More

    ನಿಯಂತ್ರಣ ಅಗತ್ಯ; ಸಾಮಾಜಿಕ ಸ್ವಾಸ್ಥ್ಯದ ರಕ್ಷಣೆಯಾಗಲಿ…

    ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ವ್ಯವಸ್ಥೆ ರೂಪುಗೊಳ್ಳಬೇಕು ಎಂಬ ಆಗ್ರಹ, ಚರ್ಚೆ ಇಂದು ನಿನ್ನೆಯದೇನಲ್ಲ. ಏಕೆಂದರೆ, ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಎಲ್ಲೆಡೆ ಅಧ್ವಾನಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಹಾಕುವ ಸಂದೇಶಗಳ ಪರಾಮರ್ಶೆ ನಡೆಯುವುದಿಲ್ಲವಾದ್ದರಿಂದ ಕೆಲ ಶಕ್ತಿಗಳಿಗೆ ಅದೇ ಅನುಕೂಲವಾಗಿ ಪರಿಣಮಿಸಿದೆ. ವಾಸ್ತವದಲ್ಲಿ, ಸಾಮಾಜಿಕ ಮಾಧ್ಯಮಗಳು ಅಭಿವ್ಯಕ್ತಿಗೆ ಸಮರ್ಥ ವೇದಿಕೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ರಚನಾತ್ಮಕವಾಗಿ ಬಳಸಿಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ, ಶಕ್ತಿಗಳಿಗೂ ಕೊರತೆಯೇನಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ದುರ್ಬಳಕೆ ಪ್ರಮಾಣವೇ ಹೆಚ್ಚುತ್ತಿರುವುದು ಕಳವಳದ ವಿಷಯ. ಅಲ್ಲದೆ, ಒಟಿಟಿ ಮುಖಾಂತರ ಜನರ ಭಾವನೆಗಳನ್ನು ಘಾಸಿಗೊಳಿಸುವಂಥ ವಿಷಯಗಳು ಪ್ರಸಾರವಾಗುತ್ತಿರುವುದು ವಿವಾದಕ್ಕೆ, ವಿರೋಧಕ್ಕೆ ಕಾರಣವಾಗಿದೆ. ವಾಕ್ ಸ್ವಾತಂತ್ರ್ಯದ ಚೌಕಟ್ಟನ್ನು ಮೀರಿ ಇವು ವರ್ತಿಸುತ್ತಿರುವ ಕುರಿತಂತೆ ವ್ಯಾಪಕ ಕಳವಳವೂ ವ್ಯಕ್ತವಾಗಿದೆ.

    ಕೇಂದ್ರ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದ್ದು, ಡಿಜಿಟಲ್ ಮೀಡಿಯಾ ನಿಯಂತ್ರಣಕ್ಕೆ ಸಂಬಂಧಿಸಿ ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಮೂರು ಸ್ತರದ ಸ್ವಯಂ ನಿಯಂತ್ರಣ ಪ್ರಸ್ತಾಪಿಸಲಾಗಿದೆ. ಈ ನಿಯಮಗಳ ಪ್ರಕಾರ, ಒಟಿಟಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಕಂಟೆಂಟ್ ವಿಚಾರದಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳುವುದು ಅವಶ್ಯ. ಇದಲ್ಲದೆ, ಸ್ವಯಂ ನಿಯಂತ್ರಣ ಸಂಸ್ಥೆ/ಮಂಡಳಿ ಸ್ಥಾಪಿಸುವುದು ಅಗತ್ಯವಾಗಿದ್ದು, ಸರ್ಕಾರದಿಂದ ಮೇಲ್ವಿಚಾರಣಾ ವ್ಯವಸ್ಥೆಯೂ ಇರಲಿದೆ. ಒಟಿಟಿ ವೇದಿಕೆಗಳು ರೇಟಿಂಗ್ ನೀಡಬೇಕು. ದೂರು, ಅಹವಾಲುಗಳ ಪೈಕಿ ಕೆಲವನ್ನು ಸ್ವೀಕರಿಸಿದ 24 ಗಂಟೆಯೊಳಗೆ ಪರಿಹರಿಸಬೇಕು. ಇನ್ನು ಕೆಲವನ್ನು 15 ದಿನಗಳ ಒಳಗೆ ಬಗೆಹರಿಸಿ ಹಿಮ್ಮಾಹಿತಿಯನ್ನು ದೂರುದಾರನಿಗೆ ನೀಡಬೇಕು ಎಂಬ ನಿಯಮಗಳು ಸಾಮಾಜಿಕ ಮಾಧ್ಯಮಗಳನ್ನು ಶಿಸ್ತಿನ ಚೌಕಟ್ಟಿನಲ್ಲಿ ತರಲು ಅನುವಾಗಲಿವೆ. ಮುಖ್ಯವಾಗಿ, ಸ್ವಯಂ ನಿಯಂತ್ರಣಾ ವ್ಯವಸ್ಥೆ ಮತ್ತು ಸರ್ಕಾರದ ಮೇಲ್ವಿಚರಣಾ ವ್ಯವಸ್ಥೆ ಇರಲಿರುವುದರಿಂದ ಬಹಳಷ್ಟು ಅಪಸವ್ಯಗಳಿಗೆ ತಡೆ ಹಾಕಲು ಸಾಧ್ಯವಾಗಲಿದೆ. ಇವು ಕರಡು ನಿಯಮವಾಗಿದ್ದು, ಜಾರಿಗೆ ಮುನ್ನ ಸಮಗ್ರ ಚಿಂತನ-ಮಂಥನ ನಡೆಸಬೇಕು. ಜನರ ಆಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ವಿಷಯತಜ್ಞರ ಅನಿಸಿಕೆಯನ್ನು ಆಲಿಸಿ, ಸೂಕ್ತವಾದವುಗಳನ್ನು ಅಳವಡಿಸಿಕೊಳ್ಳಬೇಕು.

    ಫೇಸ್​ಬುಕ್​ನಲ್ಲಿ ಹಾಕಿದ ಪೋಸ್ಟ್​ವೊಂದರಿಂದ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ 2020ರ ಆಗಸ್ಟ್​ನಲ್ಲಿ ಗಲಭೆ ನಡೆದು ವ್ಯಾಪಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿತ್ತು. ಪ್ರಚೋದನಾಕಾರಿ ಪೋಸ್ಟ್​ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ಪಡೆಯ ಕಣ್ಗಾವಲು ಇರಿಸಿದೆ. ಇದು ಅನಿವಾರ್ಯವಾದರೂ, ಇಂಥ ಕ್ರಮಗಳು ದೀರ್ಘಾವಧಿಗಲ್ಲ. ಹಾಗಾಗಿ, ಸೂಕ್ತ ನಿಯಂತ್ರಣ ವ್ಯವಸ್ಥೆ ಮತ್ತು ಸ್ಪಷ್ಟ ನಿಯಮಗಳು ಅಗತ್ಯ. ಮಾಹಿತಿ-ತಂತ್ರಜ್ಞಾನ ಹಲವು ಅನುಕೂಲಗಳನ್ನು ತಂದುಕೊಟ್ಟಿರುವುದು ಹೌದಾದರೂ, ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಲ್ಲದ ಚಟುವಟಿಕೆಗಳೂ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಹಾಗಾಗಿ, ಹೊಸ ನಿಯಮಗಳು ಮತ್ತು ರೂಪುಗೊಳ್ಳುವ ವ್ಯವಸ್ಥೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಂತಿರಬೇಕು, ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆಯೂ ಎಚ್ಚರಿಕೆ ವಹಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts