More

    ಸಂಪಾದಕೀಯ; ಆಡಳಿತದ ಸವಾಲು

    ಮಹಾರಾಷ್ಟ್ರ ಮತ್ತು ಜಾರ್ಖಂಡದಲ್ಲಿ ಒಂದು ದಿನದ ಅಂತರದಲ್ಲಿ ಎರಡು ಬೆಳವಣಿಗೆಗಳು ಘಟಿಸಿವೆ. ಮಹಾರಾಷ್ಟ್ರದಲ್ಲಿ ಕೆಲ ದಿನಗಳ ಹಿಂದೆ ರಚನೆಯಾದ ಶಿವಸೇನೆ-ಕಾಂಗ್ರೆಸ್-ಎನ್​ಸಿಪಿ ಮೈತ್ರಿಕೂಟದ ಸಂಪುಟ ವಿಸ್ತರಣೆಯಾಗಿದ್ದರೆ, ಜಾರ್ಖಂಡದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇವೆರಡೂ ರಾಜ್ಯಗಳಲ್ಲಿ ಉತ್ತಮ ಆಡಳಿತದ ಸವಾಲು ಆಳುಗರ ಮೇಲಿದೆ.

    ಮಹಾರಾಷ್ಟ್ರದಲ್ಲಿ ಈ ಸಲ ಬಿಜೆಪಿ ಮತ್ತು ಶಿವಸೇನೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಸರಳ ಬಹುಮತದಷ್ಟು ಸ್ಥಾನಗಳನ್ನು ಗೆದ್ದಿದ್ದರೂ ಮುಖ್ಯಮಂತ್ರಿ ಪಟ್ಟದ ವಿಷಯದಲ್ಲಿ ಸಹಮತಕ್ಕೆ ಬಾರದ ಪರಿಣಾಮ, ಅನೇಕ ದಿನಗಳ ರಾಜಕೀಯ ಅಸ್ಥಿರತೆಯ ನಂತರ ಮೈತ್ರಿ ಸರ್ಕಾರ ರಚನೆಯಾಯಿತು.

    ಸರ್ಕಾರ ಮಾಡುವ ಏಕೈಕ ಉದ್ದೇಶದಿಂದ ಸೈದ್ಧಾಂತಿಕ ವಿರೋಧಿಗಳೂ ಪರಸ್ಪರ ಕೈಜೋಡಿಸಿದರು. ಹೀಗಾಗಿ ಈವರೆಗೆ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ನೀಡದಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು. ಇದೀಗ ಅವರ ಸಂಪುಟ ವಿಸ್ತರಣೆಯಾಗಿದೆ. ಎನ್​ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಉಳಿದಂತೆ, ಉದ್ಧವ್ ಠಾಕ್ರೆ ಪುತ್ರ, ಪ್ರಥಮ ಸಲ ಶಾಸಕನಾಗಿರುವ ಆದಿತ್ಯ ಠಾಕ್ರೆ ಸೇರಿ 35 ಮಂದಿ ಸಂಪುಟ ಸೇರಿದ್ದಾರೆ.

    ಆಡಳಿತಾತ್ಮಕ ಅನುಭವದ ಕೊರತೆ ಇರುವ, ಅದೇ ಕಾಲಕ್ಕೆ ಶರದ್ ಪವಾರ್​ರಂಥ ಅನುಭವಿ-ಚಾಣಾಕ್ಷ ರಾಜಕಾರಣಿಯನ್ನು ಮೈತ್ರಿಪಕ್ಷದಲ್ಲಿ ಹೊಂದಿರುವ ಉದ್ಧವ್ ಠಾಕ್ರೆ ಸರ್ಕಾರದ ಚುಕ್ಕಾಣಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲದ ಸಂಗತಿ. ಇನ್ನೊಂದೆಡೆ, ಜಾರ್ಖಂಡದಲ್ಲಿ ಸಹ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಕೂಟ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ, ಜೆಎಂಎಂ ನಾಯಕ ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಈ ಹಿಂದೆಯೂ ಮೈತ್ರಿಯ ಪಾಲುದಾರನಾಗಿ ಅವರ ಅನುಭವ ಹೊಂದಿರುವುದರಿಂದ ಈ ಸಲ ಅದು ಉಪಯೋಗಕ್ಕೆ ಬರಬಹುದು. ಬುಡಕಟ್ಟು ಜನರನ್ನು ಗಣನೀಯ ಸಂಖ್ಯೆಯಲ್ಲಿ ಹೊಂದಿರುವ ಆ ರಾಜ್ಯದಲ್ಲಿ ಜನರ ನಿರೀಕ್ಷೆ ಪೂರೈಸಲು ಅಕ್ಷರಶಃ ಹೆಣಗಬೇಕಿದೆ. ಭಾರತದಲ್ಲಿ ಸಮ್ಮಿಶ್ರ ಆಡಳಿತ ಪ್ರಯೋಗ ಹಲವು ವರ್ಷಗಳಿಂದ ನಡೆದಿದೆ. ಕೆಲವೆಡೆ ಯಶಸ್ವಿಯಾದರೆ, ಮತ್ತೆ ಹಲವೆಡೆ ಒಳಜಗಳ, ಭಿನ್ನಾಭಿಪ್ರಾಯಗಳಿಂದ ಇಂಥ ಸರ್ಕಾರಗಳು ಅಲ್ಪಾಯುವಾಗಿವೆ. ಅದರಲ್ಲೂ ಈಚಿನ ವಿದ್ಯಮಾನ ಗಮನಿಸಿದರೆ, ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷ, ರಾಜ್ಯದಲ್ಲಿ ಸ್ಥಳೀಯ-ಪ್ರಾದೇಶಿಕ ಪಕ್ಷ ಎಂಬ ನಡೆಯನ್ನು ಮತದಾರರು ಅನೇಕ ಕಡೆ ಅನುಸರಿಸುತ್ತಿರುವಂತಿದೆ.

    ಇಂಥ ಸಂದರ್ಭದಲ್ಲಿ ಸ್ಥಳೀಯ ಪಕ್ಷಗಳ ನಾಯಕರ ಹೊಣೆಗಾರಿಕೆ ಮುಖ್ಯವಾಗುತ್ತದೆ. ಅಧಿಕಾರಕ್ಕಾಗಿ ಎಂಥ ಹೆಜ್ಜೆಯನ್ನೂ ಇರಿಸುವ ನಾಯಕರು, ಮುಂದೆ ಸರ್ಕಾರ ನಡೆಸುವಲ್ಲಿ ಎಡವಿದ ಸಾಕಷ್ಟು ನಿದರ್ಶನಗಳಿವೆ. ಜನರು ಈಗ ಸ್ಥಿರ, ಅಭಿವೃದ್ಧಿಪರ ಸರ್ಕಾರಗಳನ್ನು ಬಯಸುತ್ತಿದ್ದಾರೆ ಎಂಬುದು ಪದೇಪದೇ ಸಾಬೀತಾಗುತ್ತಿದೆ.

    ಕರ್ನಾಟಕದ್ದೇ ಈಚಿನ ಉದಾಹರಣೆ ತೆಗೆದುಕೊಂಡರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಡೋಲಾಯಮಾನ ಸ್ಥಿತಿಯನ್ನು ಕಂಡಿದ್ದ ಮತದಾರರು ಕೆಲ ದಿನಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಸರ್ಕಾರದ ಸ್ಥಿರತೆಗೆ ಮುದ್ರೆ ಒತ್ತಿದ್ದರು. ಮತದಾರರ ಮನದಾಳವನ್ನು ಆಳುಗರು ಅರಿಯಬೇಕಿದೆ. ಕೇವಲ ಅಧಿಕಾರಕ್ಕಾಗಿ ಅನುಕೂಲಸಿಂಧು ನೀತಿ ಅನುಸರಿಸಿ, ನಂತರದಲ್ಲಿ ಆಡಳಿತದಲ್ಲಿ ಆ ಬದ್ಧತೆ ತೋರದಿದ್ದರೆ ಜನರು ಸಹಿಸುವುದಿಲ್ಲ ಎಂಬ ಗೋಡೆ ಮೇಲಿನ ಬರಹವನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts