More

    ಪ್ರತಿ ಮನೆಗೆ ‘ಬಚ್ಚಲು ಗುಂಡಿ’ ನಿರ್ಮಾಣ

    ಬೆಳಗಾವಿ: ಹಳ್ಳಿಗಳನ್ನು ಕೊಳಚೆ ನೀರು ಮುಕ್ತ ಗ್ರಾಮಗಳನ್ನಾಗಿ ಮಾಡಲು ಸಂಕಲ್ಪ ತೊಟ್ಟಿರುವ ಸರ್ಕಾರ, ಇದೀಗ ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಬಿಡುವುದನ್ನು ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾಗಿದೆ. ಪ್ರತಿ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಜಾರಿಗೊಳಿಸಿದೆ.

    ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಪುನಶ್ಚೇತನಗೊಳಿಸಿ ಅಭಿವೃದ್ಧಿ ಗೊಳಿಸುವುದು, ಕೊಳಚೆ ನೀರು ಸದ್ಬಳಕೆ ಮಾಡಿಕೊಳ್ಳುವುದ, ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಗಟ್ಟುವ ಯೋಜನೆ ಇದಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಬಚ್ಚಲು ಗುಂಡಿ ನಿರ್ಮಿಸಿಕೊಡಲು ಸರ್ಕಾರ ತೀರ್ಮಾನಿಸಿದೆ.

    ಸ್ವಚ್ಛ ಗ್ರಾಮಕ್ಕೆ ಸಂಕಲ್ಪ: ಜಿಲ್ಲೆಯ 506 ಗ್ರಾಪಂ ವ್ಯಾಪ್ತಿಯ 980ಕ್ಕೂ ಅಧಿಕ ಹಳ್ಳಿಗಳಲ್ಲಿ ಶೇ. 78ರಷ್ಟು ಗ್ರಾಮಗಳಲ್ಲಿನ ಬಚ್ಚಲು ಮನೆ ನೀರು ಚರಂಡಿ, ರಸ್ತೆ ಮೇಲೆಯೇ ಹರಿಯುತ್ತಿದೆ. ಇನ್ನೂ ಕೆಲವೆಡೆ ಕೊಳಚೆ ನೀರು ಜಲಮೂಲ ಸೇರಿ ಕಲುಷಿತಗೊಳಿಸುತ್ತಿದೆ. ಈ ನೀರನ್ನು ಜನ-ಜಾನುವಾರುಗಳು ಸೇವಿಸಿ ಸಮಸ್ಯೆ ಆರೋಗ್ಯ ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಭಾಗದ ಮನೆಗಳಿಗೆ ಬಚ್ಚಲು ಗುಂಡಿ ನಿರ್ಮಿಸಿಕೊಡಲು ಮುಂದಾಗಿದೆ.

    ಅಂತರ್ಜಲ ಅಭಿವೃದ್ಧಿ: ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಮನೆಯವರ ಅಡುಗೆ ಹಾಗೂ ಬಚ್ಚಲು ಮನೆಯ ನೀರು ವ್ಯರ್ಥವಾಗುವುದನ್ನು ತಡೆಯಲು ಇಂಗು ಗುಂಡಿಗೆ ಹರಿಬಿಡಲಾಗುವುದು. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಅಲ್ಲದೆ, ಸಂಗ್ರಹಗೊಳ್ಳುವ ನೀರನ್ನು ಮರು ಬಳಕೆ ಮಾಡಿಕೊಳ್ಳಬಹುದು. ಭವಿಷ್ಯದಲ್ಲಿ ಬಚ್ಚಲು ಗುಂಡಿಗಳ ನಿರ್ಮಾಣವನ್ನು ಕಡ್ಡಾಯ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಾವಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 506 ಗ್ರಾಪಂಗಳಿಗೆ ತಲಾ 50 ರಂತೆ 25,300 ಬಚ್ಚಲು ಗುಂಡಿ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗೆ 17 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಅಕ್ಟೋಬರ್ 2ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು.
    | ಎಸ್.ಬಿ. ಮುಳ್ಳಳ್ಳಿ ಜಿಪಂ ಉಪ ಕಾರ್ಯದರ್ಶಿ
    (ಅಭಿವೃದ್ಧಿ), ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts