ್ಪ, ಶಿವು, ಕನಕರಾಜ್, ಪ್ರಕಾಶ್‌ಕುಮಾರ್, ಪ್ರಗತಿಪರ ಸಂಘಟನೆಯ ಅಕ್ಬರ್ ಪಾಷ, ಎಐಸಿಸಿಟಿಯು ಸಂಚಾಲಕ ಚೌಡಹಳ್ಳಿ ಜವರಯ್ಯ, ರಾಜಣ್ಣ, ನಿಂಗರಾಜು, ಶೈಲೇಂದ್ರ, ಜಯರಾಜು, ಹೈರಿಗೆ ಶಿವರಾಜು, ಶಿವಣ್ಣ, ಜಕ್ಕಹಳ್ಳಿ ಮಲ್ಲೇಶ, ಕುಮಾರ ಇದ್ದರು.

    ದಿನಗೂಲಿ ನೌಕರರನ್ನು ಇಷ್ಟ ಬಂದಂತೆ ಬಳಸಿಕೊಂಡು ಈಗ ಕೆಲಸದಿಂದ ತೆಗೆದು ಹಾಕಿ ಅನ್ಯಾಯ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಯ ಮೇಲೆ ಕಾನೂನು ಕ್ರಮ ಆಗಬೇಕು. ಒಂದು ವರ್ಷದಿಂದ ಕೆಲಸ ಮಾಡಿಸಿಕೊಂಡು ಈಗ ಬೀದಿ ಪಾಲಾಗಿರುವ ಆನೆ ಕಾವಲು ಪಡೆ ನೌಕರರಿಗೆ ನ್ಯಾಯ ಸಿಗುವವರೆಗೂ ಅವರ ಜತೆಯಲ್ಲಿ ಹೋರಾಟ ಮಾಡುತ್ತೇವೆ.
    ಚೌಡಹಳ್ಳಿ ಜವರಯ್ಯ, ಎಐಸಿಟಿಯು ಸಂಚಾಲಕ

    ಆನೆ ಓಡಿಸಲು ಹೊರ ಗುತ್ತಿಗೆ ಆಧಾರದ ಮೇಲೆ ಹತ್ತು ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಆದರೆ ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಬಾರದೆ ಗೈರು ಹಾಜರಿ ಆಗಿದ್ದರು. ಹಾಗಾಗಿ ಇವರ ಬದಲು ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.
    ಮಹಾದೇವಯ್ಯ ಎಸಿಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts