More

    ಕುಡಿವ ನೀರಿನ ಕಾಮಗಾರಿ ಮುಗಿಸದಿದ್ದರೆ ಒಪ್ಪಂದ ರದ್ದು: ಕೊಪ್ಪಳ ಜಿಪಂ ಸಿಇಒ ಫೌಜಿಯಾ ತರನ್ನುಮ್ ಎಚ್ಚರಿಕೆ

    ಕೊಪ್ಪಳ: ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಕೈಗೊಂಡಿರುವ ಬಹುಗ್ರಾಮ ಕುಡಿವ ನೀರು ಯೋಜನೆ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಕಾಮಗಾರಿ ಒಪ್ಪಂದ ರದ್ದುಪಡಿಸಲಾಗುವುದೆಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಎಚ್ಚರಿಸಿದರು.

    ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಜಿಲ್ಲೆಯ ಗ್ರಾಮೀಣ ಕುಡಿವ ನೀರು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದರು. ಐದು ವರ್ಷದಿಂದ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ, ಪೂರ್ಣಗೊಳ್ಳುತ್ತಿಲ್ಲ. ಜನರು ನೀರು ಪೂರೈಸುವಂತೆ ಹಾಗೂ ಅನಗತ್ಯ ವಿಳಂಬ ಕುರಿತು ದೂರು ನೀಡುತ್ತಿದ್ದಾರೆ. ಅವಧಿಯೊಳಗೆ ಕಾಮಗಾರಿ ಮುಗಿಸುವಂತೆ ಪ್ರತಿ ಸಭೆಯಲ್ಲೂ ಸೂಚಿಸಲಾಗುತ್ತಿದೆ. ಆದರೆ, ಎಲ್ ಆ್ಯಂಡ್ ಟಿ ಕಂಪನಿಯವರು ನಿರ್ಲಕ್ಷೃ ಮಾಡುತ್ತಿದ್ದಾರೆ. ಇದು ಕೊನೆಯ ಎಚ್ಚರಿಕೆ. ಇನ್ನು ಮುಂದೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದಿದ್ದರೆ, ಕಂಪನಿಯೊಂದಿಗೆ ಕಾಮಗಾರಿ ಒಪ್ಪಂದ ರದ್ದುಪಡಿಸಲಾಗುವುದು. ವಿಳಂಬ ಮಾಡಿದ್ದಕ್ಕೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಪ್ರಾದೇಶಿಕ ಮುಖ್ಯಸ್ಥ ಶ್ರೀಧರಗೆ ಎಚ್ಚರಿಸಿದರು.

    ಒಎಚ್‌ಟಿ(ಓವರ್ ಹೆಡ್ ಟ್ಯಾಂಕ್) ಕಾಮಗಾರಿಗಳು ಅಪೂರ್ಣವಾಗಿವೆ. ಪೂರ್ಣಗೊಂಡ ಟ್ಯಾಂಕ್‌ಗಳಿಂದ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದೆ. ಯೋಜನೆಯ ಅನುಷ್ಠಾನಾಧಿಕಾರಿಗಳು ಕಂಪನಿಯೊಂದಿಗೆ ಸಮನ್ವಯತೆ ಸಾಧಿಸಿ, ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ನೀರು ಸಂಗ್ರಹಣೆ ವ್ಯವಸ್ಥೆ ಮಾಡಿಕೊಂಡು ಕೆಲಸ ನಡೆಸಬೇಕು. ಅದನ್ನೂ ಮಾಡಿಲ್ಲ. ಹೀಗಾದಲ್ಲಿ ನೀರು ಹೇಗೆ ಪೂರೈಸುವುದು ? ನಿಮ್ಮ ತಪ್ಪಿನಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಒಂದು ವಾರದೊಳಗೆ ಅಪೂರ್ಣ ಕಾಮಗಾರಿಗಳೆಲ್ಲ ಪೂರ್ಣಗೊಳ್ಳಬೇಕು. ಪೂರ್ಣಗೊಂಡ ಬಗ್ಗೆ ಪ್ರತಿದಿನ ವರದಿ ಸಲ್ಲಿಸಬೇಕು. ಕಂಪನಿಯು ಈಗಾಗಲೇ ಹಲವಾರು ದೂರು, ಆರೋಪಗಳನ್ನು ಎದುರಿಸುತ್ತಿದ್ದು, ಈ ಬಾರಿ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ವಾಗ್ದಾಳಿ ನಡೆಸಿದರು.

    ಡಿಬಿಒಟಿ, ಜೆಜೆಎಂ, ಆರ್‌ಒ ಪ್ಲಾಂಟ್ ಸೇರಿ ವಿವಿಧ ಕುಡಿವ ನೀರಿನ ಯೋಜನೆಗಳೂ ಅವಧಿಯೊಳಗೆ ಪೂರ್ಣಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts