More

    ಬೇಸಿಗೆಯಲ್ಲಿ ಕುಡಿಯುವ ನೀರಿನ ಬಗ್ಗೆ ಕ್ರಮ ಅಗತ್ಯ

    ಶಿವಮೊಗ್ಗ: ಮುಂಗಾರು ಕೊರತೆ ಎದುರಾಗಿರುವ ಕಾರಣ ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1ರಿಂದ ಸೆಪ್ಟೆಂಬರ್ 30ರವರೆಗೆ 1,330 ಮಿ.ಮೀ. ಮಳೆ ಬಿದ್ದಿದೆ. ವಾಸ್ತವವಾಗಿ ಇದು ಒಳ್ಳೆಯ ಮಳೆಯೇ ಆಗಿದೆ. ಆದರೆ ಸಕಾಲಕ್ಕೆ ಮಳೆ ಇಲ್ಲದ ಪರಿಣಾಮ ಬರ ಎದುರಾಗಿದೆ. ಬರ ಇರುವ ಕಾರಣ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಪ್ರಸ್ತುತ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಿಲ್ಲ. ಮುಂದೆ ಸಮಸ್ಯೆ ಎದುರಾಗುವ ಗ್ರಾಮಗಳ ಪಟ್ಟಿ ಮಾಡಲಾಗುತ್ತಿದೆ. ಕೆರೆಕಟ್ಟೆಗಳು, ಹಳ್ಳ-ಕೊಳ್ಳ, ಚೆಕ್ ಡ್ಯಾಮ್, ಸಣ್ಣಪುಟ್ಟ ಜಲಾಶಯಗಳಲ್ಲಿನ ನೀರು ಖಾಲಿ ಮಾಡದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ಗಳನ್ನು ರಚನೆ ಮಾಡಿ 2024ರ ಜೂನ್‌ವರೆಗೂ ವಿಶೇಷ ಪ್ಲಾೃನ್ ಮಾಡಲಾಗುತ್ತಿದೆ. ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ 100 ದಿನಗಳಿಂದ 150ಕ್ಕೆ ಮಾನವ ದಿನಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
    ಜಿಲ್ಲೆಯಲ್ಲಿ 2020-21ನೇ ಸಾಲಿನ ಜಲ ಜೀವನ್ ಮಿಷನ್ ಯೋಜನೆಯಡಿ 19.03 ಕೋಟಿ ರೂ. ವೆಚ್ಚದಲ್ಲಿ 612 ಕಾಮಗಾರಿಗಳು ಮಂಜೂರಾಗಿದ್ದು ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ ಪೂರ್ಣಗೊಳಿಸಲಾಗಿದೆ. 2021-22ನೇ ಸಾಲಿನಲ್ಲಿ 16.69 ಕೋಟಿ ರೂ. ವೆಚ್ಚದಲ್ಲಿ 268 ಕಾಮಗಾರಿಗಳು ಪ್ರಾರಂಭಿಸಿದ್ದು 84 ಪ್ರಗತಿಯಲ್ಲಿವೆ. ಉಳಿದ 184 ಕಾಮಗಾರಿಗಳು ಮುಕ್ತಾಯಗೊಂಡಿವೆ. 2022-23ನೇ ಸಾಲಿನಲ್ಲಿ 29.56 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ 518 ಕಾಮಗಾರಿಗಳಲ್ಲಿ 517ಕ್ಕೆ ಟೆಂಡರ್ ನೀಡಲಾಗಿದೆ. 351 ಕಾಮಗಾರಿಗಳಿಗೆ ಅಂಗೀಕಾರ ಪತ್ರ ನೀಡಿದ್ದು 247ಕ್ಕೆ ಕಾರ್ಯಾದೇಶ ನೀಡಲಾಗಿದೆ. 138 ಕಾಮಗಾರಿಗಳು ಪ್ರಾರಂಭಗೊಂಡಿವೆ. 118 ಪ್ರಗತಿಯಲ್ಲಿದ್ದು 20 ಪೂರ್ಣಗೊಂಡಿವೆ ಎಂದು ಯೋಜನೆ ಅಧಿಕಾರಿಗಳು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts