More

    ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಕೇಳ್ತಿಲ್ಲ

    ನಾಗಮಂಗಲ: ತಾಲೂಕಿನಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ನೀರಿನ ಕೊರತೆ ಸಾಕಷ್ಟಿದೆ. ಸಮರ್ಪಕವಾಗಿ ತ್ರೀ ಫೇಸ್ ವಿದ್ಯುತ್ ಕೊಡುತ್ತಿಲ್ಲ, ಬರ ಪರಿಹಾರವೂ ಬಂದಿಲ್ಲ. ಸಮಸ್ಯೆಗಳ ಸುಳಿಗೆ ಸಿಲುಕಿದರೂ ಯಾವೊಬ್ಬ ಅಧಿಕಾರಿಯೂ ನಮ್ಮ ಸಮಸ್ಯೆ ಕೇಳುತ್ತಿಲ್ಲ…!

    ಇದು ತಾಲೂಕಿನ ಹೊಣಕೆರೆ ಮತ್ತು ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಶನಿವಾರ ಜೆಡಿಎಸ್ ಮಾಜಿ ಸಚಿವರು, ಶಾಸಕರ ನೇತೃತ್ವದಲ್ಲಿ ನಡೆದ ಬರ ಅಧ್ಯಯನದ ವೇಳೆ ರೈತರು ಹೇಳಿಕೊಂಡು ಬೇಸರದ ನುಡಿಗಳು.

    ನಮ್ಮ ತಾಲೂಕಿನವರೇ ಕೃಷಿ ಸಚಿವರಾಗಿದ್ದರೂ ರೈತರಿಗೆ ಅನುಕೂಲವಾಗುತ್ತಿಲ್ಲ. ಅಧಿಕಾರಿಗಳು ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆಂದು ಹೇಳಿಕೊಳ್ಳುವುದಷ್ಟೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ನಿಜವಾಗಿಯೂ ನಮಗೆ ಏನು ಸೌಲಭ್ಯ ಸಿಗದಂತಾಗಿದೆ. ಆದ್ದರಿಂದ ಮೊದಲು ರೈತರಿಗೆ ಅನುಕೂಲ ಮಾಡಿಕೊಟ್ಟು ಬಳಿಕ ಗ್ಯಾರಂಟಿ ಯೋಜನೆ ಕೊಡಲಿ ಎಂದು ಆಕ್ರೋಶ ಹೊರಹಾಕಿದರು.

    ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇತರರಿದ್ದರು.

    ವಾಸ್ತವ ಅರಿಯದವ ಕೃಷಿ ಸಚಿವ: ಬರ ಬಂದಿರುವುದು ನಮ್ಮ ರೈತರಿಗೆ ಹೊರತು ಚಲುವರಾಯಸ್ವಾಮಿಗಲ್ಲ. ಆತ ಪ್ರತಿ ಶನಿವಾರ ನಾಗಮಂಗಲಕ್ಕೆ ಕಲೆಕ್ಷನ್ ಮಾಡಲು ಬರುತ್ತಾನೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ ನಡೆಸಿದರು.

    ತಾಲೂಕಿನ ಹೊಣಕೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಅಭಾವದಿಂದ ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ. ನಮ್ಮ ಬರ ಅಧ್ಯಯನವನ್ನು ರಾಜಕಾರಣ ಎನ್ನುತ್ತಾರೆ. ಅವರು ಜಮೀನು ಬಳಿ ಹೋಗಿ ಒಬ್ಬ ರೈತನನ್ನ ಮಾತನಾಡಿಸಿದ್ದಾರಾ? ವಾಸ್ತವದ ನೈಜ ವರದಿ ಮಾಡಿದ್ದಾರಾ? ವಾಸ್ತವ ಅರಿಯದವ ಕೃಷಿ ಸಚಿವರಾಗಿರುವುದು ದುರದೃಷ್ಟಕರ ಎಂದು ವ್ಯಂಗ್ಯವಾಡಿದರು.

    ಚುನಾವಣೆಯಲ್ಲಿ ಗೆದ್ದಿರುವ ಮಾತ್ರಕ್ಕೆ ಅವರ ವರದಿಯೇ ಸರಿ ಎಂದು ಹೇಳಲು ಆಗಲ್ಲ. ವಿರೋಧ ಪಕ್ಷದವರು ಸಲಹೆ ಕೊಡುತ್ತೇವೆ. ಅದನ್ನು ತೆಗೆದುಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದ್ದರಿಂದ ನಮ್ಮ ಯೋಗ್ಯತೆ ಬಗ್ಗೆ ಮಾತನಾಡಲು ಆತನಿಗೆ ಯೋಗ್ಯತೆ ಇಲ್ಲ. ಪ್ರತಿ ಶನಿವಾರ ತಾಲೂಕಿನಲ್ಲಿ ಎಲ್ಲ ಇಲಾಖೆಗಳಿಂದ ಕಲೆಕ್ಷನ್ ನಡೆಯುತ್ತದೆ. ಕಾಮಗಾರಿಗಳಿಂದ ಕಮಿಷನ್ ಕಲೆಕ್ಷನ್ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವೆಡೆ ಜೂಜು ಆಡಿಸುತ್ತಿದ್ದಾರೆ. ಇವರಿಗೂ ಕಮಿಷನ್ ಬರುತ್ತಿದೆ. ತಿಂಗಳಿಗೆ ಎಷ್ಟು ಎಂದು ಹಣ ನಿಗದಿ ಮಾಡಿಕೊಂಡಿದ್ದಾರೆಂದು ಯೋಗ್ಯತೆ ಇದ್ದವರು ಹೇಳಬೇಕು ಟೀಕಿಸಿದರು.

    ನಮ್ಮ ಕಾಲದಲ್ಲಿ ಜೂಜು ನಡೆಯಲು ಬಿಟ್ಟಿರಲಿಲ್ಲ. ಇವತ್ತು ಜನಸಾಮಾನ್ಯರು, ಮಹಿಳೆಯರು ರಾಜಕಾರಣಿಗಳಿಗೆ ಬಾಯಿಗೆ ಬಂದಂತೆ ನಿಂದಿಸುತ್ತಿದ್ದಾರೆ. ಇಸ್ಪೀಟ್ ಆಡಿ ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಉಸ್ತುವಾರಿ ಮಂತ್ರಿಗಳ ಗಮನಕ್ಕೆ ಇಲ್ಲದೆ ಜೂಜು ನಡೆಯುತ್ತಿಲ್ಲ. ಹೀಗಾದರೆ ಜಿಲ್ಲೆಯ ಸ್ಥಿತಿ ಏನಾಗಬೇಕು? ಎಸಿ ರೂಂನಲ್ಲಿ ಕುಳಿತು ವರದಿ ರೆಡಿ ಮಾಡಬೇಡಿ. ರೈತರ ಬಳಿ ಹೋಗಿ ಸಮಸ್ಯೆ ಆಲಿಸಿ ನೈಜ ವರದಿ ನೀಡಿ. ನಾವು ಅಧ್ಯಯನ ನಡೆಸಿ ವರದಿಯನ್ನು ನಮ್ಮ ನಾಯಕರಿಗೆ ನೀಡುತ್ತೇವೆ. ಅವರು ಅಧಿವೇಶನದಲ್ಲಿ ಚರ್ಚೆ ಮಾಡುತ್ತಾರೆ. ಕೇಂದ್ರ ಸರ್ಕಾರದ ಜತೆಗೆ ವಿಶ್ವಾಸ ಉಳಿಸಿಕೊಂಡು ಅನುದಾನ ತರಬೇಕು. ಇವರ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಲಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲಿ. ನಾವು ಅನುದಾನ ತರುತ್ತೇವೆ ಎಂದು ಸವಾಲು ಹಾಕಿದರು.

    ಇವರ ಯೋಗ್ಯತೆ ಕೇಂದ್ರ ಸರ್ಕಾರದವರಿಗೆ ಗೊತ್ತಾಗಿಯೇ ಭೇಟಿಗೆ ಅವಕಾಶ ನೀಡಿಲ್ಲ. ಕೇಂದ್ರ ಕಣ್ಮುಚ್ಚಿ ಕುಳಿತಿಲ್ಲ. ಬರದ ಮಾಹಿತಿ ಅವರ ಬಳಿ ಇದೆ. ಇವರು ದುಡ್ಡು ಬರಲಿ ಎಂದು ಸಿಕ್ಕಾಪಟ್ಟೆ ಬರೆದುಕೊಂಡು ಹೋದರೆ ಕೊಡಲ್ಲ. ಎನ್‌ಡಿಆರ್‌ಎಫ್ ಇರಲಿ ಎಸ್‌ಡಿಆರ್‌ಎಫ್ ಅಡಿ ಏಕೆ ಪರಿಹಾರ ಕೊಟ್ಟಿಲ್ಲ. ಈ ಸರ್ಕಾರದ ಬಳಿ ದುಡ್ಡಿಲ್ಲ, ಗ್ಯಾರಂಟಿಗಳಿಗೆ ಹಣ ಇಲ್ಲ. ಲೋಕಸಭೆ ಚುನಾವಣೆವರೆಗೂ ಹೇಗೋ ಕಾಲ ತಳ್ಳಬೇಕು ಎನ್ನುತ್ತಿದ್ದಾರೆ. ಬರದ ಪರಿಹಾರದಲ್ಲಿ ಕಮಿಷನ್ ಹೊಡೆಯುವ ಪ್ಲಾೃನ್ ಮಾಡಿಕೊಂಡಿದ್ದಾರೆ. ಅದೇ ಹಣದಲ್ಲಿ ಚುನಾವಣೆ ಮಾಡುವ ಯೋಚನೆ ಮಾಡಿದ್ದಾರೆ. ಕಳ್ಳರಿಗೆ ಮಹಾರಾಜ ಆದರೇನು, ಬಡವ ಆದರೇನು? ಕಿತ್ತು ತಿನ್ನುವುದಷ್ಟೇ ಇವರ ಕೆಲಸ ಎಂದು ಕಟುವಾಗಿ ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts