More

    ಚುನಾವಣೆ ವೇಳೆ ಬಿಜೆಪಿ ಮೀಸಲಾತಿ ನಾಟಕ

    ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಮೀಸಲಾತಿ ಕುರಿತು ನಾಟಕವಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಕಿಡಿಕಾರಿದರು.


    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕವಲುದಾರಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ’ ಮತ್ತು ಬಿಜೆಪಿ ಅಳಿಸಿ- ಮೀಸಲಾತಿ ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮೀಸಲಾತಿ ನಿರ್ಧಾರ ಕಾರ್ಯಗತವಾಗಲ್ಲ


    ಅಧಿಕಾರದಲ್ಲಿ 3 ವರ್ಷವಿದ್ದರೂ ಏನು ಮಾಡದ ಬಿಜೆಪಿ ಕೊನೆಯ ಸಚಿವ ಸಂಪುಟದಲ್ಲಿ ಮೀಸಲಾತಿ ಕುರಿತು ನಿರ್ಣಯ ಕೈಗೊಂಡಿದೆ. ಇದು ಮೀಸಲಾತಿ ನಾಟಕ. ಇದು ಯಾವುದೂ ಕಾರ್ಯಗತವಾಗಲ್ಲ. ಸಚಿವ ಸಂಪುಟದ ನಿರ್ಣಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.


    ಮೀಸಲಾತಿ ಕುರಿತು ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ನಡೆಸಿಲ್ಲ. ವಿಧಾನಸಭೆ, ವಿಧಾನಪರಿಷತ್‌ನ ಅನುಮೋದನೆ ಪಡೆದುಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಅದು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಬೇಕು. ಆದರೆ, ಯಾವ ಪ್ರಕ್ರಿಯೆಯೂ ನಡೆಸಿಲ್ಲ. ಬರೀ ಚುನಾವಣೆ ದೃಷ್ಟಿಯಲ್ಲಿ ಜನರಿಗೆ ಮೋಸ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು.


    ಮುಸ್ಲಿಂ ಸಮುದಾಯಕ್ಕೆ ಇದ್ದ ಪ್ರವರ್ಗ 2ಬಿ ಮೀಸಲಾತಿಯನ್ನು ಕಿತ್ತುಕೊಂಡಿರುವ ಬಿಜೆಪಿ ಸರ್ಕಾರದ ಕ್ರಮ ಸಂವಿಧಾನ ವಿರೋಧಿಯಾಗಿದೆ. ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿ ಹುಟ್ಟುವುದಿಲ್ಲ. ಜನನ ಆಕಸ್ಮಿಕ. ಆದರೆ, ಎಷ್ಟ್ಟೇ ದೊಡ್ಡ ವ್ಯಕ್ತಿ, ವಿದ್ಯಾವಂತರಾದರೂ ಅವರ ಜಾತಿ ಕೇಳುತ್ತಾರೆ. ಹೆಸರು, ಊರು ಕೇಳಿದ ಬಳಿಕ ‘ನಿಮ್ಮದು ಯಾವ ಜಾತಿ’ ಎಂದು ಪ್ರಶ್ನಿಸುತ್ತಾರೆ. ಜಾತಿ ರೋಗ ತಡೆಯಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಜಾತ್ಯತೀತ ದೇಶದಲ್ಲಿ ಜಾತಿ ಅತಿಯಾಗಿದೆ ಎಂದು ಕಳವಳವ್ಯಕ್ತಪಡಿಸಿದರು.

    ಕಳಕಳಿ ಹೊಂದಿರುವ ನಾಯಕರು ಬೇಕಾಗಿದ್ದಾರೆ:

    ಪ್ರತಿಯೊಂದು ಕಾಯಕ ಸಮುದಾಯಗಳು ಸಮಾಜಕ್ಕೆ ಕೊಡುಗೆ ನೀಡಿವೆ. ಆದರೆ, ವ್ಯವಸ್ಥೆ ಅವುಗಳನ್ನು ದೂರ ಇಟ್ಟಿವೆ. ಇದನ್ನೇ ಸವಾಲಾಗಿ ಸ್ವೀಕರಿಸುವ ಮೂಲಕ ಈ ಸಮುದಾಯದ ಜನರು ವಿದ್ಯಾವಂತರಾಗಿ ಸಮಾಜ ಮುಖ್ಯವಾಹಿನಿಗೆ ಬರಬೇಕು. ಹಿಂದುಳಿದ ವರ್ಗಗಳ ಕುರಿತು ಕಳಕಳಿ ಹೊಂದಿರುವ ನಾಯಕರು ಬೇಕಾಗಿದ್ದಾರೆ. ಡಿ.ದೇವರಾಜ ಅರಸು ಅವರಿಗೆ ಈ ಸಮುದಾಯಗಳ ಪರ ತುಡಿತವಿತ್ತು. ಸಿದ್ದರಾಮಯ್ಯರಲ್ಲಿ ಆ ಕಳಕಳಿ ಇದೆ. ಆದರೆ, ಉಳಿದ ನಾಯಕರು ತಮ್ಮ ಜಾತಿ, ಹುದ್ದೆ, ಕುರ್ಚಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.


    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಂ ಮಾತನಾಡಿ, ಒಬಿಸಿಗೂ ರಾಜಕೀಯ ಮೀಸಲಾತಿ ನೀಡಬೇಕು. ವಿಧಾನಸಭೆ, ಲೋಕಸಭೆಯಲ್ಲಿ ಶೇ.15ರಷ್ಟು ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.


    ಬಿಜೆಪಿ ರಾಜಕೀಯ ಕಾರಣಕ್ಕೆ ಹಿಂದುಳಿದ ವರ್ಗಗಳನ್ನು ಒಡೆದು ಆಳುವ ಕೆಲಸ ಮಾಡುತ್ತಿದೆ. ಬ್ರಿಟಿಷರ ಕಾಲದಿಂದಲೂ ಮೀಸಲಾತಿ ಜಾರಿ ಇದೆ. ಆದರೆ, ಯಾರೂ ಗೊಂದಲ ಸೃಷ್ಟಿಸುವ ಕೆಲಸ ಮಾಡಿರಲಿಲ್ಲ. ಮುಸ್ಲಿಂ ಸಮುದಾಯಕ್ಕೆ ಇದ್ದ ಪ್ರವರ್ಗ 2ಬಿ ಮೀಸಲಾತಿಯನ್ನು ಕಿತ್ತುಕೊಂಡಿರುವ ಬಿಜೆಪಿ ಸರ್ಕಾರದ ಕ್ರಮವು ಭವಿಷ್ಯದಲ್ಲಿ ಹಿಂದುಳಿದ ವರ್ಗ ಪ್ರವರ್ಗ 2ಎ ಮೀಸಲಾತಿಯನ್ನು ರದ್ದುಗೊಳಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


    ಮೀಸಲಾತಿ ವಿರೋಧಿಯಾಗಿರುವ ಬಿಜೆಪಿ, ಆರ್‌ಎಸ್‌ಎಸ್ ಇಡೀ ಮೀಸಲಾತಿ ವ್ಯವಸ್ಥೆಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿವೆ. ಒಬಿಸಿ ಸಮುದಾಯ ಸಮಾಜ ಮುಖ್ಯವಾಹಿನಿಗೆ ಬರುವುದನ್ನು ತಡೆಯುತ್ತಿದೆ. ಮೀಸಲಾತಿ ಉಳಿದರೆ ಒಬಿಸಿ ಸಮುದಾಯಗಳು ಉಳಿಯಲಿವೆ. ಇಲ್ಲವಾದರೆ, ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


    ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್(ಜನ್ನಿ), ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಪ್ರಕಾಶ್, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ರವಿನಂದನ್, ಉಪ್ಪಾರರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಉಪ್ಪಾರ್, ವಿಶ್ವಕರ್ಮ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಕೆಂಡಗಣ್ಣ ವಿಶ್ವಕರ್ಮ, ನೆಲೆ ಹಿನ್ನೆಲೆ ಸಂಸ್ಥೆಯ ಗೋಪಾಲಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts