More

    ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ

    ಜಿಲ್ಲಾಧಿಕಾರಿ ಲತಾ ಕಣ್ಗಾವಲಿನಲ್ಲಿ ಮತದಾನದ ಹಬ್ಬ

    ಮಧ್ಯಾಹ್ನದ ಬಳಿಕ ಚುರುಕುಗೊಂಡ ಮತಚಲಾವಣೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಮತಗಟ್ಟೆಗಳಲ್ಲಿ ತಳ್ಳಾಟ, ಕಾರ್ಯಕರ್ತರ ನಡುವೆ ಸಣ್ಣ-ಪುಟ್ಟ ಸಂಘರ್ಷ, ಕೆಲವೆಡೆ ಇವಿಎಂ ಯಂತ್ರಗಳಲ್ಲಿನ ದೋಷದಿಂದ ಉಂಟಾದ ಗೊಂದಲ, ಮಾತಿನ ಚಕಮಕಿ, ವಾಗ್ವಾದಗಳನ್ನು ಹೊರತುಪಡಿಸಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನೆರವೇರಿತು.
    ಮತದಾನದ ದಿನವನ್ನು ಮತದಾನದ ಹಬ್ಬದಂತೆ ಆಚರಿಸಬೇಕೆಂದು ಕರೆ ನೀಡಿದ್ದ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಇದಕ್ಕಾಗಿಯೇ ನಿರಂತರ ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆ ನಡೆಸಿದ್ದರು. ಪರಿಣಾಮವಾಗಿ ಶಿಸ್ತುಬದ್ಧ ಮತದಾನ ಪ್ರಕ್ರಿಯೆ ನಡೆದಿದ್ದು ಜಿಲ್ಲೆಯಲ್ಲಿ ಸಂಪೂರ್ಣ ಯಶಕಂಡಿದೆ.

    ಅಧಿಕಾರಿಗಳ ಮಿಂಚಿನ ಸಂಚಾರ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ನೇತೃತ್ವದ ಅಧಿಕಾರಿಗಳ ತಂಡ ಇಡೀ ದಿನ ನಾಲ್ಕೂ ತಾಲೂಕುಗಳಲ್ಲಿ ಮಿಂಚಿನ ಸಂಚಾರ ನಡೆಸುವ ಮೂಲಕ ಸುಗಮ ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟರು. ಪೊಲೀಸರ ಬಿಗಿ ಬಂದೋಬಸ್ತ್‌ನಿಂದಾಗಿ ಎಲ್ಲಿಯೂ ಅಹಿತಕರ ಘಟನೆಗೆ ಆಸ್ಪದವಾಗಲಿಲ್ಲ. ಕೆಲವು ಕಡೆಗಳಲ್ಲಿ ಗುಂಪುಗೂಡಿ ವಾಗ್ವಾದಕ್ಕಿಳಿದಿದ್ದ ಕಾರ್ಯಕರ್ತರ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ ಪ್ರಸಂಗಗಳು ನಡೆದವು. ಮತಗಟ್ಟೆಗಳಲ್ಲಿ ನಿಯೋಜಿಸಿದ್ದ ಸಿಬ್ಬಂದಿ ಶಿಸ್ತುಬದ್ದವಾಗಿ ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಚುನಾವಣಾ ಆಯೋಗದಿಂದ ಮತಗಟ್ಟೆಗಳಲ್ಲಿ ಪೂರಕ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಸಖಿ ಮತಗಟ್ಟೆಗಳು, ವಿಶೇಷ ಮತಗಟ್ಟೆಗಳು ಸೇರಿ ನಾನಾ ಸೌಲಭ್ಯಗಳ ಪರಿಣಾಮವಾಗಿ ಮತದಾರರು ಹೆಚ್ಚಿನ ಗೊಂದಲವಿಲ್ಲದೆ ಮತದಾನ ಮಾಡಿದರು.

    ಮಧ್ಯಾಹ್ನದ ಬಳಿಕ ಚುರುಕು: ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮುಂಜಾನೆ 7 ಗಂಟೆಗೆ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆಯಿತಾದರೂ ನೀರಸ ಪ್ರತಿಕ್ರಿಯೆ ಕಂಡುಬಂತು. ಮತದಾನ ಆರಂಭವಾದ 2 ಗಂಟೆಯ ಬಳಿಕವೂ ಶೇ.10 ಮತದಾನವಾಗಿತ್ತು. ನಂತರದಲ್ಲಿ ಮತಗಟ್ಟೆಗಳತ್ತ ದೌಡಾಯಿಸಿದ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ಕೆಲವು ಮತಗಟ್ಟೆಗಳಲ್ಲಿ ಮತದಾನಕ್ಕೆ ನೂಕುನುಗ್ಗಲು ಕಂಡುಬಂತು ಚುನಾವಣಾ ಸಿಬ್ಬಂದಿ ಪರಿಸ್ಥಿತಿ ತಹಬಂದಿಗೆ ತರಲು ಹರಸಾಹಸ ನಡೆಸುವಂತಾಯಿತು. ಮಧ್ಯಾಹ್ನ 1 ಗಂಟೆ ಬಳಿಕ ಮತದಾನ ಪ್ರಕ್ರಿಯೆ ಚುರುಕುಗೊಂಡು ಶೇ.38 ಮತದಾನ ದಾಖಲಿಸಲಾಯಿತು. 3 ಗಂಟೆಯಷ್ಟರಲ್ಲಿ ಶೇ.60, ಸಂಜೆ 5 ಗಂಟೆಯಷ್ಟರಲ್ಲಿ ಏಕಾಏಕಿ ಶೇ.75 ಮತದಾನ ದಾಖಲಾಯಿತು. ಒಟ್ಟು ಜಿಲ್ಲೆಯಲ್ಲಿ ಶೇ.85.08 ಮತದಾನವಾಗಿದ್ದು, ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಚುನಾವಣಾ ಸಿಬ್ಬಂದಿ ದೇವನಹಳ್ಳಿಯ ಡಿಮಸ್ಟರಿಂಗ್ ಕೇಂದ್ರಕ್ಕೆ ಇವಿಎಂ ಯಂತ್ರಗಳನ್ನು ಸಾಗಿಸಿದರು.

    ಮತಹಾಕುವಂತೆ ದುಂಬಾಲು: ಮತಗಟ್ಟೆಗಳ ಬಳಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಹಾಕುವಂತೆ ಆಗಮಿಸುತ್ತಿದ್ದ ಮತದಾರರಿಗೆ ದುಂಬಾಲು ಬೀಳುತ್ತಿದ್ದ ದೃಶ್ಯಗಳು ಕಂಡುಬಂದವು. ಮತದಾರರು ಹತ್ತಿರ ಬರುತ್ತಿದ್ದಂತೆ ಸೌಜನ್ಯದಿಂದ ಮಾತನಾಡಿಸಿ, ಅವರಿಗೆ ಮತಗಟ್ಟೆಯ ಮಾಹಿತಿ ನೀಡಿ ಕಳುಹಿಸಿಕೊಡುತ್ತಿದ್ದರು. ನೆಲಮಂಗಲದಲ್ಲಿ ಮದುವೆ ಮುಗಿಸಿಕೊಂಡು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಬಂದ ನೂತನ ವಧು ಡಾ.ಚಿನ್ಮಯಿ ಮತಚಲಾಯಿಸಿ ಗಮನ ಸೆಳೆದರು.

    ನೆಲಮಂಗಲದಲ್ಲಿ ಕಿರಿಕಿರಿ: ಜಿಲ್ಲಾ ಪಂಚಾಯಿತಿ ಉಪವಿಭಾಗೀಯ ಕಚೇರಿಯಲ್ಲಿ ತೆರೆಯಲಾಗಿದ್ದ 197, 198 ಸಂಖ್ಯೆಯ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಪರ ಕಾರ್ಯಕರ್ತರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅರೆ ಮಿಲಿಟರಿ ಸಿಬ್ಬಂದಿ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು. ಚಿತ್ರನಟ ವಿನೋದ್‌ರಾಜ್‌ಕುಮಾರ್ ಮೈಲನಹಳ್ಳಿಯಲ್ಲಿ, ರಾಜ್ಯ ಅನುಸೂಚಿತ ಜಾತಿ ಬುಡಕಟ್ಟು ಆಯೋಗದ ಸದಸ್ಯ ದೊಡ್ಡೇರಿ ವೆಂಕಟೇಶ್ ದೊಡೇರಿ ಗ್ರಾಮದ ಮತಗಟ್ಟೆಗೆ ಬಂದು ಮತಚಲಾವಣೆ ಮಾಡಿದರು.

    ಅವಧಿ ಮೀರಿದ ಮತದಾನ: ದೊಡ್ಡಬಳ್ಳಾಪುರದ ಬೂಚನಹಳ್ಳಿ ಮತ್ತು ಆರೂಢಿ ಮತಗಟ್ಟೆಗಳಲ್ಲಿ ಕೆಲ ಕಾಲ ಇವಿಎಂ ಮಷಿನ್ ಸ್ಥಗಿತವಾಗಿತ್ತು. ಬಳಿಕ ಅಧಿಕಾರಿಗಳು ಸರಿಪಡಿಸಿದರು. ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಮತದಾರರು ಮಧ್ಯಾಹ್ನದ ವೇಳೆಗೆ ಬೆರಳೆಣಿಕೆಯಷ್ಟು ಮಂದಿಗೆ ಇಳಿಯಿತು. ಸಂಜೆ 4 ಗಂಟೆ ಬಳಿಕ ಮತಗಟ್ಟೆಗಳಲ್ಲಿ ಸಾಲು ಸಾಲಾಗಿ ನಿಂತು ಮತದಾನ ಮಾಡಿದ್ದು ಸಾಮಾನ್ಯವಾಗಿತ್ತು. ರಾಜೀವ್ ಗಾಂಧಿ ಬಡಾವಣೆ, ಕಚೇರಿಪಾಳ್ಯ ಸೇರಿ ಹಲವು ವಾರ್ಡ್‌ಗಳಲ್ಲಿ 5 ಗಂಟೆ ಬಳಿಕ ಮತಗಟ್ಟೆಯತ್ತ ಜನ ಬಂದ ಪರಿಣಾಮ, ಮತದಾನ ಮುಕ್ತವಾಗುವ ವೇಳೆಗೆ 8 ಗಂಟೆಯಾಗಿತ್ತು. ಉಳಿದಂತೆ ಯಾವುದೇ ಗೊಂದಲ, ಸಮಸ್ಯೆ ಇಲ್ಲದಂತೆ ತಾಲ್ಲೂಕಿನಾದ್ಯಂತ ಶಾಂತಿಯುತ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತೇಜಸ್ ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts