More

    ಸಾಮಯಿಕ: ‘ಇಳೆ ಎಂದರೆ ಬರಿ ಮಣ್ಣಲ್ಲ, ನಮಗೋ ನೋಡುವ ಕಣ್ಣಿಲ್ಲ’

    ಸಾಮಯಿಕ: ‘ಇಳೆ ಎಂದರೆ ಬರಿ ಮಣ್ಣಲ್ಲ, ನಮಗೋ ನೋಡುವ ಕಣ್ಣಿಲ್ಲ’

    ಭಾರತೀಯ ಮನಸ್ಸನ್ನು ಆರಂಭದಿಂದ ಇಂದಿನವರೆಗೆ ಗಾಢವಾಗಿ ಆವರಿಸಿಕೊಂಡು ಕಾಡಿರುವುದು ಭೂಮಿತತ್ವ. ನಮ್ಮ ಜನಪದರಿಗಂತೂ ಭೂಮಿಯೆಂದರೆ ಸರ್ವಸ್ವ. ಭೂಮಿಯ ಆರಾಧನೆಯಿಂದಲೇ ಅವರ ಎಲ್ಲ ಚಟುವಟಿಕೆ ಆರಂಭ. ಬೆಳಗಾಗಿ ಅವರೆದ್ದು ನೆನೆಯುವುದೂ ಭೂತಾಯಿಯನ್ನೇ! ಮಣ್ಣಿನ ಪೂಜೆ ಮಾಡೋದು ನಮ್ಮ ಸಂಸ್ಕೃತಿಯ ವಿಶಿಷ್ಟ ಅಂಶ. ಜನಪದರಲ್ಲಿ ವರ್ಷಾರಂಭ ಮಣ್ಣಿನ ಪೂಜೆಯಿಂದಲೇ ಆರಂಭವಾಗುತ್ತದೆ.

    ವೇದಗಳಲ್ಲಿಯೂ ದ್ಯಾವಾ ಮತ್ತು ಪೃಥಿವೀ ಇವರ ಸ್ಮರಣೆ ಮತ್ತೆ ಮತ್ತೆ ಕಾಣಿಸುತ್ತದೆ. ತಾಯಿ ಪೃಥ್ವಿಯ ಜೊತೆಗೆ ತಂದೆ ದ್ಯಾವಾ- ಇವರಿಬ್ಬರನ್ನೂ ಅಲ್ಲಿ ಜಗದ್ರಕ್ಷಕರೆಂದು ಕರೆಯಲಾಗಿದೆ. ಈ ಪರಿಕಲ್ಪನೆ ಬೇರೆ ಬೇರೆ ನೆಲೆಗಳಲ್ಲಿ ಅಭಿವ್ಯಕ್ತಿ ಪಡೆದಿದೆ. ಭಾರತೀಯ ತತ್ವಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿರುವ ಜಾನೈನ್ ಮಿಲ್ಲರ್​ನ ಪ್ರಕಾರ ಪೃಥ್ವಿ ಮೂಲದ್ರವ್ಯ ಧಾರಣೆಯ ಸಂಕೇತ, ದ್ಯಾವಾ ಚೈತನ್ಯದ ಸಂಕೇತ. ಮುಂದೆ ಇದೇ ‘ಪ್ರಕೃತಿ’ ಹಾಗೂ ‘ಪುರುಷ’ ಎಂಬರ್ಥದಲ್ಲಿ ರೂಢಿಗೆ ಬಂದಿತು. ವಿನಾಯಕ ಕೃಷ್ಣ ಗೋಕಾಕರಲ್ಲಿ ಈ ಪರಿಕಲ್ಪನೆಯ ಬಗೆಗೆ ಅರ್ಥಪೂರ್ಣ ಚಿಂತನೆಯಿದೆ.

    ಭೂಮಿ ಸಮೃದ್ಧಿಗೆ, ಸಂರಕ್ಷಣೆಗೆ ಮತ್ತೊಂದು ಹೆಸರು. ಆಕೆ ಸಹನಾಮಯಿ. ಆಕೆ ವಾತ್ಸಲ್ಯದಿಂದ ಈ ಲೋಕವನ್ನು ಸಲಹುತ್ತಿದ್ದಾಳೆ. ಈ ಭೂಮಿಯ ಸಕಲ ಜೀವಿಗಳ ರಕ್ಷಣೆ ಅವಳ ಮೇಲಿದೆ. ನಮ್ಮ ದ್ರಷ್ಟಾರರೆಲ್ಲ ಆಕೆಯ ಈ ಗುಣವನ್ನೇ ವೈಭವಿಸಿದ್ದಾರೆ. ‘ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು/ನಡುವೆ ಕಾಪಾಡುವುದು ತಾಯ ಕಣ್ಣು.’ (ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ, ಕೆ ಎಸ್​ನ ಸಮಗ್ರ ಕಾವ್ಯ, ಪುಟ289) ಕೈ ಬಿಡದು ಈ ಭೂಮಿ ನಮ್ಮನಿರುವನಕ ಎಂಬುದು ನಾವು ತಳೆದಿರುವ ದೃಢವಾದ ನಂಬಿಕೆ. ಇದು ಭೂಮಿಯ ಒಂದು ಮುಖ. ಆದರೆ ಆಕೆಯ ವ್ಯಕ್ತಿತ್ವಕ್ಕೆ ಇನ್ನೊಂದು ಮುಖವೂ ಇದೆ. ಅದು ಆಕೆಯ ಹಿಂಸಾಪ್ರವೃತ್ತಿಯ ಮುಖ. ಆಕೆಯ ವಾತ್ಸಲ್ಯದಲ್ಲಿ ಮಿಂದು ಮಿಂಚುವ ಜೀವಗಳು ಆಕೆ ಸಿಡಿದೆದ್ದಾಗ ಆ ಬೆಂಕಿಯಲ್ಲಿ ಬೆಂದು ಬೂದಿಯಾಗುತ್ತವೆ. ಭಾರತೀಯ ಚಿಂತನೆಯಲ್ಲಿ ಆಕೆಯ ಈ ಮುಖವೂ ಪ್ರಖರವಾಗಿಯೇ ಪ್ರಕಟವಾಗಿದೆ. ‘ನಿನಗಿಟ್ಟ ಹೆಸರು ಸಹನೆ/ನೀನೇಕೆ ಮುನಿವೆ?/ಹಗೆ ಯಾರು ನಿನಗೆ/ಇದು ಯಾವ ಯುಗದ ಬೇನೆ?’ ( ಶಿಲೆಗೆ ಹೂವಿನ ವಂಕಿ, ಕೆಎಸ್​ನ ಸಮಗ್ರ ಕಾವ್ಯ, ಪುಟ 363)

    ಭಾರತೀಯ ಚಿಂತನೆಯ ಪ್ರಕಾರ ಈ ಜಗತ್ತಿನ ಎಲ್ಲ ಚಟುವಟಿಕೆಗಳೂ ‘ಋತ’ಕ್ಕೆ ಒಳಪಟ್ಟಿವೆ. ಋತ ಎಂದರೆ ಕ್ರಮ, ಒಂದು ಬಗೆಯ ಸಾಮರಸ್ಯದ ವ್ಯವಸ್ಥೆ. ಕ್ರಮೇಣ ಅದಕ್ಕೆ ‘ಸತ್ಯ’ ಎಂಬ ಅರ್ಥವೂ ಸೇರಿಕೊಂಡಿತು. ಈ ಜಗತ್ತು ಒಂದು ಬಗೆಯ ಲೋಕಹೊಂದಾಣಿಕೆಯ ವ್ಯವಸ್ಥೆಯಿಂದ ನಡೆಯುತ್ತಿದೆ. ಇದನ್ನು ಎಲ್ಲರೂ ಪರಿಪಾಲಿಸಬೇಕು. ಅದಕ್ಕೆ ಭಂಗ ಬಂದರೆ ಅನಾಹುತ ಸಂಭವಿಸುತ್ತದೆ. ಅಂದರೆ ಋತವನ್ನು ಉಲ್ಲಂಘಿಸುವ, ಅದರ ವಿಕಾಸಕ್ಕೆ ಅಡ್ಡಿಬರುವ ಶಕ್ತಿಗಳನ್ನು ಭೂಮಿ ನಿರ್ದಯವಾಗಿ ಕೊಲ್ಲುತ್ತದೆ. ಭೂಮಿಯ ಸಲಹುವ ಶಕ್ತಿಯನ್ನು ವಿಕೃತಗೊಳಿಸಲು ಹೊಂಚು ಹಾಕುವ ಶಕ್ತಿಗಳು ಇದ್ದೇ ಇರುತ್ತವೆ. ಈ ಸವಾಲನ್ನು ಎದುರಿಸಲು, ಭೂಮಿ ತನ್ನ ಧಾರಣ ಶಕ್ತಿಯನ್ನು ಮರಳಿ ಪಡೆಯಲು ಹಿಂಸಾರೂಪ ತಾಳುತ್ತಾಳೆ.

    ಇದನ್ನೂ ಓದಿ: ಕ್ವಾರಂಟೈನ್​ ನಿಯಮ ಗೊತ್ತಿದ್ದರೆ ಮಾತ್ರ ರೈಲು ಟಿಕೆಟ್​

    ‘ಋತ’ದ ನಿಯತಿಗೆ ಭಂಗ ತರುವವರು ಯಾರು? ಮಾನವ ಜನಾಂಗದ ಇತಿಹಾಸವನ್ನು ಗಮನಿಸಿದರೆ, ಮಾನವನ ನೆಲದಾಸೆ, ಭೂಮಿಯನ್ನು ಆಳುವ ಹಂಬಲದ ಮನೋಭಾವ ಆಕೆಯನ್ನು ಕೆರಳುವಂತೆ ಮಾಡಿದೆ. ‘ಈ ವಸುಂಧರೆಯ ಮಗ ನಾನು’ ಎಂಬ ವಿನಯದ ನಿಲುವನ್ನು ನಿರಾಕರಿಸಿ, ಅಹಂಕಾರದಿಂದ ಭೂಮಿಯನ್ನಾಳಲು ಹೊರಟ ಮಾನವನ ದುರಂತವನ್ನು ಕನ್ನಡದ ಸಂವೇದನಾಶೀಲ ಮನಸ್ಸು ವಿಷಾದದಿಂದಲೇ ದಾಖಲಿಸಿದೆ. ‘ದಿನದಿನವೂ ಇದೇ ಹಾಡು/ನೆಲದಾಸೆಗೆ ನರಬಲಿ.’

    ಮನುಷ್ಯನ ಈ ‘ನೆಲದಾಸೆ’ಯ ದುರಂತವನ್ನು ಬೇಂದ್ರೆಯವರ ‘ಮೊದಲಗಿತ್ತಿ’ ಕವಿತೆ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಕವಿತೆ ಆರಂಭವಾಗುವುದೇ ಭೂಮಿಯ ಹಿಂಸಾರೂಪವನ್ನು ಪ್ರಕಟಿಸುವುದರ ಮೂಲಕ: ‘ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ/ಮೊದಲಗಿತ್ತಿಯಂತೆ ಮೆರೆಯುತಿಹೆ/ಹಿಂಡಾಗಿ ಪುಂಡರು ಅಂಡಲೆಯಲು ನಿನ್ನ/ನೆತ್ತರು ಒರೆಹಚ್ಚಿ ನೋಡಿರುವೆ/ಪಾತಾಳ ಕಂಡರು ಕೆಲ ತಾಯಿಗ್ಗಂಡರು/ಅವರನ್ನೂ ಮಡಿಲಾಗ ಮಲಗಿಸಿಹೆ/ಹದಿನಾರು ರಾಜರು ತಲೆಕೆಳಗಾದರು/ ಆದರು ತಲೆಯೆತ್ತಿ ನಿಂತಿರುವೆ/ನಿನ್ನ ತೇಜದ ಮುಂದೆ ರಾಜತೇಜವು ಕೂಸು/ಮೊದಲಗಿತ್ತಿಯು ನೀನು ಮೆರೆಯುತಿಹೆ’ (ಔದುಂಬರ ಗಾಥೆ ಸಂಪುಟ 4, ಪುಟ 16)

    ಈ ಭೂಮಿಯನ್ನು ತಾಯಿಯ ಪರಿಕಲ್ಪನೆಯಿಂದ ದೂರ ಮಾಡಿದವರು ‘ಭೂಪತಿ’ಗಳು, ಅಂದರೆ ರಾಜರು. ಇವರನ್ನು ಬೇಂದ್ರೆ ‘ತಾಯಿಗ್ಗಂಡರು’ ಎಂದು ಕರೆಯುವುದು ಅರ್ಥಪೂರ್ಣವಾಗಿದೆ. ಈ ತಾಯಿಗ್ಗಂಡ ಪುಂಡರೇ ಭೂಮಿಯ ಮೇಲೆ ಅಧಿಕಾರ ಸ್ಥಾಪಿಸಬಯಸಿ, ನೆತ್ತರು ಹರಿಸಿದವರು. ಪ್ರಭುತ್ವವೇ ಮಾನವ ಚರಿತ್ರೆಯಲ್ಲಿ ಅನೇಕ ಬಗೆಯ ಕ್ರೌರ್ಯಕ್ಕೆ ಕಾರಣವಾಗಿರುವುದು. ಪಂಪನ ಬಾಹುಬಲಿ ಹೇಳುವ ಹಾಗೆ ಈ ಪುಂಡರ ತಾಯಿಗ್ಗಂಡತನವೇ ‘ಸೋದರರೊಳ್ ಸೋದರರಂ/ ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು/ತ್ಪಾದಿಸುವುದು ಕೋಪಮನಳ/ವೀ ದೊರೆತೆನೆ ತೊಡರ್ವದೆಂತು ರಾಜ್ಯಶ್ರೀಯೊಳ್’ (ಆದಿಪುರಾಣ, ಆಶ್ವಾಸ 4, ಪದ್ಯ 122). ಇದರ ಪರಿಣಾಮ ಎದುರಿಸುವರು ಜನಸಾಮಾನ್ಯರು. ಆಧುನಿಕ ಬದುಕಿನಲ್ಲಿ ಭೂಪತಿಗಳೆಂದರೆ ನಮ್ಮ ಜನಪ್ರತಿನಿಧಿಗಳು. ಇತಿಹಾಸ ಬಲ್ಲವರಿಗೆ ರಾಜಕೀಯದ ಹೆಸರಿನಲ್ಲಿ ನಡೆಯುವ ರಕ್ತಪಾತ, ಕ್ರೌರ್ಯದ ಬಗ್ಗೆ ವಿವರಿಸುವ ಅಗತ್ಯವಿಲ್ಲ.

    ಈಗ ಭೂಮಿ ಎಂದರೆ ಪರಿಸರ ಎಂಬ ಪರಿಕಲ್ಪನೆ ರೂಢಿಗೆ ಬಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿವರ್ಷ ವಾಯುಮಾಲಿನ್ಯ ಸಂಬಂಧಿತ ರೋಗದಿಂದ ಚೀನಾವೊಂದರಲ್ಲೇ ಹತ್ತು ಲಕ್ಷ ಮಂದಿ ಸಾಯುತ್ತಾರೆಂದು ಡ್ಯೂಕ್ ವಿಶ್ವವಿದ್ಯಾಲಯದ ಪರಿಸರ ತಜ್ಞ ಜಿಮ್ ಸ್ಯಾಂಗ್ ನೀಡಿರುವ ಅಂಕಿಅಂಶ. ಕರೊನಾ ಮಾಡುತ್ತಿರುವ ಅನಾಹುತ ಇದರ ಮುಂದೆ ಏನೇನೂ ಅಲ್ಲ ಎಂಬಂತಿದೆ. ಈಗ ಜಗತ್ತು ವಾರ್ಷಿಕ 3500 ಕೋಟಿ ಟನ್ನುಗಳಷ್ಟು ಕಾರ್ಬನ್ ಡೈ ಆಕ್ಸೈಡನ್ನು ವಾಯುಗೋಳಕ್ಕೆ ಸೇರಿಸುತ್ತಿದೆ. 1900ರಲ್ಲಿ 200 ಕೋಟಿ ಟನ್ನುಗಳಷ್ಟಿತ್ತು. ಭೂ ವಿಜ್ಞಾನಿಗಳ ಪ್ರಕಾರ ಈ ಭೂಮಿ ರೂಪುಗೊಂಡು 460ಕೋಟಿ ವರ್ಷಗಳಾಗಿವೆ. ಆರಂಭದ ಮೊದಲ ನೂರು ಕೋಟಿ ವರ್ಷಗಳು ಭೂಮಿ ತನ್ನ ಸುತ್ತ ವಾಯುಗೋಳ ನಿರ್ವಿುಸಿಕೊಳ್ಳಲು, ಜೀವ ಸಂಕುಲಕ್ಕೆ ಅಗತ್ಯವಾದ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಲು ತೆಗೆದುಕೊಂಡಿತು. ವಾಯುಗೋಳವನ್ನು ರೂಪಿಸಿಕೊಳ್ಳಲು ಭೂಮಿಗೆ 100 ಕೋಟಿ ವರ್ಷಗಳು ಬೇಕಾಯಿತು. ಆದರೆ ಅದನ್ನು ನಾಶಮಾಡಲು ಮನುಷ್ಯ ತೆಗೆದುಕೊಂಡದ್ದು 120 ವರ್ಷಗಳು ಮಾತ್ರ.

    ಈಗ ಭೂಮಿ ಅಂದರೆ ಪರಿಸರ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಿದೆ. ಎಂತಹ ಬಲಿಷ್ಠ ರಾಷ್ಟ್ರಗಳೂ ಪ್ರಕೃತಿ ಒಡ್ಡಿರುವ ಆತಂಕದ ಸವಾಲಿನೆದುರು ಮಂಡಿಯೂರಿವೆ. ಮತ್ತೆ ಮನುಷ್ಯ ಇದನ್ನು ಎದುರಿಸಲು ಸಿದ್ಧನಾಗಬಹುದು; ಆ ವೇಳೆಗೆ ಬದುಕಿನ ಲಯವೇ ತಪ್ಪಿರುತ್ತದೆ. ಆದರೆ ಪ್ರಕೃತಿ ತನ್ನ ಲಯವನ್ನು ಮತ್ತೆ ಪಡೆದುಕೊಳ್ಳಲು ಹವಣಿಸುತ್ತಿದ್ದಾಳೆ. ನಮ್ಮ ಪರಿಸರದಿಂದಲೇ ಅನೇಕ ಜೀವಿಗಳನ್ನು ನಾವು ನಾಶಮಾಡಿದ ಸಂದರ್ಭದಲ್ಲಿ, ಗುಬ್ಬಚ್ಚಿಗಳು ನಮ್ಮ ಕಣ್ಣೆದುರೇ ಕಣ್ಮರೆಯಾದ ಹೊತ್ತಿನಲ್ಲಿ ನವಿಲುಗಳು ನಗರದಲ್ಲಿ ನರ್ತಿಸುವುದು ‘ಲೋಕ ಸಾಮರಸ್ಯ’ ಸಾಧಿಸುವ ‘ಋತ’ದ ಮಹಿಮೆ.

    ಇದನ್ನೂ ಓದಿ: ಜೂನ್‌ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಪರೀಕ್ಷೆ ಕುರಿತ ನಿರ್ಧಾರ ಪ್ರಕಟ: ಡಾ. ಅಶ್ವತ್ಥನಾರಾಯಣ

    ಬೇಂದ್ರೆ ಇಲ್ಲಿ ಅದನ್ನೇ ಹೇಳುತ್ತಿರುವುದು. ‘ನಿನ್ನ ತೇಜದ ಮುಂದೆ ರಾಜ ತೇಜವು ಕೂಸು/ ಮೊದಲಗಿತ್ತಿಯು ನೀನು ಮೆರೆಯುತಿಹೆ.’ ಕವಿತೆಯ ಎರಡನೆಯ ಭಾಗ ‘ಒಕ್ಕುಡಿತೆ ಅರೆಮುಕ್ಕು ಎನುತೆನುತೆ ಹಲಕೆಲವು/ಪಾನಿಪತ್ತುಗಳನ್ನು ಮುಕ್ಕುಳಿಸುವೆ/ಕೊಡಲಿ ರಾಮನು ಎರೆದ ಕೆನ್ನೀರ ಜಳಕಕ್ಕೆ/ಕೂದಲು ನೆನೆಯಲಿಲ್ಲೆನುತಿಹೆ/ ಅವತಾರಕೊಂದೊಂದು ಅಭಿಷೇಕ ಮಾಡಿದರು/ಎಣ್ಣೆಮಜ್ಜನ ಬೇರೆ ಬೇಕೆನುವೆ/ನೆತ್ತರ ಮೀಯಿಸುವ ಕೆಂಚರ ಕೈಯಿಳಿಸಿ/ಮೊದಲಗಿತ್ತಿಯೆ ನೀನು ಮೆರೆಯುತಿಹೆ.’

    ಭೂಮಿಗೆ ಇಂತಹ ಆಕ್ರಮಣ ಹೊಸದೇನಲ್ಲ. ದುರಹಂಕಾರಿ ವೀರರ ಅನೇಕ ಆಕ್ರಮಣಗಳನ್ನು ಅವಳು ಅರಗಿಸಿಕೊಂಡಿದ್ದಾಳೆ. ಅಂಥವರನ್ನು ಎದುರಿಸಿ ಅವರ ಅಹಂಕಾರ ಅಡಗಿಸಿ ತುಳಿದಿದ್ದಾಳೆ. ಪರಾಕ್ರಮಿಗಳೆಂದು ಮೆರೆದವರ ಭ್ರಮೆಯನ್ನು ಕಳಚಿದ್ದಾಳೆ. ಮನುಷ್ಯನ ಚರಿತ್ರೆಯೆಂದರೆ ಈ ಬಗೆಯ ಹುಚ್ಚುತನದ ರಕ್ತಪಾತದ ಕತೆಯೇ! ಸಂಚುಗಳ ಹುನ್ನಾರವೇ! ‘ಪ್ರಭುತ್ವ’ದ ಅವಿವೇಕ, ಅಚಾತುರ್ಯಗಳ ಪರಿಣಾಮದಿಂದುಂಟಾದ ದುರಂತದ ಕತೆಯೇ ಮಾನವ ಇತಿಹಾಸ.

    ಇದನ್ನೂ ಓದಿ: ಬ್ಯಾಟು ಹಿಡಿಯುತ್ತಿದ್ದ ಧವನ್ ಕೈಯಲ್ಲಿ ಕೊಳಲು

    ಆದರೆ ಇದೇ ಮುಂದುವರಿದರೆ ಭವಿಷ್ಯ ಹಸನಾಗುವುದೇ? ಅಧಿಕಾರದ ಅಹಂಕಾರದಿಂದ ಮೆರೆದವರನ್ನು ಭೂಮಿ ನಾಶಮಾಡಿದ್ದಾಳೆ, ನಿಜ. ಈ ಬಗೆಯ ಹಿಂಸೆಯೇ ಬದುಕಿನ ಗುರಿಯಾಗಬಾರದು. ಮತ್ತೆ ‘ಲೋಕ ಸಾಮರಸ್ಯ’ದ ಹಾದಿ ತೆರೆಯಬೇಕು. ಹಾಗಾಗಬೇಕಾದರೆ ಭೂಮಿ ‘ತಾಯಿ’ಯೆನ್ನುವ ಭಾವ ನಮ್ಮ ಬದುಕನ್ನು ತುಂಬಬೇಕು. ಆಕೆಯ ಮೊದಲಿನ ತಾಯಿಯ ವಾತ್ಸಲ್ಯ ಪ್ರಕಟಗೊಳ್ಳಬೇಕು. ಕವಿತೆಯ ಕಡೆಯ ಭಾಗದಲ್ಲಿ ಕವಿ ಅದನ್ನೇ ಹಾರೈಸುತ್ತಾರೆ: ‘ಹಾಲಿನ ಹೃದಯಕ್ಕೆ ಕುಬ್ಬುಸವನು ತೊಡಿಸಿ/ಹೂ ಮುಡಿಸಿಕೊಂಡೆಂದು ನೀ ನಲಿವೆ/ಬಸಿರು ತುಂಬಲು ಹಸಿರುಡುಗೆಯನುಟ್ಟೆಂದು/ವನವಾಸ ನವಮಾಸ ತೀರಿಸುವೆ/ಮುನ್ನಿಲ್ಲ ಇನ್ನಾರೆ ಮಕ್ಕಳದಿನವೆಂದು/ಮೂಡೀತು ಹೇಳವ್ವ ಬಿನ್ನವಿಸುವೆ/ಎಂದು ಮಂಗಲ ನಿನ್ನ ದೇವಗರ್ಭಕೆ ಇನ್ನೂ/ಮೊದಲಗಿತ್ತಿಯಂತೆ ಮೆರೆಯುತಿಹೆ.’

    ಸೀಮಂತದ ಚಿತ್ರವಿದು. ಭೂಮಿ ಮತ್ತೆ ತಾಯಿಯಾಗುವ ಪ್ರಕ್ರಿಯೆಯ ವಿವರಣೆ ಇಲ್ಲಿದೆ. ಕೀರ್ತಿನಾಥ ಕುರ್ತಕೋಟಿಯವರು ಹೇಳುವಂತೆ ‘ಈ ಕವಿತೆಯ ಮೊದಲ ಪದ್ಯಗಳಲ್ಲಿ ಅಭಿಷೇಕ, ಎಣ್ಣೆಮಜ್ಜನ, ಕೆನ್ನೀರ ಜಳಕ ಮೊದಲಾದ ವಿದ್ಯುಕ್ತ ಕ್ರಿಯೆಗಳ ವರ್ಣನೆ ಇದೆ. ಆದರೆ ಬಲಿದಾನದಂತೆ ಅವೆಲ್ಲ ಮನುಷ್ಯನ ಕಾಡು ಸ್ಥಿತಿಯ ಅವಶೇಷಗಳು. ಮನುಷ್ಯನಿಗೂ ಭೂಮಿಗೂ ನಡೆದಿರುವ ಸಂಘರ್ಷದ ಪ್ರತೀಕಗಳು. ಮೊದಲನೆಯ ನುಡಿಯಲ್ಲಿಯ ಕಾಮ ಮತ್ತು ಎರಡನೆಯ ನುಡಿಯಲ್ಲಿಯ ವೀರ ಇವೆರಡೂ ತೃಪ್ತಿಯನ್ನು ಕಾಣದೆ ಮತ್ತೆ ಮತ್ತೆ ಬೇಕೆನಿಸುವ ಉದ್ರಿಕ್ತ ಭಾವನೆಗಳು. ಅದೇ ಕೊನೆಯ ಪದ್ಯದಲ್ಲಿರುವ ವಿದ್ಯುಕ್ತ ಕ್ರಿಯೆಗಳು- ಕುಪ್ಪುಸ ತೊಡಿಸುವುದು, ಹೂ ಮುಡಿಸುವುದು, ಹಸಿರುಡುಗೆಯನ್ನು ಉಡಿಸುವುದು ಇತ್ಯಾದಿ- ತೃಪ್ತಿಯ, ಪರಿಣತಿಯ ಪ್ರತೀಕಗಳಾಗಿವೆ. ಭೂಮಿಯ ಮೇಲೆ ಮಕ್ಕಳ ರಾಜ್ಯವಾಗಬೇಕಾದರೆ ಮೊದಲು ಮನುಷ್ಯ ಮತ್ತು ಭೂಮಿಯ ಸಂಬಂಧ ನಿಜವಾದ ಅರ್ಥದಲ್ಲಿ ತಾಯಿ-ಮಕ್ಕಳ ಸಂಬಂಧವಾಗಬೇಕು’(ಭೃಂಗದ ಬೆನ್ನೇರಿ, ಪುಟ 100).

    ತಾಯಿ ಮಕ್ಕಳನ್ನು ಶಿಕ್ಷಿಸುವುದು ಅವರ ಒಳಿತಿಗಾಗಿಯೇ. ಆದರೆ ಈ ಅರಿವು ಅವರಿಗಾಗಬೇಕು. ಉಗ್ರ ರೂಪ ಅವಳ ನಿಜವ್ಯಕ್ತಿತ್ವವಲ್ಲ. ಋತದ ನಿಯತಿಯನ್ನು ಮನುಷ್ಯ ಮೀರಿದಾಗ, ಲೋಕಸಾಮರಸ್ಯ ಹಾಳಾದಾಗ ಅವಳು ಹೀಗೆ ಉಗ್ರಳಾಗುವುದು ಅನಿವಾರ್ಯ. ಸ್ವಭಾವತಃ ಕ್ಷಮಯಾಧರಿತ್ರಿಯಾದ ಅವಳು ಈ ಹಿಂಸಾಪ್ರವೃತ್ತಿಯನ್ನು ತ್ಯಜಿಸಿ ಮತ್ತೆ ಶಾಂತಳಾಗಬೇಕಾದರೆ ಅವಳ ಮೇಲೆ ನಡೆಯುತ್ತಿರುವ ಆಕ್ರಮಣ ನಿಲ್ಲಿಸಿ, ನಮ್ಮ ‘ಭೂಪತಿ’ಗಳು ತಮ್ಮ ಅಹಂಕಾರದ ಅಮಲಿನಿಂದ ಹೊರಬಂದು ಮತ್ತೆ ತಾಯಿ-ಮಕ್ಕಳ ಸಂಬಂಧ ಸ್ಥಾಪಿತವಾಗಬೇಕು. ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ/ಎಳ್ಳು ಜೀರಿಗೆ ಬೆಳೆಯುವ ಭೂತಾಯ/ಎದ್ದೊಂದು ಗಳಿಗೆ ನೆನೆದೇನ’ ಎಂಬುದು ನಮ್ಮ ಪ್ರಾರ್ಥನೆಯಾಗಬೇಕು.

    ಕರೊನಾ ರೂಪದಲ್ಲಿ ಈ ಎಚ್ಚರಿಕೆಯ ದನಿ ಕೇಳಿಸುತ್ತಿದೆ. ಹಾಗೆ ಕೇಳಿಸುತ್ತಿರುವಾಗಲೇ ವಿಶಾಖಪಟ್ಟಣದ ವಿಷಾನಿಲ ನಮ್ಮನ್ನು ಆವರಿಸುತ್ತಿದೆ. ದೂರದ ಯಮುನೆಯಿರಲಿ, ನಮ್ಮ ವೃಷಭಾವತಿ ತಿಳಿಯಾಗುತ್ತಿರುವ ಹೊತ್ತಿನಲ್ಲೇ ಮತ್ತೆ ಚಟುವಟಿಕೆ ಆರಂಭಿಸಿದ ಕೈಗಾರಿಕೆಗಳು ತ್ಯಾಜ್ಯವನ್ನು ಸುರಿದು ಚರಂಡಿ ಮಾಡುತ್ತಿವೆ. ತಾಯಿಯನ್ನು ಮಲಿನಗೊಳಿಸುವ ದುರುಳರಿರುವತನಕ ದುರಂತ ತಪ್ಪಿದ್ದಲ್ಲ. ಪರಿಸರ ತಿಳಿಯಾದರೆ ಮಾತ್ರ ನಮ್ಮ ಉಳಿವು ಎಂಬುದನ್ನು ‘ತಿಳಿ ಮನವೇ!’

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts