More

    ಉದ್ಯೋಗಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮಕ್ಕೆ ಚಾಲನೆ

    ಹುಣಸೂರು: ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯಲ್ಲಿ ನರೇಗಾ ಮಾಹಿತಿಯುಳ್ಳ ಕ್ಯೂಆರ್ ಕೋಡ್ ಅಂಟಿಸುವ ಮೂಲಕ ಉದ್ಯೋಗಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ತಿಳಿಸಿದರು.

    ತಾಲೂಕಿನ ಹಳೇಬೀಡು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸ್ವಚ್ಛಭಾರತ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮುಂದಿನ ಆರ್ಥಿಕ ವರ್ಷಕ್ಕೆ ಆಯವ್ಯಯ ತಯಾರಿಸುವ ಸಲುವಾಗಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮವನ್ನು ತಾಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

    ನರೇಗಾ ಯೋಜನೆಯಡಿ ಮುಂದಿನ ಆರ್ಥಿಕ ವರ್ಷಕ್ಕೆ ಆಯವ್ಯಯ ತಯಾರಿಸಲು ವೇಳಾಪಟ್ಟಿ ನಿಗದಿಪಡಿಸುವ ಮೂಲಕ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಮನೆ ಮನೆ ಜಾಥಾ ಮತ್ತು ರೋಜ್ಗಾರ್ ದಿವಸ್ ಮೂಲಕ ಗ್ರಾ.ಪಂ. ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿ ಯೋಜನೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

    ಕಾಮಗಾರಿ ಬೇಡಿಕೆ ಪೆಟ್ಟಿಗೆ: ಕಾಮಗಾರಿ ಬೇಡಿಕೆ ಪೆಟ್ಟಿಗೆ ಕಾರ್ಯಕ್ರಮದಡಿ ಪ್ರತಿ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿ, ಕೆಲಸ ಮತ್ತು ಕಾಮಗಾರಿಗಳ ಬೇಡಿಕೆಗಳನ್ನು ಸಂಗ್ರಹಿಸಲಾಗುವುದು. ಅ.31ರವರೆಗೆ ಬೇಡಿಕೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದ್ದು, ಅದಕ್ಕಾಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬೇಡಿಕೆ ಪೆಟ್ಟಿಗೆ ಇರಿಸಲಾಗುತ್ತದೆ. ಗ್ರಾಮ ಮತ್ತು ವಾರ್ಡ್ ಸಭೆ ನಡೆಸಿ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಇಒ ಮಾಹಿತಿ ನೀಡಿದರು.

    ರೈತರಿಂದ ರೈತರಿಗಾಗಿ ಅಭಿಯಾನ: ಯೋಜನೆಯ ಮಾರ್ಗಸೂಚಿಯಂತೆ ಒಟ್ಟು ವೆಚ್ಚದ ಶೇ.60ರಷ್ಟನ್ನು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗೆ ಖರ್ಚು ಮಾಡುವಂತೆ ಗಮನಹರಿಸಲಾಗುವುದು. ಜಲ ಸಂಜೀವಿನಿಯಡಿ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಜಾತಿ, ಪಂಗಡ, ಬಿಪಿಎಲ್ ಕುಟುಂಬ, ಸಣ್ಣ ಮತ್ತು ಅತಿ ಸಣ್ಣ ರೈತರು, ಅಂಗವಿಕಲರು ತಮ್ಮ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳುವಂತೆ ಯೋಜನೆಯನ್ನು ಹಾಕಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದ ಜನರಿಗೆ ಉದ್ಯೋಗ ಕಲ್ಪಿಸಲು ಯೋಜನೆ ಪೂರಕವಾಗಿದ್ದು, ಶೋಷಿತ ಮಹಿಳೆಯರು, ಅಬಲೆಯರು, ಗ್ರಾಮೀಣ ಮಹಿಳೆಯರ ಸಮಸ್ಯೆಗಳನ್ನು ಗುರುತಿಸಿ, ವಿಶ್ಲೇಷಿಸಿ, ಸ್ಥಳೀಯ ಮಟ್ಟದಲ್ಲೇ ಪರಿಹಾರ ನೀಡಲು ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಮೂಲಕ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

    ನರೇಗಾ ಕ್ಯೂಆರ್ ಕೋಡ್: ನರೇಗಾ ಯೋಜನೆಯ ಕಾರ್ಯಕ್ರಮಗಳ ಮಾಹಿತಿಯುಳ್ಳ ಯೂ ಟ್ಯೂಬ್ ಲಿಂಕ್ ಅನ್ನು ತಲುಪಿಸುವ ಸಲುವಾಗಿ ಗ್ರಾಮದ ಪ್ರತಿ ಮನೆಗೂ ಕ್ಯೂಆರ್ ಕೋಡ್ ಇರುವ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತಿದ್ದು, ಆ ಮೂಲಕ ಮಾಹಿತಿ ತಾವಿರುವ ಸ್ಥಳದಲ್ಲಿಯೇ ನರೇಗಾ ಯೋಜನೆಯ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಇಒ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts