More

    ವಿದ್ಯಾದೇಗುಲದಲ್ಲಿ ಪಾರಂಪರಿಕ ವಸ್ತುಸಂಗ್ರಹಾಲಯ

    ಪ್ರವೀಣ್‌ರಾಜ್ ಕೊಲ ಕಡಬ
    ತುಳು ಭಾಷಾ ವಿಚಾರದಲ್ಲಿ ಹಲವಾರು ಆರೋಗ್ಯಕರ ಕಾರ್ಯಕ್ರಮ ಹಮ್ಮಿಕೊಂಡು ತುಳುನಾಡಿನ ಸಂಸ್ಕಾರ ಸಂಸ್ಕೃತಿ ಉಳಿವಿಗೆ ಒತ್ತು ನೀಡುತ್ತಿರುವ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಈಗ ತುಳು ಪಾರಂಪರಿಕ ಕರಕುಶಲ ವಸ್ತುಗಳನ್ನು ಸಂಗ್ರಹಾಲಯ ತೆರೆದುಕೊಂಡಿದೆ.

    ತುಳುನಾಡಿನಲ್ಲಿ ಹಿರಿಯರು ಬಳಕೆ ಮಾಡುತ್ತಿದ್ದ ಕರಕುಶಲ ವಸ್ತುಗಳು ಅವಸಾನದ ಅಂಚಿಗೆ ತಲುಪುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಹಳೇ ವಸ್ತುಗಳನ್ನು ಜೋಪಾನವಾಗಿಟ್ಟುಕೊಂಡು ಯುವ ತಲೆಮಾರಿಗೆ ಪರಿಚಯಿಸುವ ಕಾರ‌್ಯವನ್ನು ಶಿಕ್ಷಣ ಸಂಸ್ಥೆ ಮಾಡುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳ ಪಾಲಕರು ಕೈಜೋಡಿಸಿ ತಮ್ಮಲ್ಲಿರುವ ಹಳೇ ವಸ್ತುಗಳನ್ನು ನೀಡುತ್ತಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ವಸ್ತುಗಳನ್ನು ಸಂಗ್ರಹಾಲಯದಲ್ಲಿರಿಸಲಾಗಿದೆ. ಒಂದೊಂದು ವಸ್ತುವು ತುಳು ಸಂಸ್ಕೃತಿಯ ಮಹತ್ವವನ್ನು ಸಾರುತ್ತಿದೆ.

    ಪಾರಂಪರಿಕ ಕರಕುಶಲ ವಸ್ತುಗಳು: ಕೈಮರಾಯಿ, ಮರಯ, ಕರಜನ, ತಂರ್ಬುಚ್ಚಿ, ಚೆನ್ನೆದ ಮಣೆ, 1/4 ಕಲಸೆ, ಒಪಣೆ, ಒಲಿತ್ತ ಪಜೆ, ಪುಲ್‌ಲ್ದ ಪಜೆ, ಕುಡ್ಪು, ಕುರುವೆ, ತೆರಿಯೆ, ಕಲಸೆ, ಸೇರು, ಕೆಯಿಪಡಿ, ಕೈಪುಳು, ಉಜ್ಜೆರ್, ಬೀಜುನ ಕಲ್‌ಲ್, ನಿಗ, ಕಂಬುಲದ ನೊಗ, ಕಟ್ಟಲುನಾಯೆರ್, ಉಜ್ಜಿಡ, ಉರ‌್ಲಿ, ಕೋರಂಗೆ, ಉಪ್ಪುದ ಮರಾಯಿ, ಮುಡಿನಾಲಿ, ಕದಿಕೆ, ಭರಣಿ, ಲಾಟಾನ್, ಅಪ್ಪದ ಕಾವೊಲಿ, ಓಡುದ ಕಾವೊಲಿ, ಮಣ್ಣ್‌ದ ಕರ, ಮೊಟ್ಟತ್ತಿ, ಕದೀನದ ಕಲ್‌ಲ್, ಅಜಮರ, ಕೂಜೆ, ತ್ರಾಸ್ ಮೊದಲಾದ 200ಕ್ಕೂ ಹೆಚ್ಚು ಇತಿಹಾಸ ಹಾಗೂ ಜಾನಪದ ವಸ್ತುಗಳ ಸಂಗ್ರಹವನ್ನು ಕಾಣಬಹುದು. ಶಾಲಾ ಕೊಠಡಿಗಳಲ್ಲಿ ಒಪ್ಪ ಓರಣವಾಗಿ ಜೋಡಿಸಿ ಪ್ರತಿಯೊಂದು ವಸ್ತುವಿನ ಹೆಸರು ಅದರ ಮಹತ್ವನ್ನು ತುಳುವಿನಲ್ಲಿ ಉಲ್ಲೇಖಿಸಲಾಗಿದೆ.

    ತುಳು ಹಬ್ಬ ಆಚರಣೆ: ತುಳುನಾಡಿನಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವನ್ನು ಈ ಸಂಸ್ಥೆಯಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತಿದೆ. ವಿಶೇಷವಾಗಿ ಆಟಿ ಅಮಾವಾಸ್ಯೆ ದಿನವನ್ನು ಶಾಲಾ ಹಬ್ಬದಂತೆ ಆಚರಿಸಲಾಗುತ್ತಿದೆ. ಅಂದು ಸುಮಾರು 80ಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಅತಿಥಿಗಳಿಗೆ ಉಣಬಡಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಬಯಲು ಪ್ರದೇಶ, ಮಲೆನಾಡಿನ ವಿದ್ಯಾರ್ಥಿಗಳು ಹೆಚ್ಚಾಗಿ ಅಭ್ಯಸುತ್ತಿದ್ದು, ಆ ಭಾಗದ ಮಂದಿಯಲ್ಲಿ ತುಳು ಸಂಸ್ಕೃತಿಯನ್ನು ಪರಿಚಯಿಸಲಾಗುತ್ತಿದೆ. ಅಲ್ಲದೆ ತುಳು ಭಾಷೆಯನ್ನು ಹತ್ತನೆ ತರಗತಿಯಲ್ಲಿ ಐಚ್ಛಿಕ ವಿಷಯವನ್ನಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ಪ್ರತಿವರ್ಷ ಶೇ.100 ಫಲಿತಾಂಶ ದೊರೆಯುತ್ತಿದೆ.

    ತುಳುವಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಹಿಂದೆ ಆಡಳಿತ ಭಾಷೆಯಾಗಿಯೂ ಬಳಕೆಯಾಗಿತ್ತು. ಅಲ್ಲದೆ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳ ಸಹಿ ತುಳು ಲಿಪಿಯಲ್ಲಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆ, ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸಬೇಕು ಎನ್ನುವ ದೃಷ್ಟಿಯಿಂದ ಸಂಸ್ಥೆಯಲ್ಲಿ ಹಲವಾರು ತುಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತುಳುನಾಡಿನ ಸಂಸ್ಕಾರ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವೊಂದನ್ನು ನಡೆಸಲಾಗುತ್ತಿದೆ.
    ಇ.ಕೃಷ್ಣಮೂರ್ತಿ ಕಲ್ಲೇರಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾ ಅಧ್ಯಕ್ಷ

    ತುಳು ಸಂಸ್ಕೃತಿ, ಸಂಸ್ಕಾರ ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಅದಕ್ಕಾಗಿ ಶಾಲೆಯಲ್ಲಿ ತುಳು ಭಾಷೆಯ ಪಾಠದ ಜತೆಗೆ ಪಾರಂಪರಿಕ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಮ್ಮದು.
    ಸರಿತಾ ಜನಾರ್ದನ
    ತುಳು ವಿಭಾಗ ಶಿಕ್ಷಕಿ ಮತ್ತು ವಸ್ತುಗಳ ಸಂಗ್ರಹಾಲಯದ ಮೇಲ್ವ್ವಿಚಾರಕಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts