More

    ಸಚಿವ ಅನುರಾಗ್​ ಠಾಕೂರ್​, ಸಂಸದ ಪರ್ವೇಶ್​ ವರ್ಮಾರನ್ನು ಸ್ಟಾರ್​ ಪ್ರಚಾರಕರ ಪಟ್ಟಿಯಿಂದ ಕೈಬಿಡಲು ಬಿಜೆಪಿಗೆ ಚುನಾವಣಾ ಆಯೋಗ ತಾಕೀತು

    ನವದೆಹಲಿ: ಚುನಾವಣಾ ಪ್ರಚಾರ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಸ್ಟಾರ್​ ಪ್ರಚಾರಕರ ಪಟ್ಟಿಯಿಂದ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಮತ್ತು ಸಂಸದ ಪರ್ವೇಶ್​ ಸಾಹೀಬ್​ ಸಿಂಗ್​ ವರ್ಮಾ ಅವರನ್ನು ಈ ಕೂಡಲೇ ಕೈಬಿಡಬೇಕೆಂದು ಚುನಾವಣಾ ಆಯೋಗ ಮಧ್ಯಾಹ್ನ ಆದೇಶ ಹೊರಡಿಸಿದೆ.

    ಫೆ. 8ರಂದು ನಿಗದಿಯಾಗಿರುವ ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಈ ವಾರ ನಡೆದ ಚುನಾವಣಾ ಸಮಾವೇಶ ವೇಳೆ ಉಭಯ ನಾಯಕರು ಪ್ರಚೋದನಾಕಾರಿಯಾದ ಭಾಷಣ ಮಾಡಿದ್ದರು.

    ವಾಯುವ್ಯ ದೆಹಲಿಯಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಅನುರಾಗ್​ ಠಾಕೂರ್​, ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿದ್ದರು. ಇನ್ನೊಂದೆಡೆ ಪಶ್ಚಿಮ ದೆಹಲಿಯಲ್ಲಿ ಮಾತನಾಡಿದ್ದ ಸಂಸದ ಪರ್ವೇಶ್​ ಸಾಹೀಬ್​ ಸಿಂಗ್,​ ಶಾಹೀನ್​ ಬಾಘ್​ನಲ್ಲಿ ಪ್ರತಿಭಟನೆ ಮಾಡುತ್ತಿರುವವರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸಹೋದರಿ ಮತ್ತು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆಗೈಯುತ್ತಾರೆ. ಇಂದು ನೀವು ಬಿಜೆಪಿಯನ್ನು ಗೆಲ್ಲಿಸದಿದ್ದರೆ, ಪ್ರಧಾನಿ ಮೋದಿ ಮತ್ತು ಅಮಿತ್​ ಷಾ ನಿಮ್ಮ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದರು.

    ಈ ಹೇಳಿಕೆ ಬೆನ್ನಲ್ಲೇ ಠಾಕೂರ್​ ಮತ್ತು ಸಿಂಗ್​ಗೆ ಚುನಾವಣಾ ಆಯೋಗ ನೋಟಿಸ್​ ನೀಡಿ, ಗುರುವಾರ ಮಧ್ಯಾಹ್ನ 12ರ ಒಳಗೆ ಉತ್ತರಿಸುವಂತೆ ಹೇಳಿದೆ. ಇಲ್ಲವಾದಲ್ಲಿ ಮತ್ಯಾವುದೇ ಯೋಚನೆ ಮಾಡದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ಇದೀಗ ಸ್ಟಾರ್​ ಪ್ರಚಾರಕರ ಪಟ್ಟಿಯಿಂದ ಕೈಬಿಡುವಂತೆ ಆಯೋಗ ಬಿಜೆಪಿಗೆ ಆದೇಶಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಪ್ರಕಾಶ್​ ಜಾವಡೇಕರ್​ ಆಯೋಗದ ಆದೇಶವನ್ನು ಅಧ್ಯಯನ ಮಾಡಲಾಗುವುದು. ಬಳಿಕ ಪ್ರತಿಕ್ರಿಯಿಸಲಾಗುವುದು. ಸತ್ಯಾಂಶಗಳೊಂದಿಗೆ ಚುನಾವಣಾ ಪ್ರಚಾರದಲ್ಲಿ ಸಮತೋಲನ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಅನೇಕರು ಆಡಳಿತಾರೂಢ ಬಿಜೆಪಿಗೆ ಇದೊಂದು ಮುಖಭಂಗ ಎಂದು ಬಣ್ಣಿಸಿದ್ದಾರೆ.

    ಅಂದಹಾಗೆ ಒಟ್ಟು 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯ ಚುನಾವಣೆ ಫೆ. 8ರಂದು ನಡೆಯಲಿದ್ದು, ಫೆ.11ಕ್ಕೆ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts