More

    ಕೋವಿಡ್​ ಕೇಸ್​ ನೂರಾರಿದ್ದಾಗಲೇ ಲಾಕ್​ಡೌನ್​ ಮಾಡಿದ್ದರಿಂದ ಪರಿಣಾಮಕಾರಿ ನಿಯಂತ್ರಣ: ಮೋದಿ

    ನವದೆಹಲಿ: ಭಾರತದಲ್ಲಿ ಕೋವಿಡ್​-19 ಪ್ರಕರಣಗಳು ನೂರಾರು ಸಂಖ್ಯೆಯಲ್ಲಿದ್ದಾಗಲೇ ಲಾಕ್​​ಡೌನ್​ ಮಾಡಿದ್ದರಿಂದ ಕರೊನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

    ಗ್ರ್ಯಾಂಡ್​ ಚಾಲೆಂಜಸ್​ ಆ್ಯನುವಲ್​ ಮೀಟಿಂಗ್ 2020ರಲ್ಲಿ ಇದೀಗವಷ್ಟೇ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಿದ ಅವರು, ಭಾರತದಲ್ಲಿ ಒಳ್ಳೆಯ ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳೂ ಇವೆ. ಅವುಗಳು ನಮ್ಮ ದೊಡ್ಡ ಆಸ್ತಿ. ಕರೊನಾ ಪಿಡುಗನ್ನು ಎದುರಿಸಲು ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

    ಯುಎಸ್​ಗಿಂತ ನಾಲ್ಕುಪಟ್ಟು ಜನರು ಭಾರತದಲ್ಲಿದ್ದಾರೆ. ಬೇರೆ ದೊಡ್ಡ ವಿದೇಶಗಳಲ್ಲಿರುವಷ್ಟು ಜನರು ಭಾರತದ ಕೆಲವು ರಾಜ್ಯಗಳಲ್ಲೇ ಇದ್ದಾರೆ. ಅದಾಗ್ಯೂ ಭಾರತ ಕರೊನಾ ಪಿಡುಗನ್ನು ಸಮರ್ಥವಾಗಿ ಎದುರಿಸಿದ್ದು, ನಮ್ಮಲ್ಲಿ ಕೋವಿಡ್​ ಸಾವಿನ ಪ್ರಮಾಣ ತೀರಾ ಕಡಿಮೆ ಇದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಒಂದು ದಿನದಲ್ಲಿ ಕರೊನಾದಿಂದ ಸಂಭವಿಸುವ ಸಾವು ಹಾಗೂ ಹೊಸ ಕೇಸ್​ಗಳ ಪ್ರಮಾಣವೂ ತಗ್ಗಿದೆ. ಅತ್ಯಧಿಕ ಅಂದರೆ ಶೇ. 88 ಚೇತರಿಕೆ ಪ್ರಮಾಣವನ್ನು ಭಾರತ ಹೊಂದಿದೆ. ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ನೂರಾರು ಇದ್ದಾಗಲೇ ಲಾಕ್​ಡೌನ್​ ಘೋಷಿಸಿದ್ದು, ಮಾಸ್ಕ್​ ಬಳಕೆ ಹಾಗೂ ರ‍್ಯಾಪಿಡ್ ಆ್ಯಂಟಿಜನ್​ ಪರೀಕ್ಷೆಯನ್ನೂ ಬೇಗ ಅಳವಡಿಸಿಕೊಂಡಿದ್ದರಿಂದ ಇವೆಲ್ಲ ಸಾಧ್ಯವಾಯಿತು. ಮುಂದೆ ಲಸಿಕೆ ಕಂಡುಹಿಡಿಯುವಲ್ಲೂ ಭಾರತ ಇಷ್ಟೇ ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸಲಿದೆ ಎಂದರು.

    ಕರೊನಾ ಪಿಡುಗು ನಮಗೆ ಟೀಮ್​ ವರ್ಕ್​ನ ಮಹತ್ವವನ್ನು ತಿಳಿಸಿದೆ. ಯಾವುದೇ ಭೇದ-ಭಾವ ಇಲ್ಲದೆ ತಂಡವಾಗಿ ಕೆಲಸ ಮಾಡುವುದನ್ನು ಅದು ಹೇಳಿಕೊಟ್ಟಿದೆ. ಈ ಗ್ರ್ಯಾಂಡ್​ ಚಾಲೆಂಜಸ್​ ಆ್ಯನುವಲ್​ ಮೀಟಿಂಗ್ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ವರ್ಚುವಲ್​ ಆಗಿ ನಡೆಯುತ್ತಿದೆ. ತಂತ್ರಜ್ಞಾನ ಎಷ್ಟು ಶಕ್ತಿಶಾಲಿ ಆಗಿದೆ ಎಂದರೆ ಇಂಥ ಸಂದರ್ಭದಲ್ಲೂ ನಾವು ಬೇರೆ ಆಗಿರದಂತೆ ನೋಡಿಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts