More

    ಗುಡಿಸಲಿನಂಥ ಮನೆ ಬಯಲೇ ಶೌಚಗೃಹ, ವೃದ್ಧ ದಂಪತಿಗೆ ಸರ್ಕಾರದ ಸೌಲಭ್ಯ ಮರೀಚಿಕೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ನೆಟ್ಟಗೆ ನಿಂತರೆ ಮಾಡು ತಲೆಗೆ ತಾಕುತ್ತದೆ! ಕಾಲು ಚಾಚಿ ಮಲಗಿದರೆ ತಟ್ಟಿಗೋಡೆ ಅಡ್ಡ ಬರುತ್ತದೆ. ಅಲ್ಲೇ ಅಡುಗೆ, ಊಟ… ಸಾಕುಪ್ರಾಣಿಗಳೊಂದಿಗೆ ವಾಸ… ಕತ್ತಲು ಆವರಿಸಿದ ಬಳಿಕವೇ ಸ್ನಾನ, ಶೌಚ. ಜೋಪಡಿಯೋ, ಗುಡಿಸಲೋ, ಟೆಂಟ್ ಹೌಸೋ ಎಂದು ನಿರ್ಧರಿಸಲಾಗದಂತಿರುವ ಮನೆ.. ಬಯಲೇ ಶೌಚಗೃಹ… ಸ್ವತಂತ್ರ ಭಾರತದ ಗ್ರಾಮೀಣ ಭಾಗದ ಜನರ ಬದುಕಿಗೆ ಕನ್ನಡಿ ಹಿಡಿಯುತ್ತದೆ ಈ ದೃಶ್ಯ.

    ಬೈಂದೂರು ತಾಲೂಕಿನ ಸಿದ್ದಾಪುರ ಗ್ರಾಮ ಹೊಳೆಶಂಕರನಾರಾಯಣ ರಸ್ತೆ ಬದಿಯ ಜನತಾ ಕಾಲನಿ ನಿವಾಸಿ ಅಣ್ಣಪ್ಪ (62) ಮತ್ತು ಸರಸ್ವತಿ (58) ಎಂಬ ವೃದ್ಧ ದಂಪತಿಯ ಮನೆಯ ಚಿತ್ರಣವಿದು. ಹೀಗೊಂದು ಮನೆ ಇದೆ, ಹೀಗೂ ಜೀವನ ಮಾಡಿಕೊಳ್ಳಬಹುದು ಎಂದು ಊಹೆ ಮಾಡಿಕೊಳ್ಳಲೂ ಆಗದ ಸ್ಥಿತಿಯಲ್ಲಿ ಇವರು ಜೀವನ ಸಾಗಿಸುತ್ತಿದ್ದಾರೆ. ಬಡವರ ಹೆಸರಲ್ಲಿ ಮನೆ, ಸೈಟ್ ಎಲ್ಲವೂ ಆಗುತ್ತದೆ. ಆದರೆ ಕೂಲಿ ಕೆಲಸ ಮಾಡಿ ಬದುಕುತ್ತಿರುವ ಈ ವೃದ್ಧ ದಂಪತಿಗೆ ಸರ್ಕಾರದ ಯೋಜನೆ ಮರೀಚಿಕೆ.

    ಇರುವ ಸಣ್ಣ ಗುಡಿಸಲಿನ ಒಂದು ಭಾಗದಲ್ಲಿ ದನದ ಕೊಟ್ಟಿಗೆ. ಒಂದು ಭಾಗ ಮನೆ! ಮನೆಯ ಬಾಗಿಲಲ್ಲಿ ಮಲಗುವ ನಾಯಿಯೇ ಬಾಗಿಲು! ಮಾಡಿಗೆ ಪ್ಲಾಸ್ಟಿಕ್ ಹೊದಿಕೆ ಇದ್ದರೂ ಅದು ಅಲ್ಲಲ್ಲಿ ತೂತು ಬಿದ್ದು ರಾತ್ರಿ ಅಂಗಾತ ಮಲಗಿದರೆ ಚಂದ್ರ ಕಾಣಿಸುತ್ತಾನೆ. ಮನೆ ಸುತ್ತ ಒಡೆದ ಸಿಮೆಂಟ್ ಶೀಟ್ ಕಟ್ಟಿ ಅದಕ್ಕೆ ಗೋಣಿಚೀಲ, ಪ್ಲಾಸ್ಟಿಕ್ ತುಂಡು ಹೊದೆಸಿದ್ದಾರೆ. ರಾತ್ರಿ ಮೇಣದ ಬತ್ತಿ ಬೆಳಕು.

    ಪಡಿತರ ಅಕ್ಕಿಯೇ ಆಶ್ರಯ
    ಅಣ್ಣಪ್ಪ -ಸರಸ್ವತಿ ದಂಪತಿ ಹೊಸನಗರ ತಾಲೂಕಿನಿಂದ ಬಂದವರು. ಸಿದ್ದಾಪುರ ಚೆಕ್‌ಪೋಸ್ಟ್ ಬಳಿ ವಾಸ ಆರಂಭಿಸಿದರು. ಅಣ್ಣಪ್ಪ ಸೌದೆ ತಂದು ಸಿದ್ದಾಪುರ ಪೇಟೆಯಲ್ಲಿ ಮಾರಿ ಬರುತ್ತಿದ್ದರೆ, ಸರಸ್ವತಿ ಮನೆ ಚಾಕರಿ ಮಾಡುವ ಮೂಲಕ ಸಂಸಾರ ನೌಕೆಗೆ ಹೆಗಲು ಕೊಟ್ಟಿದ್ದರು. ಚೆಕ್‌ಪೋಸ್ಟ್ ಬಳಿ ಬದುಕು ಕಟ್ಟಿಕೊಳ್ಳುತ್ತಿದ್ದ ಇವರಿಗೆ ಜನ್ಸಾಲೆ ಬಳಿ ವೃದ್ಧ ಮಹಿಳೆಯನ್ನು ನೋಡಿಕೊಳ್ಳುವ ಕೆಲಸ ಸಿಕ್ಕಿದ್ದರಿಂದ ಅಲ್ಲಿಗೆ ಬಂದರು. 25 ವರ್ಷ ಜನ್ಸಾಲೆಯಲ್ಲಿ ಜೀವನ ಕಟ್ಟಿಕೊಂಡ ದಂಪತಿ ವೃದ್ಧ ಮಹಿಳೆಯ ನಿಧನದ ಬಳಿಕ ಅತಂತ್ರರಾಗಿ ಸದ್ಯ ಜನತಾ ಕಾಲನಿಯಲ್ಲಿದ್ದಾರೆ. ಅಣ್ಣಪ್ಪ ಮರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದರಿಂದ ದೊಡ್ಡ ಕೆಲಸ ಮಾಡಲಾಗುತ್ತಿಲ್ಲ. ಸಣ್ಣಪುಟ್ಟ ಮಾಡಿಕೊಂಡು ವಾಲಗ ಊದುವವರ ಜತೆ ತಾಳ ಹಾಕುವ ಕೆಲಸ ಮಾಡುತ್ತಿದ್ದಾರೆ. ಪತ್ನಿಯೂ ಸಣ್ಣಪುಟ್ಟ ಕೆಲಸಗಳ ಮೂಲಕ ನೆರವಾಗುತ್ತಿದ್ದಾರೆ. ದಂಪತಿಗೆ ಮಕ್ಕಳಿಲ್ಲ. ಬಿಪಿಎಲ್ ಕಾರ್ಡ್‌ಗೆ ಸಿಗುವ 10 ಕೆಜಿ ಅಕ್ಕಿ ಬಿಟ್ಟರೆ ಬೇರಾವುದೇ ಸೌಲಭ್ಯ ಸಿಗುವುದಿಲ್ಲ.

    ಅಣ್ಣಪ್ಪ -ಸರಸ್ವತಿ ದಂಪತಿಗೆ ಸಿದ್ದಾಪುರದ ಜನತಾ ಕಾಲನಿಯಲ್ಲಿ ಸೈಟ್ ಸಿಕ್ಕಿದೆ. ಆಧಾರ್, ಬಿಪಿಎಲ್ ಕಾರ್ಡ್ ಮಾಡಿಕೊಟ್ಟಿದ್ದು, ತಾಂತ್ರಿಕ ಸಮಸ್ಯೆಯಿಂದ ಪಡಿತರ ಚೀಟಿಯಲ್ಲಿ ವಯಸ್ಸು ವ್ಯತ್ಯಾಸವಾಗಿದ್ದರಿಂದ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಇವರ ಗುಡಿಸಲಿಗೆ ವಿದ್ಯುತ್, ಸ್ನಾನಗೃಹ, ಶೌಚಗೃಹ ಇಲ್ಲ. ಸೀಮೆಎಣ್ಣೆ ಕೂಡ ಸಿಗದೆ ಮೇಣದ ದೀಪದಲ್ಲಿ ರಾತ್ರಿ ಕಳೆಯಬೇಕಿದೆ. ಜಿಲ್ಲಾಡಳಿತ ವೃದ್ಧ ದಂಪತಿಯ ನೆರವಿಗೆ ಧಾವಿಸಿ, ಮೂಲಸೌಲಭ್ಯ ಒದಗಿಸಬೇಕು.
    ದಿವಾಕರ ಹೆಗ್ಡೆ
    ಉಡುಪಿ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

    ಪತಿ ಮರದಿಂದ ಬಿದ್ದ ನಂತರ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ನಾನೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆ. ಮನೆ ಕಟ್ಟಿಕೊಳ್ಳುವಷ್ಟು ತಾಕತ್ತು ನಮಗಿಲ್ಲ. ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಮುಸ್ಸಂಜೆ ಹೊಸ್ತಿಲಲ್ಲಿರುವ ನಮ್ಮ ಬದುಕಿಗೆ ಆಶ್ರಯ ಸಿಕ್ಕಂತೆ ಆಗುತ್ತದೆ.
    ಸರಸ್ವತಿ, ಜನತಾ ಕಾಲನಿ ನಿವಾಸಿ, ಸಿದ್ದಾಪುರ

    ಮರದಿಂದ ಬಿದ್ದ ನಂತರ ದೈಹಿಕ ಶ್ರಮದ ಕೆಲಸ ಆಗುತ್ತಿಲ್ಲ. ಕಟ್ಟಡ ಕೆಲಸಕ್ಕೆ ಸಹಾಯಕನಾಗಿ, ಕೆಲವೊಮ್ಮೆ ವಾಲಗದರ ಜತೆ ಕೆಲಸಕ್ಕೆ ಹೋಗುತ್ತೇನೆ. ಕೂಲಿ ಮಾಡಿ ಮನೆಗೆ ಬಂದರೆ ನೆಮ್ಮದಿಯಲ್ಲಿ ರಾತ್ರಿ ಕಳೆಯುವ ಬದಲು ಹೆದರಿಕೆಯಲ್ಲೇ ಕಳೆಯಬೇಕು. ಯಾವುದಾದರೂ ಯೋಜನೆಯಲ್ಲಿ ಮನೆ, ಶೌಚಗೃಹ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಟ್ಟರೆ ನಮಗೆ ಅಷ್ಟೇ ಸಾಕು.
    ಅಣ್ಣಪ್ಪ, ಜೋಪಡಿ ಮನೆ ನಿವಾಸಿ, ಜನತಾ ಕಾಲನಿ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts