More

    ಸಾಂಪ್ರದಾಯಿಕ ಕಂಬಳಕ್ಕೆ ಚಾಲನೆ

    ಬೈಂದೂರು: ಕರೊನಾ ಭೀತಿ ದೂರವಾಗುವ ಲಕ್ಷಣ ಗೋಚರಿಸುತ್ತಿರುವಂತೆ ಸಾಂಪ್ರದಾಯಿಕ ಕಂಬಳ ಆರಂಭಗೊಂಡಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಾಲಿನ ಮೊದಲ ಕಂಬಳ ಶುಕ್ರವಾರ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಕೊಡೇರಿಯ ಕಂಬಳಗದ್ದೆಯಲ್ಲಿ ನಡೆದಿದೆ.

    ಹಲವು ವರ್ಷಗಳಿಂದ ಪಟೇಲರ ಮನೆಯವರು ಈ ಕಂಬಳೋತ್ಸವವನ್ನು ನಡೆಸಿಕೊಂಡು ಬಂದಿದ್ದು, ಕಾರಣಾಂತರಗಳಿಂದ ನಿಂತುಹೋಗಿತ್ತು. ಇದೀಗ ಈ ಭಾಗದ ಯುವಕರು ಏಕಲವ್ಯ ಸಮಿತಿ ರಚಿಸಿ ತಾಲೂಕು ಕಂಬಳ ಸಮಿತಿ ಸಹಕಾರದೊಂದಿಗೆ ‘ಏಕಲವ್ಯ ಕಂಬಳೋತ್ಸವ’ ನಡೆಸುತ್ತಿದ್ದಾರೆ. ಈ ಬಾರಿ 50ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದವು.

    ‘ಕಂಬಳಕ್ಕೆ ಧಾರ್ಮಿಕ ನಂಟು ಇರುವುದರಿಂದ ಹಿಂದಿನ ಪರಂಪರೆ, ಪದ್ಧತಿಯಂತೆ ನಡೆಸಬೇಕಿದೆ. ಸಾಂಪ್ರದಾಯಿಕವಾಗಿ ಈ ಆಚರಣೆ ಮಾಡಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಮುಂಜಾಗ್ರತಾ ಕ್ರಮ ಅಳವಡಿಸಿಕೊಂಡು ಕಂಬಳೋತ್ಸವ ಆಚರಿಸಲಾಗಿದೆ’ ಎಂದು ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ ತಿಳಿಸಿದ್ದಾರೆ.

    ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿ ಆಯ್ಕೆಯಾದ ಸಸಿಹಿತ್ಲು ವೆಂಕಟ ಪೂಜಾರಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಪ್‌ಕಾಮ್ಸ್‌ನ ನಿರ್ದೇಶಕ ಚೆನ್ನಕೇಶವ ಕಾರಂತ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಕಂಬಳ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಭಟ್, ಶಿಕ್ಷಕ ಸತ್ಯನಾರಾಯಣ (ಸತ್ಯನಾ ಕೊಡೇರಿ), ಪಟೇಲರ ಮನೆಯ ಸದಸ್ಯರು ಇದ್ದರು.

    ಕಂಬಳ ಫಲಿತಾಂಶ: ಹಗ್ಗ ಕಿರಿಯ ಬಿಭಾಗ: ಶೀನ ಪೂಜಾರಿ ಕೋಟಿ-ಚೆನ್ನಯ ಕುದ್ರು ನಾವುಂದ ಪ್ರಥಮ, ಎಚ್.ಎನ್. ನಿವಾಸ್ ಭಟ್ಕಳ ದ್ವಿತೀಯ. ಹಗ್ಗ ಹಿರಿಯ ವಿಭಾಗ: ಸಸಿಹಿತ್ಲು ವೆಂಕಟ ಪೂಜಾರಿ ಪ್ರಥಮ, ಶ್ರೇಯಸ್ ನಾರಾಯಣ ದೇವಾಡಿಗ ದ್ವಿತೀಯ. ಹಲಗೆ ವಿಭಾಗ: ಪನ್ನಗ ಹೆಬ್ಬಾರ್ ಭಟ್ಕಳ ಪ್ರಥಮ, ಸ್ವಾಮಿ ಕೊಡ್ಲಾಡಿ ದ್ವಿತೀಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts