More

    ಕಾವ್ಯ ತಪಸ್ವಿ ಎಚ್ಚೆಸ್ವಿ: ನಾವು ಪತ್ರೊಡೆ ಮಿತ್ರರು…

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.

    ಕವಿ ಎಚ್ಚೆಸ್ವಿಯವರು ತಮ್ಮೆಲ್ಲ ಚಿಂತನೆ ಮತ್ತು ಏಕಾಗ್ರತೆಯನ್ನು ಬರವಣಿಗೆಗೆ ಬಳಸುತ್ತಾರೆ. ಹೀಗಾಗಿ ಲೌಕಿಕ ವ್ಯವಹಾರದಲ್ಲಿ ಅವರು ಅಷ್ಟು ಆಸಕ್ತರಲ್ಲ. ನೀವು ಅವರ ಮೊಬೈಲಿಗೆ ಫೋನ್ ಮಾಡಿದರೆ ತಕ್ಷಣ ಕರೆ ಸ್ವೀಕರಿಸುವ ಸಾಧ್ಯತೆಗಳು ತೀರಾ ಕಡಿಮೆ. ಏಕೆಂದರೆ ರಾತ್ರಿ ಮಲಗುವಾಗ ಮೌನವಾಗಿಸಿದ್ದ ಮೊಬೈಲನ್ನು ಬೆಳಿಗ್ಗೆ ರಿಂಗಿಂಗ್ ಸ್ಥಿತಿಗೆ ತರಲು ಮರೆತಿರುತ್ತಾರೆ. ಅಥವಾ ಮೊಬೈಲನ್ನು ಎರಡನೆ ಸೊಸೆಯ ಮನೆಯಲ್ಲಿಟ್ಟು ತಿಂಡಿ ತಿನ್ನಲು ನಾಲ್ಕನೆ ಸೊಸೆಯ ಮನೆಗೆ ಹೋಗಿರುತ್ತಾರೆ.

    ಕಾವ್ಯ ತಪಸ್ವಿ ಎಚ್ಚೆಸ್ವಿ: ನಾವು ಪತ್ರೊಡೆ ಮಿತ್ರರು...ಸಾಹಿತ್ಯ ಬಿಟ್ಟರೆ ಎಚ್ಚೆಸ್ವಿ ತುಂಬಾ ಆಸ್ವಾದಿಸುವುದು ಊಟ ತಿಂಡಿ. ನನ್ನ ಮಡದಿ ಭಾರತಿ ಮಾಡುವ ಕೆಸುವಿನ ಪತ್ರೊಡೆ ಅವರಿಗೆ ಇಷ್ಟ. ಆಕೆಯನ್ನು ಕಂಡಾಗಲೆಲ್ಲ ‘ನಿಮ್ಮ ಮನೆಗೆ ಪತ್ರೊಡೆ ತಿನ್ನಲು ಯಾವಾಗ ಕರೆಯುತ್ತೀರಿ?’ ಎಂದು ಕೇಳುತ್ತಾರೆ. ಪತ್ರ ಮಿತ್ರರ ಹಾಗೆ ಭಾರತಿ ಮತ್ತು ಎಚ್ಚೆಸ್ವಿ ಪತ್ರೊಡೆ ಮಿತ್ರರು!

    ಇತ್ತೀಚೆಗೆ ಎಚ್ಚೆಸ್ವಿಯವರ ಜತೆ ನಾನು ಬಳ್ಳಾರಿಗೆ ಹೋಗಬೇಕಿತ್ತು. ಅಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದ ಗೆಳೆಯ ಎರ್ರಿಸ್ವಾಮಿ ಅಪರಾಹ್ನ 3.45ಕ್ಕೆ ಹೊರಡುವ ವಿಮಾನದಲ್ಲಿ ನಮ್ಮಿಬ್ಬರಿಗೂ ಟಿಕೆಟ್ ಮಾಡಿದ್ದರು. ಎಚ್ಚೆಸ್ವಿಯವರ ಹತ್ತಿರ ‘ಟ್ಯಾಕ್ಸಿ ಮಾಡಿಕೊಂಡು ಮಧ್ಯಾಹ್ನ 12.30ರೊಳಗೆ ನಮ್ಮ ಮನೆಗೆ ಬನ್ನಿ. ಒಟ್ಟಿಗೆ ಊಟ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗೋಣ’ ಅಂತ ಹೇಳಿದ್ದೆ.

    ಎಚ್ಚೆಸ್ವಿಯವರು ‘ಸರಿ, ಹಾಗೇ ಮಾಡೋಣ. ತೊಂದರೆ ಆಗದಿದ್ದರೆ ಭಾರತಿ ಹತ್ತಿರ ಹಲಸಿನಕಾಯಿ ಹುಳಿ ಮಾಡಲು ಹೇಳಿ’ ಅಂದಿದ್ದರು. ಭಾರತಿ ಹಲಸಿನಕಾಯಿ ಹುಳಿಯ ಜತೆಗೆ ಪತ್ರೊಡೆ ಮತ್ತು ತಂಬುಳಿಯನ್ನೂ ಮಾಡಿದಳು. ಗಂಟೆ 12.30 ದಾಟಿದರೂ ಎಚ್ಚೆಸ್ವಿಯವರ ಪತ್ತೆ ಇಲ್ಲ. ಫೋನ್ ಮಾಡಿ ವಿಚಾರಿಸಿದಾಗ ಸಮ್ಮೇಳನದ ಅಧ್ಯಕ್ಷ ಭಾಷಣದ ಪ್ರತಿಯನ್ನು ಕೊಡಲು ಕ.ಸಾ.ಪ. ಕಚೇರಿಗೆ ಹೋಗಿ ಅಲ್ಲಿಂದ ನಿಮ್ಮ ಮನೆಯತ್ತ ಬರುತ್ತಿದ್ದೇನೆ ಎಂದರು. ಅವರು ನಮ್ಮ ಮನೆಗೆ ಬಂದಾಗ 1.15 ಆಗಿತ್ತು. ಬೆಂಗಳೂರಿನ ದಕ್ಷಿಣ ತುದಿಯಲ್ಲಿರುವ ನಮ್ಮ ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಕನಿಷ್ಠ ಒಂದೂ ಮುಕ್ಕಾಲು ಗಂಟೆ ಬೇಕು.

    ಊಟ ಮಾಡಿ ಹೊರಟರೆ ವಿಮಾನ ತಪ್ಪಿ ಹೋಗುವುದು ಗ್ಯಾರಂಟಿ. ಹೀಗಾಗಿ ಅವರಿಗಾಗಿ ತಯಾರಿಸಿದ ಊಟವನ್ನು ಭಾರತಿ ನೀಟಾಗಿ ಪ್ಯಾಕ್ ಮಾಡಿ ಕೊಟ್ಟಳು. ಕಾರಿನಲ್ಲೇ ಊಟ ಮುಗಿಸಿ ಬೋರ್ಡಿಂಗ್ ಗೇಟು ಇನ್ನೇನು ಮುಚ್ಚುತ್ತದೆ ಅನ್ನುವಾಗ ಇಬ್ಬರೂ ಓಡುತ್ತಾ ಹೋದೆವು. ನಮ್ಮ ಮನೆಯಲ್ಲಿ ಊಟ ಮುಗಿಸಿ ನಂತರ ವಿಮಾನ ನಿಲ್ದಾಣದ ದಾರಿಯಲ್ಲೇ ಇರುವ ಸಾಹಿತ್ಯ ಪರಿಷತ್ತಿಗೆ ಹೋಗಿದ್ದರೆ ಇಷ್ಟೆಲ್ಲ ಗಡಿಬಿಡಿ ಆಗುತ್ತಿರಲಿಲ್ಲ. ಆದರೆ ಕವಿಗಳಿಗೆ ಅದು ಹೊಳೆಯಲೇ ಇಲ್ಲವಂತೆ. ಬಹುಶಃ ಅವರಿಗೆೆ ಹೊಳೆಯುವುದು ಒಳ್ಳೆಯ ಕವಿತೆಗಳು ಮಾತ್ರ.

    | ಎಚ್. ಡುಂಡಿರಾಜ್ ಕವಿ ಹಾಗೂ ನಾಟಕಕಾರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts