ಬೆಂಗಳೂರು: ನಟ ಹಾಗೂ ನಿರ್ದೇಶಕ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ “ಏಕ್ ಲವ್ ಯಾ” ಚಿತ್ರದ ಮೋಷನ್ ಪೋಸ್ಟರ್ ಶನಿವಾರ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಕ್ರೇಜಿಕ್ವೀನ್ ರಕ್ಷಿತಾ ಎಂದರೆ ತಪ್ಪಾಗಲಾರದು.
ಬಹು ದಿನಗಳ ಬಳಿಕ ರಕ್ಷಿತಾ ಅವರು ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ಮೋಷನ್ ಪೋಸ್ಟರ್ ನೀಡಿದೆ. ಪೋಸ್ಟರ್ನಲ್ಲಿ ಸಹೋದರ ರಾಣಾಗೆ ರಕ್ಷಿತಾ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಸಪೋರ್ಟಿಂಗ್ ರೋಲ್ ಮಾಡುತ್ತಿದ್ದು ಮೋಷನ್ ಪೋಸ್ಟರ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ರಕ್ಷಿತಾ ಸಹೋದರ ರಾಣಾಗೆ ಮೊದಲ ಚಿತ್ರವಾಗಿದ್ದ, ರಾಣಾ ಜತೆ ಎಣ್ಣೆ ಬಾಟ್ಲು ಹಿಡಿದುಕೊಂಡು ಕ್ರೇಜಿಕ್ವೀನ್ ಮತ್ತು ಡಿಂಪಲ್ ಕ್ವೀನ್ ಕಾಣಿಸಿಕೊಂಡಿರುವುದು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ನಿರ್ದೇಶಕ ಪ್ರೇಮ್ ಮೋಷನ್ ಪೋಸ್ಟರ್ ಜತೆಗೆ ಟೀಸರ್ ರಿಲೀಸ್ ಡೇಟ್ ಕೂಡ ಘೋಷಿಸಿದ್ದು, ಪ್ರೇಮಿಗಳ ದಿನದಂದು “ಏಕ್ ಲವ್ ಯಾ” ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಅಂದಹಾಗೆ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿದ್ದು, ರಕ್ಷಿತಾ ತಮ್ಮ ಹೋಮ್ ಬ್ಯಾನರ್ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕರಾಗಿದ್ದು, ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶ ನೀಡುವ ಉತ್ಸಾಹದಲ್ಲಿದ್ದಾರೆ. ರಾಣಾ ರೀಷ್ಮಾ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. (ದಿಗ್ವಿಜಯ ನ್ಯೂಸ್)