More

    ಜ.24ಕ್ಕೆ ರಾಮಕೃಷ್ಣ-ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವ

    ತುಮಕೂರು: ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವವನ್ನು ಜ.24, 25ರಂದು ಆಯೋಜಿಸಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತೀ ತಿಳಿಸಿದರು.

    ಆಶ್ರಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1992ರ ನವೆಂಬರ್ 22ರಂದು ಪ್ರಾರಂಭವಾದ ಆಶ್ರಮ ಸಮಾಜದ ಎಲ್ಲ ಸ್ತರದ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ ಎಂದರು. 24ರ ಬೆಳಗ್ಗೆ 9.30ಕ್ಕೆ ಶ್ರೀ ಶಾರದಾದೇವಿ ಅವರ 167ನೇ ಜನ್ಮದಿನೋತ್ಸವ ಅಂಗವಾಗಿ ‘ಜೀವಂತ ದುರ್ಗಾಪೂಜೆ’ ಕಾರ್ಯಕ್ರಮಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿದ್ದು, ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದಜೀ ಸಾನ್ನಿಧ್ಯ ವಹಿಸುವರು ಎಂದರು.

    ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಶಿವಣ್ಣ, ಜಿಡಿಎ ಫೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಅರ್ಚನಾ, ರಾಮಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ್ ಭಾಗವಹಿಸುವರು ಎಂದರು.

    ಜೀವಂತ ದುರ್ಗಾಪೂಜೆ ಕಾರ್ಯಕ್ರಮದಲ್ಲಿ ಕೊಳೆಗೇರಿಗಳಲ್ಲಿ ವಾಸ ಮಾಡುವ, ರಸ್ತೆಯಲ್ಲಿ ಭಿಕ್ಷೆ ಎತ್ತುವ ಸುಮಾರು 200 ಅಶಕ್ತ ತಾಯಂದಿರನ್ನು ಪೂರ್ಣಕುಂಭದೊಂದಿಗೆ ಆಶ್ರಮಕ್ಕೆ ಸ್ವಾಗತಿಸಿ, ಶಾರದಾದೇವಿ ಎಂದೇ ವಿಧ್ಯುಕ್ತವಾಗಿ ಪೂಜಿಸಿ ಅನ್ನದಾನ-ವಸ್ತ್ರದಾನ-ಧಾನ್ಯದಾನಗಳಿಂದ ಸತ್ಕರಿಸಲಾಗುವುದು ಎಂದು ಹೇಳಿದರು.

    ಅಂದು ಸಂಜೆ 5.45ಕ್ಕೆ ಶ್ರೀ ರಾಮಕೃಷ್ಣ ಚರಿತೆ ಕಥಾ ಪ್ರಸಂಗ ಆಧರಿಸಿದ ಗಮಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಾಣಿ ವಾದಿರಾಜ್ ಹಾಗೂ ಸಾಫ್ಟ್‌ವೇರ್ ಗೌತಮ್ ಸಮೀರ ಗಮಕ ವ್ಯಾಖ್ಯಾನ ನೆರವೇರಿಸಿಕೊಡುವರು. ಜ.25ರಂದು ಬೆಳಗ್ಗೆ 10.30ಕ್ಕೆ ತುಮಕೂರು ಜಿಲ್ಲೆಯ ಸಾವಿರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಶಿಕ್ಷಕರ ಸಮ್ಮೇಳನ ಏರ್ಪಡಿಸಲಾಗಿದೆ. ಸ್ವಾಮಿ ಮಂಗಳನಾಥಾನಂದಜೀ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುವರು.

    ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು, ಪ್ರಾಧ್ಯಾಪಕಿ ಡಾ.ಅನಸೂಯ ವಿಶೇಷ ಉಪನ್ಯಾಸ ನೀಡುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಸಿ.ರಂಗಧಾಮಪ್ಪ ಮತ್ತಿತರರು ಭಾಗವಹಿಸುವರು. ಸಂಜೆ 5.30ಕ್ಕೆ ಆಶ್ರಮದ ಶಾರದಾ ಮಾಧುರ್ಯ ಸಂಗೀತ ವೇದಿಕೆ ಅಡಿಯಲ್ಲಿ ವಿಶೇಷ ವಿಶ್ವ ಸಂಗೀತ ಕಾರ್ಯಕ್ರಮ ಸುಸ್ವರ ಸಮೈಕ್ಯ ಆಯೋಜಿಸಲಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts