More

    ಸಂಸ್ಕೃತಿ, ಪರಂಪರೆ ಬೋಧನೆ ರಂಭಾಪುರಿ ಗುರುಪೀಠದ ದಸರಾ ಉದ್ದೇಶ

    ಬಾಳೆಹೊನ್ನೂರು: ರಂಭಾಪುರಿ ಪೀಠದಿಂದ ನಡೆಯುವ ಗುರುಪೀಠದ ದಸರಾಕ್ಕೆ ತನ್ನದೇ ಆದ ಇತಿಹಾಸವಿದೆ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ರಂಭಾಪುರಿ ಪೀಠದಲ್ಲಿ ಶನಿವಾರ ಆರಂಭವಾಗಲಿರುವ ಸಾಂಪ್ರದಾಯಿಕ ದಸರಾ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ರಾಜ್ಯದ ಪ್ರಾಂತ ಪ್ರದೇಶಗಳಲ್ಲಿ ಶರನ್ನವರಾತ್ರಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯದ ಅರಸರು ಶರನ್ನವರಾತ್ರಿ ದಸರಾ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದರು. ನಂತರದ ದಿನಗಳಲ್ಲಿ ಮೈಸೂರಿನ ರಾಜಮನೆತನ ಶರನ್ನವರಾತ್ರಿಯನ್ನು ಅರ್ಥ ಪೂರ್ಣವಾಗಿ ತನ್ನದೇ ಆದ ಪ್ರಭಾವ ಬೀರುವಂತೆ ಜನಮನಕ್ಕೆ ಮುಟ್ಟುವಂತೆ ನಡೆಸಿಕೊಂಡು ಬಂದರು. ಮೈಸೂರಿನಲ್ಲಿ ನಡೆಯುವಂತಹ ದಸರಾ ಮಹೋತ್ಸವ ಅರಮನೆ ದಸರಾವಾಗಿದೆ ಎಂದರು.

    ಗುರುಪೀಠಗಳಲ್ಲಿ ಶರನ್ನವರಾತ್ರಿ ಉತ್ಸವ ವಿದ್ಯುಕ್ತವಾಗಿ ನಡೆಯುತ್ತಿದೆ ಎಂದರೆ ಅದು ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಮಾತ್ರ. ರಂಭಾಪುರಿ ಪೀಠದ ಪ್ರಸ್ತುತ 121ನೇ ಜಗದ್ಗುರುಗಳಾದ ನಾವು ಕಳೆದ 28 ವರ್ಷಗಳಿಂದ ರಾಜ್ಯದ ವಿವಿಧೆಡೆ ಮಾತ್ರವಲ್ಲದೇ ಹೊರರಾಜ್ಯದಲ್ಲಿಯೂ ದಸರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ ಆಯಾ ಪ್ರಾಂತ್ಯದ ಜನರಿಗೆ ಸಂಸ್ಕೃತಿ, ಪರಂಪರೆ, ಆದರ್ಶ, ಸಾಮಾಜಿಕ ಮೌಲ್ಯಗಳನ್ನು ತಿಳಿಸಿಕೊಂಡು ಬರುತ್ತಿದ್ದೇವೆ. ಇದೇ ರಂಭಾಪುರಿ ಗುರುಪೀಠದ ಶರನ್ನವರಾತ್ರಿಯ ಉದ್ದೇಶ ಎಂದರು.

    ಮುಂದಿನ ವರ್ಷ ಬೇಲೂರಿನಲ್ಲಿ ಉತ್ಸವ : ಈ ವರ್ಷ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜಗದ್ಗುರುಗಳ ದಸರಾ ನಡೆಸಲು ಆ ಭಾಗದ ಭಕ್ತರು ಸಂಕಲ್ಪ ಮಾಡಿದ್ದರು. ಆದರೆ ಕರೋನಾ ಸೋಂಕು ಹಿನ್ನೆಲೆಯಲ್ಲಿ ಈ ವರ್ಷ ಶ್ರೀ ಪೀಠದಲ್ಲಿಯೇ ಸಂಪ್ರದಾಯ ಆಚರಣೆ ಮಾಡಲಾಗುವುದು. ಪವಿತ್ರವಾದ ಪರಂಪರೆ ನಿರಂತರವಾಗಿ ಆಚರಿಸಿಕೊಂಡು ಬಂದ ನವರಾತ್ರಿ ನಡೆಯಬೇಕು ಎಂಬುದೇ ನಮ್ಮ ಇಚ್ಛೆಯಾಗಿದೆ. ಬೇಲೂರಿನಲ್ಲಿ ಮುಂದಿನ ವರ್ಷದ ಶರನ್ನವರಾತ್ರಿ ಉತ್ಸವ ನಡೆಸಲಾಗುವುದು ಎಂದು ಶ್ರೀಗಳು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts