More

    ರಂಗಸಂಪದ ತಂಡದ ಕಾರ್ಯ ಶ್ಲಾಘನೀಯ

    ಬೆಳಗಾವಿ : ನಗರದ ರಂಗಸಂಪದ ತಂಡದವರು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಶಿರೀಷ ಜೋಶಿ ಅವರು ಬರೆದು ನಿರ್ದೇಶನ ಮಾಡಿರುವ ‘ಕವಿಗಳು ಸರ್ ಕವಿಗಳು’ ಹಾಸ್ಯ ಪ್ರಧಾನ ನಾಟಕ ಭಾನುವಾರ ಪ್ರದರ್ಶನಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿದ ಜಿ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಾಗರಾಜ ಹೆಗಡೆ ಮಾತನಾಡಿ, ಗಡಿ ಭಾಗದ ಬೆಳಗಾವಿಯಲ್ಲಿ ಸುಮಾರು ನಾಲ್ಕು ದಶಕಗಳಿಂದ ಕಲಾರಸಿಕರಿಗೆ ಕನ್ನಡ ನಾಟಕಗಳನ್ನು ನೀಡುತ್ತ ಬಂದಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಜನರಲ್ಲಿ ನಾಟಕ ನೋಡುವ ಅಭಿರುಚಿ ಬೆಳೆಸಿ ಅವರನ್ನು ನಾಟಕದತ್ತ ಸೆಳೆಯುತ್ತಿರುವ ರಂಗಸಂಪದವನ್ನು ಅಭಿನಂದಿಸುತ್ತೇನೆ ಎಂದರು. ಶಿರೀಷ ಜೋಶಿ ಮಾತನಾಡಿ, ಕತೆ, ಕಾದಂಬರಿ, ಪುಸ್ತಕ ವಿಮರ್ಶೆ, ಹೀಗೆ ಸಾಹಿತ್ಯ ಎಲ್ಲ ಪ್ರಕಾರಗಳಲ್ಲಿಯೂ ಬರೆದೆ. ಆದರೆ, ಕವಿತೆಗಳನ್ನು ಬರೆಯುವುದು ನನ್ನಿಂದಾಗಲಿಲ್ಲ. ನಾನೊಬ್ಬ ಕವಿಯಾಗಿದ್ದರೆ, ಏನಾಗುತ್ತಿತ್ತು ಎನ್ನುವುದು ನಾಟಕದಲ್ಲಿ ಮೂಡಿ ಬಂದಿದೆ. ನನ್ನೊಂದಿಗಿರುವ ಹಲವು ಕವಿಗಳನ್ನು ನೋಡಿದ್ದೇನೆ. ಎಲ್ಲ ಕವಿಗಳ ಒಂದೊಂದು ಅನುಭವ ನೋಡಿ ಈ ನಾಟಕ ಕಟ್ಟುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

    ರಂಗಗೌರವ ಪುರಸ್ಕಾರ ದತ್ತಿ ಪ್ರಶಸ್ತಿ ನಮ್ಮ ಸಂಸ್ಥೆಗೆ ಸಿಕ್ಕಿರುವುದು ನನಗೆ ತುಂಬ ಸಂತಸ ತಂದಿದೆ. ಬೆಳಗಾವಿ ಮರಾಠಿಮಯವಾಗಿದ್ದ ವೇಳೆ ಕನ್ನಡ ನಾಟಕ ಸಂಸ್ಥೆ ಕಟ್ಟಿ 4 ದಶಕಗಳ ಕಾಲ ಬೆಳೆಸಿಕೊಂಡು ಬರುವುದು ಅಸಾಧ್ಯದ ಮಾತು. ಅದನ್ನು ರಂಗಸಂಪದ ಸಾಧ್ಯ ಮಾಡಿ ತೋರಿಸಿದೆ ಎಂದರು. ಪ್ರಸಾದ ಕಾರಜೋಳ, ಶ್ರೀನಿವಾಸ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಶರಣಯ್ಯ ಮಠಪತಿ, ಯೊಗೇಶ ದೇಶಪಾಂಡೆ, ಶಾಂತಾ ಆಚಾರ್ಯ, ಜಯಶ್ರೀ ಕ್ಷೀರಸಾಗರ, ವಾಮನ ಮಳಗಿ, ಶರಣಗೌಡ ಪಾಟೀಲ ಅಭಿನಯಿಸಿದ್ದಾರೆ. ಕರೊನಾ ವೇಳೆ ಅಗಲಿದ ಡಾ. ಸಿದ್ಧನಗೌಡ ಪಾಟೀಲ, ಶಿವಕುಮಾರ ಸಂಬರಗಿಮಠ, ಚಂದ್ರಕಾಂತ ಕುಸನೂರ, ರಾಘವೇಂದ್ರ ಜೋಶಿ, ಜಕಾತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಿಡಬ್ಲುೃಡಿ ಅಧೀಕ್ಷಕ ಅಭಿಯಂತ ಬಿ.ವೈ. ಪವಾರ ಇದ್ದರು. ಪದ್ಮಾ ಕುಲಕರ್ಣಿ ನಿರೂಪಿಸಿದರು. ಗುರುನಾಥ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts