More

    ಮೈಮರೆವು ಬೇಡ; ಕರೊನಾ ಎರಡನೇ ಅಲೆ ಆತಂಕ

    ದೇಶದಲ್ಲಿ ಕರೊನಾ ಪ್ರಕರಣಗಳು ಒಂದು ಹಂತದಲ್ಲಿ ಏರಿಕೆ ಕಂಡು, ಈಗ ಸ್ವಲ್ಪ ಇಳಿಮುಖವಾಗಿರುವುದು ಇದ್ದುದರಲ್ಲಿ ಸಮಾಧಾನಕರ ಸಂಗತಿ. ಕೆಲ ದಿನಗಳ ಹಿಂದೆ ಪ್ರತಿನಿತ್ಯ 80 ಸಾವಿರ ದಾಟಿದ್ದ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ 30 ಸಾವಿರಕ್ಕಿಂತ ಕೆಳಗೆ ಇಳಿದಿದೆ. ದೆಹಲಿಯಂತಹ ಕೆಲ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಕಡೆಗೆ ಕರೊನಾ ಪ್ರಮಾಣ ತಗ್ಗಿದೆ. ಆದರೆ ಈಗ ಚಳಿಗಾಲ ಕಾಲಿಟ್ಟಿರುವುದರಿಂದ ಎಲ್ಲಿ ಮತ್ತೆ ಪ್ರಕರಣಗಳು ಜಾಸ್ತಿಯಾದೀತೋ ಎಂಬ ಆತಂಕ ಆರೋಗ್ಯ ತಜ್ಞರನ್ನು ಕಾಡುತ್ತಿದೆ. ಅಮೆರಿಕದಂತಹ ದೇಶಗಳಲ್ಲಿ ಹೀಗಾಗಿದ್ದರ ನಿದರ್ಶನ ಇದೆ. ಹೀಗಾಗಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಜತೆಯೇ ದೈನಂದಿನ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆ ಹಾಗೂ ಮತ್ತೊಂದೆಡೆ ಚಳಿ ಹೆಚ್ಚಳದಿಂದಾಗಿ, ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಮುಂತಾದ ತೊಂದರೆಗಳು ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಈ ತೊಂದರೆಗಳು ಕರೊನಾ ಲಕ್ಷಣಗಳೂ ಹೌದಾದ್ದರಿಂದ, ಕರೊನಾ ಎರಡನೇ ಅಲೆಯೇನಾದರೂ ಬರುವುದೇ ಎಂಬ ಆತಂಕವೂ ಉಂಟಾಗಿದೆ.

    ರಾಜ್ಯ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಕೂಡ ಇಂಥ ಸಾಧ್ಯತೆ ಬಗ್ಗೆ ವರದಿ ನೀಡಿರುವುದು ಗಮನಾರ್ಹ. ಚಳಿಗಾಲದ ಕಾಯಿಲೆಗಳ ಹೆಚ್ಚಳದಿಂದಾಗಿ ವೈದ್ಯರಲ್ಲಿ ಕೂಡ ಗೊಂದಲವುಂಟಾಗಿದೆ. ಇಂಥ ಲಕ್ಷಣ ಕಂಡುಬಂದ ಎಲ್ಲರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಬೇಕೇ ಎಂಬುದು ವೈದ್ಯರಿಗೆದುರಾಗಿರುವ ಪ್ರಶ್ನೆ. ಕೆಲ ವೈದ್ಯರ ಪ್ರಕಾರ, ಇಂತಹ ಲಕ್ಷಣಗಳಿದ್ದಲ್ಲಿ ಕರೊನಾ ಟೆಸ್ಟ್ ಮಾಡಿಸುವುದು ಉತ್ತಮ. ಈ ಬಗ್ಗೆ ಶೀಘ್ರ ಒಂದು ನಿಷ್ಕರ್ಷೆಗೆ ಬಂದು ಜನರಿಗೆ ಸಲಹೆ ನೀಡುವುದು ಉತ್ತಮ. ಏಕೆಂದರೆ ಜನರಲ್ಲಿಯೂ ಗೊಂದಲವಿದೆ. ಈಗ ಕರೊನಾ ನಿಯಂತ್ರ್ರಕ್ಕೆ ಬರುತ್ತಿದೆ ಎಂಬ ಹಂತದಲ್ಲಿ ಮತ್ತೆ ಹೆಚ್ಚಾಗುವುದಕ್ಕೆ ಆಸ್ಪದ ನೀಡಬಾರದು. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಮತ್ತು ಪ್ರಕರಣ ಹೆಚ್ಚು ಪತ್ತೆಯಾಗುತ್ತಿದ್ದ ಬೆಂಗಳೂರಿನಲ್ಲಿ ಸಹ ಈಗ ಪ್ರಕರಣಗಳ ಸಂಖ್ಯೆ ತಗ್ಗಿದೆ. ಈ ಪ್ರವೃತ್ತಿ ಮುಂದುವರಿಯಬೇಕು.

    ಇನ್ನೇನು ಕೆಲ ವಾರಗಳಲ್ಲಿ ಕರೊನಾ ಲಸಿಕೆ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಈ ಮಾತನ್ನು ವಿಶ್ವಾಸದಿಂದ ಹೇಳುತ್ತಿದ್ದಾರೆ. ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಕೂಡ ಈಗ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ನಲ್ಲಿದೆ. ವಿದೇಶಿ ಸಂಸ್ಥೆಗಳ ಜತೆ ಸಹ ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಲಸಿಕೆ ನಿರೀಕ್ಷೆಯಲ್ಲಿ ಭಾರತ ಸರ್ಕಾರ ಈಗಾಗಲೇ ಸಂಗ್ರಹ ಮತ್ತು ವಿತರಣೆ ಕುರಿತಂತೆ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದೆ. ಹಾಗಂತ ಲಸಿಕೆ ಇಂದೋ ನಾಳೆಯೋ ಸಿಕ್ಕುಬಿಡುತ್ತದೆ ಎಂಬ ಭರವಸೆಯಿಂದ ಜನರು ಅಲಕ್ಷ್ಯ ಮಾಡಲಾಗದು. ಏಕೆಂದರೆ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮುಂತಾಗಿ ಕರೊನಾ ವಾರಿಯರ್​ಗಳಿಗೆ ಆರಂಭಿಕ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಜನಸಾಮಾನ್ಯರಿಗೆ ನಂತರದ ಹಂತದಲ್ಲಿ ಸಿಗುತ್ತದೆ. ಅದರಲ್ಲೂ ಲಸಿಕೆ ಬಳಕೆಗೆ ಮುಕ್ತವಾದ ಮೇಲೆ ಸಹಜವಾಗಿಯೇ ವಿಶ್ವದ ಎಲ್ಲ ದೇಶಗಳಲ್ಲಿಯೂ ಒಂದೇ ಸಲಕ್ಕೆ ಅಗಾಧ ಬೇಡಿಕೆ ಬರುತ್ತದೆ. ಆದ್ದರಿಂದ ಲಸಿಕೆ ಎಲ್ಲರಿಗೂ ಸಿಗುವವರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯಲಾಗದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts