More

    ಪ್ರೌಢಶಾಲೆ ಹಂತಕ್ಕೂ ತಲುಪಿದೆ ಮಾದಕ ವ್ಯಸನ

    ಚಿಕ್ಕಮಗಳೂರು: ಇತ್ತೀಚೆಗೆ ಪ್ರೌಢಶಾಲಾ ವಿದ್ಯಾರ್ಥಿಗಳೂ ಮಾದಕ ವಸ್ತು ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಮೇಲೆ ವಿಶೇಷ ನಿಗಾವಹಿಸಿ ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬೇಕು ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಸಲಹೆ ನೀಡಿದರು.

    ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಗುರುವಾಗ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ ಬಿಇಒ, ಜಿಲ್ಲಾ ಮತ್ತು ತಾಲೂಕು ಮಟ್ಟದ ದೈಹಿಕ ಶಿಕ್ಷಣಾಧಿಕಾರಿಗಳು, ಬಿಆರ್‌ಪಿ, ಸಿಆರ್‌ಪಿಗಳಿಗೆ ಆಯೋಜಿಸಿದ್ದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಾಮಾನ್ಯ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
    ಮಕ್ಕಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಾಗ ಅವರು ಮಾದಕ ವಸ್ತು ವ್ಯಸನಿಗಳಾಗಿದ್ದಾರೆಯೇ ಎಂಬುದನ್ನು ಶಿಕ್ಷಕರು ತಿಳಿದುಕೊಳ್ಳಬೇಕು. ಒಂದು ವೇಳೆ ವ್ಯಸನಿಗಳಾಗಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆ ಜಾಲದ ನಿರ್ಮೂಲನೆಗೆ ಶ್ರಮಿಸಬೇಕು. ಆಗ ಮಾತ್ರ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
    ಇತ್ತೀಚೆಗೆ ಮಕ್ಕಳ ಆಹಾರ ಪದ್ಧತಿಯೇ ಬದಲಾಗಿದೆ. ಈಗ ಬಳಸುವ ಸಿದ್ಧ ಆಹಾರಗಳೆಲ್ಲವೂ ಪ್ಲಾಸ್ಟಿಕ್‌ನಲ್ಲಿಯೇ ಇರುತ್ತವೆ. ಇಂಥ ಆಹಾರ ಸೇವಿಸಿದರೆ ಮಕ್ಕಳ ಆರೋಗ್ಯದ ಕಥೆಯೇನು? ಪ್ಲಾಸ್ಟಿಕ್ ವಿಷ ಎಂದು ಎಲ್ಲರೂ ಹೇಳುತ್ತೇವೆ. ಆದರೆ ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟ ಆಹಾರವನ್ನೇ ಸೇವಿಸುತ್ತೇವೆ. ಅಲ್ಲದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆದು ಪರಿಸರ ಹಾಳು ಮಾಡುತ್ತಿದ್ದೇವೆ. ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
    ಬೇರೆಯವರನ್ನು ದ್ವೇಷ ಮಾಡುವುದರಲ್ಲಿ ಅರ್ಥವೇ ಇಲ್ಲ. ಎಲ್ಲ ಯುದ್ಧಗಳಿಗೂ ಅಂತ್ಯ ಇದ್ದೇ ಇರುತ್ತದೆ. ಹೀಗಾಗಿ ಮಕ್ಕಳಲ್ಲಿ ಅಹಿಂಸಾ ಭಾವನೆ ತುಂಬುವ ಜತೆಗೆ ದೇಶಭಕ್ತಿ ಬಗ್ಗೆ ಪ್ರೇರಣೆ ನೀಡುವ ಕೆಲಸವನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಡುತ್ತಿದೆ. ಕರೊನಾ ಅವಧಿಯಲ್ಲಿ 25 ಸಾವಿರ ಸ್ವಯಂ ಸೇವಕರು 20 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ ಒಂದು ಕೋಟಿ ಮಾಸ್ಕ್ ಗಳನ್ನು ನಾವೇ ತಯಾರಿಸಿ, ಅನಿವಾರ್ಯ ಇದ್ದವರಿಗೆ ತಲುಪಿಸಿದ್ದೆವು ಎಂದು ಹೇಳಿದರು.
    ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ತರಬೇತಿ: ಈ ಬಾರಿ ಅಂಗನವಾಡಿ, ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಆದರೆ ಇಲ್ಲಿ ಮಕ್ಕಳಿಗೆ ಕೇವಲ ಆಟ ಆಡುವುದಕ್ಕಷ್ಟೇ ಸೀಮಿತ ಮಾಡುತ್ತೇವೆ ಎಂದು ಪಿ.ಜಿ.ಆರ್.ಸಿಂಧ್ಯಾ ಹೇಳಿದರು. ಇನ್ನು ಆರು ವರ್ಷದಿಂದ 10 ವರ್ಷದ ಮಕ್ಕಳಿಗೆ ಕಪ್ ಮಾಸ್ಟರ್ ಹಾಗೂ ಫ್ರಾಕ್ ಲೀಡರ್ಸ್‌ ಎಂದು ಕರೆದು ಅವರು ಸಂತೋಷವಾಗುವ ಆಟಗಳನ್ನು ಹೇಳಿಕೊಡಲಾಗುವುದು. 11ರಿಂದ 15 ವರ್ಷದ ಮಕ್ಕಳಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಎಂದು ಕರೆದು ಅವರಿಗೆ ದೇಶಭಕ್ತಿ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡುತ್ತೇವೆ. ಇನ್ನು ಕಾಲೇಜು ವಿದ್ಯಾರ್ಥಿಗಳಿಗೆ ರೋವರ್ಸ್‌ ಆ್ಯಂಡ್ ರೇಂಜರ್ಸ್‌ ಎಂದು ಕರೆದು ಅವರಿಗೆ ಸೇವೆಯೇ ನಮ್ಮ ಧ್ಯೇಯ ಎಂಬುದನ್ನು ತಿಳಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
    ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ, ಡಿಡಿಪಿಐ ಜಿ.ರಂಗನಾಥಸ್ವಾಮಿ, ಶಿಕ್ಷಣ ಇಲಾಖೆ ಅಧಿಕಾರಿ ಕೆ.ಎಸ್.ಪ್ರಕಾಶ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಷಡಾಕ್ಷರಿ, ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್, ಗೈಡ್ಸ್ ಜಿಲ್ಲಾ ಆಯುಕ್ತೆ ಡಿ.ಎಸ್.ಮಮತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts