More

    ಗೊಂದಲ ನಿವಾರಿಸಿ; ಲಸಿಕೆ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು…

    ದೇಶಾದ್ಯಂತ ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವೈದ್ಯಕೀಯ ಆಮ್ಲಜನಕದ ಪೂರೈಕೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ನಿವಾರಣೆ ನಿಟ್ಟಿನಲ್ಲಿ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಮತ್ತೊಂದೆಡೆ, ಲಸಿಕೆ ಅಭಿಯಾನಕ್ಕೆ ವೇಗ ಸಿಗಲಿದೆ. ಈ ಮುಂಚೆ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿತ್ತು. ಈ ರ್ನಿಬಂಧವನ್ನು ಸಡಿಲಿಸಬೇಕೆಂದು ರಾಜ್ಯ ಸರ್ಕಾರಗಳಲ್ಲದೆ ವೈದ್ಯಕಿಯ ರಂಗದ ತಜ್ಞರೂ ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಲಸಿಕೆ ನೀಡಲು ಮುಂದಾಗಿದೆ ಮತ್ತು ಅದಕ್ಕೆ ನೋಂದಣಿ ಪ್ರಕ್ರಿಯೆಯೂ ಬುಧವಾರ ಸಂಜೆಯಿಂದ ಆರಂಭವಾಗಿದೆ.

    ನೋಂದಣಿ ಪ್ರಕ್ರಿಯೆಗೆ ಮೊದಲ ದಿನವೇ ನಿರೀಕ್ಷೆಗೂ ಮೀರಿ ಬೆಂಬಲ ಪ್ರಾಪ್ತವಾಯಿತು. ನೋಂದಣಿಗಾಗಿ ಜನರು ಮುಗಿಬಿದ್ದಿದ್ದು, ಕೇಂದ್ರ ಸರ್ಕಾರದ ಕೋವಿನ್​ ಜಾಲತಾಣದಲ್ಲಿ ಬುಧವಾರ ಪ್ರತಿ ನಿಮಿಷಕ್ಕೆ 27 ಲಕ್ಷ ಹಿಟ್​ಗಳು ದಾಖಲಾಗಿ ವೆಬ್​ಸೈಟ್​ ಕ್ರಾಶ್​ ಆಗಿತ್ತು. ಆದರೆ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಸರಿಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 18ರಿಂದ 45 ವರ್ಷ ಒಳಗಿನ ಗುಂಪಿನಲ್ಲಿ ನೋಂದಣಿ ಮಾಡಿಸಿದವರಿಗೆ ಮಾತ್ರವೇ ಚುಚ್ಚುಮದ್ದು ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ನೇರವಾಗಿ ಲಸಿಕೆ ಕೇಂದ್ರಗಳಿಗೆ ಹೋಗುವವರಿಗೆ ಲಸಿಕೆ ಸಿಗುವುದಿಲ್ಲ. ದೇಶದಲ್ಲಿ ಈವರೆಗೆ 14 ಕೋಟಿಗೂ ಅಧಿಕ ಡೋಸ್​ ನೀಡಲಾಗಿದೆ. ಲಸಿಕೆ ಅಭಿಯಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ಮೇ 1ರಿಂದ ಈ ಪ್ರಕ್ರಿಯೆ ವೇಗ ಪಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದರೂ, ಹಲವೆಡೆ ಸಮಸ್ಯೆ ಮತ್ತು ಗೊಂದಲಗಳು ಕಂಡುಬಂದಿವೆ.

    ಎಷ್ಟೋ ರಾಜ್ಯಗಳಲ್ಲಿ ನೋಂದಣಿ ಮಾಡಿಸಿದ್ದರೂ 45 ವರ್ಷ ಮೇಲ್ಪಟ್ಟವರಿಗೇ ಲಸಿಕೆ ಲಭ್ಯವಾಗುತ್ತಿಲ್ಲ. “ಒಂದು ವಾರ ಬಿಟ್ಟು ಬನ್ನಿ’ ಎಂದು ಹಲವು ಕೇಂದ್ರಗಳಲ್ಲಿ ಹೇಳಲಾಗಿದ್ದರೆ, ಮತ್ತೆ ಕೆಲವೆಡೆಯಂತೂ, “ಲಸಿಕೆ ಯಾವಾಗ ಬರುತ್ತೆ, ಎಷ್ಟು ದಿನ ಎಂಬುದು ಗೊತ್ತಿಲ್ಲ’ ಎಂಬ ಉಡಾಫೆ ಉತ್ತರ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ ಎಂದಾದರೆ 18 ವರ್ಷ ಮೇಲ್ಪಟ್ಟವರಿಗೆ ಸಿಗುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಲಸಿಕೆ ಪೂರೈಕೆ ಬಗ್ಗೆ ಖಾತ್ರಿ ಇಲ್ಲದ್ದರಿಂದ ಮಹಾರಾಷ್ಟ್ರ ಸರ್ಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆಯನ್ನು ಮುಂದಕ್ಕೆ ಹಾಕಿದೆ. ಈ ಬಗ್ಗೆ ಅಲ್ಲಿನ ಸಂಪುಟ ಸಭೆ ನಿರ್ಣಯ ಕೈಗೊಂಡಿದ್ದು, ಯಾವಾಗ ಈ ಅಭಿಯಾನ ಆರಂಭಿಸಲಿದೆ ಎಂಬ ಮಾಹಿತಿ ನೀಡಿಲ್ಲ. ರಾಜಸ್ಥಾನ, ಜಾರ್ಖಂಡ್​, ಪಂಜಾಬ್​, ಛತ್ತೀಸ್​ಗಢ ರಾಜ್ಯಗಳ ಆರೋಗ್ಯ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಲಸಿಕೆ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅದೇನಿದ್ದರೂ, ಈ ಬಗೆಯ ಗೊಂದಲ ಮುಂದುವರಿದರೆ ಅಭಿಯಾನದ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು. ಹಾಗಾಗುವ ಮುನ್ನವೇ ಎಚ್ಚೆತ್ತುಕೊಂಡು, ಸೂಕ್ತ ಕ್ರಮ ಕೈಗೊಳ್ಳಬೇಕು. ಲಸಿಕೆಯ ಕೊರತೆ ಆಗದಂತೆ ನೋಡಿಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts