More

    ಡಿವೈಎಸ್ಪಿ ಕಚೇರಿ, ಗ್ರಾಮಾಂತರ ಠಾಣೆ ನಿಯಂತ್ರಿತ ವಲಯ

    ನಂಜನಗೂಡು: ಕರೊನಾ ಸೋಂಕಿತ ಪೊಲೀಸ್ ಪೇದೆಯೊಬ್ಬರ ಸಂಪರ್ಕದಿಂದಾಗಿ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಡಿವೈಎಸ್‌ಪಿ ಕಚೇರಿ ಆವರಣವನ್ನು ಸೋಮವಾರ ನಿಯಂತ್ರಿತ ವಲಯವನ್ನಾಗಿ ಘೋಷಿಸಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಖಾಸಗಿ ಲಾಡ್ಜ್‌ವೊಂದರಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ನಗರದ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣವೊಂದರ ವಿಚಾರಣೆಗೆಂದು ಆಗಮಿಸಿದ್ದ ಪೇದೆಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಠಾಣೆಯ ಪ್ರವೇಶ ದ್ವಾರವನ್ನು ಬಂದ್ ಮಾಡಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

    ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಕೆಲಸ ಕಾರ್ಯಗಳನ್ನು ನಗರದ ಸಿನಿಮಾ ರಸ್ತೆಯಲ್ಲಿರುವ ಪಟ್ಟಣ ಪೊಲೀಸ್ ಠಾಣೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

    ತಿ.ನರಸೀಪುರ ಪೊಲೀಸ್ ಠಾಣೆೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳ ತಂಡದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ಕರೊನಾ ಸೋಂಕು ತಗುಲಿದೆ ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ 48 ಸಿಬ್ಬಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.

    ಇದರೊಂದಿಗೆ 26 ಪೋಲಿಸ್ ಸಿಬ್ಬಂದಿಯನ್ನು ನಗರದ ಎರಡು ವಸತಿಗೃಹಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ಪೊಲೀಸ್ ಠಾಣೆ ಸುತ್ತಲಿನ ಪ್ರದೇಶದಲ್ಲಿ ಸೋಂಕು ನಿವಾರಣಾ ದ್ರಾವಣವನ್ನು ಸಿಂಪಡಿಸಿ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಕಟ್ಟಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

    ನಗರಸಭೆಯಲ್ಲೂ ಮುನ್ನೆಚ್ಚರಿಕೆ: ನಗರಸಭೆ ಕಚೇರಿಗೆ ನಿತ್ಯ ಕೆಲಸ ಕಾರ್ಯಗಳಿಗೆ ಆಗಮಿಸುವ ಸಾರ್ವಜನಿಕರ ನೂಕು ನುಗ್ಗಲು ತಪ್ಪಿಸಿ ಪರಸ್ಪರ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುವ ಸಲುವಾಗಿ ಸೋಮವಾರದಿಂದ ಸಾರ್ವಜನಿಕರಿಗೆ ನಗರಸಭೆಯಲ್ಲಿ ನಿಯಂತ್ರಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕಚೇರಿ ಪ್ರವೇಶ ದ್ವಾರದಲ್ಲಿಯೇ ಜನರನ್ನು ನಿರ್ಬಂಧಿಸಿ ಅಗತ್ಯವುಳ್ಳವರನ್ನು ಮಾತ್ರ ಕಚೇರಿಯೊಳಗೆ ಸರತಿ ಸಾಲಿನಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts