More

    ಜೀವಜಲಕ್ಕೆ ಹಾಹಾಕಾರ, ಕ್ಯಾನ್‌ಗಳಲ್ಲಿ ಪೂರೈಸಲು ಹೆಜಮಾಡಿ ಗ್ರಾಮ ಪಂಚಾಯಿತಿ ಕ್ರಮ

    ಹೇಮನಾಥ ಪಡುಬಿದ್ರಿ

    ಸಮುದ್ರ ಹಾಗೂ ನದಿ ಭಾಗಗಳನ್ನು ಹೊಂದಿರುವ ಉಡುಪಿ ಜಿಲ್ಲೆಯ ಗಡಿ ಗ್ರಾಮ ಹೆಜಮಾಡಿಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮ ಪಂಚಾಯಿತಿ ಆಡಳಿತ ಪ್ರತಿ ವಾರ್ಡ್‌ನಲ್ಲೂ ಜಲಜಾಗೃತಿ ಮೂಡಿಸುವ ವಿಶೇಷ ಪ್ರಯತ್ನಕ್ಕೆ ಮುಂದಡಿಯಿಟ್ಟಿದೆ.

    ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಎಂಟು ಸಾವಿರದಷ್ಟು ಜನಸಂಖ್ಯೆಯಿದ್ದು, ನಡಿಕುದ್ರು, ಚೆನ್ನಯ ಕುದ್ರು, ಸ್ವಾಮಿಲ್ ಕುದ್ರು, ಮೇಸ್ತ ಕದ್ರು ಹಾಗೂ ಕೊಕ್ರಾಣಿ ಕುದ್ರು ಪ್ರದೇಶಗಳಿವೆ. ಇಲ್ಲಿಯ ಜನರಿಗೆ ಮಾರ್ಚ್ ತಿಂಗಳು ಬಂತೆಂದರೆ ಕುಡಿಯುವ ನೀರಿನ ಬವಣೆ ಶುರುವಾಗುತ್ತದೆ. ಈ ಕುದ್ರುಗಳಲ್ಲಿ 125ರಷ್ಟು ಮನೆಗಳಿದ್ದು, ನಲ್ಲಿ ನೀರಿನ ಸಂಪರ್ಕ ಮಾಡಲಾಗಿದೆ. ಪ್ರಸ್ತುತ ಎರಡು ದಿನಕ್ಕೊಮ್ಮೆ ಅರ್ಧ ಗಂಟೆಯಷ್ಟು ನೀರು ಪೂರೈಸಲಾಗುತ್ತಿದೆ. ನಲ್ಲಿ ನೀರಿಲ್ಲದಿದ್ದರೆ ಇಲ್ಲಿನ ಜನ ಕಿಲೋಮೀಟರ್‌ಗಟ್ಟಲೆ ಸಾಗಿ ನೀರು ತರಬೇಕು. ಜನ ಹಾಗೂ ಜಾನುವಾರುಗಳಿಗೆ ನೀರಿಲ್ಲದೆ ಹಲವು ದಶಕಗಳಿಂದಲೂ ಬವಣೆ ಪಡುತ್ತಿದ್ದಾರೆ. ಇಷ್ಟಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪ್ರಸ್ತುತ ನಡಿಕುದ್ರು, ಪರಪಟ್ಟ ಹಾಗೂ ಕೊಪ್ಪಲ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ವಾಹನಗಳ ಮೂಲಕ ಕ್ಯಾನ್‌ಗಳಲ್ಲಿ ನೀರು ಪೂರೈಕೆಗೆ ಗ್ರಾಪಂ ಕ್ರಮ ಕೈಗೊಂಡಿದೆ.

    ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆರು ತೆರೆದ ಬಾವಿಗಳಿದ್ದು, ಅದರಿಂದ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಪಂಪ್ ಮಾಡಿ ಪೂರೈಸಲಾಗುತ್ತಿದೆ. ಕುದ್ರು ಪ್ರದೇಶಗಳಲ್ಲಿ ಭೂಮಿ ಸಮತಟ್ಟಾಗಿಲ್ಲದೆ ಕೆಲವೆಡೆ ಹೊಂಡ ಮಾಡಿ ನಲ್ಲಿ ಸಂಪರ್ಕ ಕಲ್ಪಿಸಿದರೂ ನೀರು ಸರಿಯಾಗಿ ಹರಿಯುತ್ತಿಲ್ಲ. 5 ಸಾವಿರ ಲೀಟರ್ ನೀರು ಸಂಗ್ರಹದ ಗ್ರಾಪಂನ ಶುದ್ಧ ಕುಡಿಯುವ ನೀರಿನ ಘಟಕದಲ್ಲೂ ನೀರಿಲ್ಲದೆ ಜನ ತೊಂದರೆ ಪಡುವಂತಾಗಿದೆ.

    ಜಲ ಮರುಪೂರಣಕ್ಕೆ ಒತ್ತು
    ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ನೀರಿನ ಭವಣೆ ನೀಗಿಸಲು ಗ್ರಾಪಂ ವ್ಯಾಪ್ತಿಯ ಬತ್ತಿರುವ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಪಾಳು ಬಿದ್ದಿರುವ ಹೆಜಮಾಡಿ ಮಾರುಕಟ್ಟೆ ಬಳಿಯ ಎರಡು ಹಾಗೂ ಶಿವನಗರದ ಒಂದು ಬಾವಿ ಸ್ವಚ್ಛಗೊಳಿಸಿ ಉಪಯೋಗಕ್ಕೆ ಕ್ರಮ ವಹಿಸಿ, ಬದುಗಳನ್ನು ನಿರ್ಮಿಸಿ ಮಳೆ ನೀರು ಪೋಲಾಗುವುದನ್ನು ತಡೆಯಲು ಯೋಜನೆ ಹಾಕಿಕೊಳ್ಳಲಾಗುವುದು. ಗ್ರಾಪಂ ವ್ಯಾಪ್ತಿಯ ಕಟ್ಟಡ ಹಾಗೂ ಶಾಲೆಗಳಲ್ಲಿ ಮಳೆ ನೀರು ಕೊಯ್ಲಿಗೆ ಕಟ್ಟುನಿಟ್ಟಿನ ಕ್ರಮ, ವಿದ್ಯಾರ್ಥಿಗಳಿಗೆ ಜಲಜಾಗೃತಿ ಅರಿವು ಕಾರ್ಯಕ್ರಮ ಅಳವಡಿಸಿಕೊಳ್ಳುವಲ್ಲೂ ಗ್ರಾಮಾಡಳಿತ ಚಿಂತನೆ ನಡೆಸಿದೆ.

    ನೀರಿನ ಬವಣೆ ನೀಗಿಸುವ ಸಲುವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಬಾವಿ ನಿರ್ಮಾಣಕ್ಕೆ ಜಾಗ ಹುಡುಕುವ ಕಾರ್ಯ ನಡೆಯುತ್ತಿದೆ. ಟ್ಯಾಂಕರ್ ನೀರು ಪೂರೈಕೆಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಗ್ರಾಪಂ ಸದಸ್ಯರು ಪ್ರತಿ ವಾರ್ಡ್‌ಗೆ ಭೇಟಿ ನೀಡಿ ನೀರಿನ ಮಿತವ್ಯಯ ಬಳಕೆ ಹಾಗೂ ಜಲಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಪೈಪ್‌ಲೈನ್ ದೋಷ, ನಲ್ಲಿ ನೀರು ದುರುಪಯೋಗ, ತೆರೆದ ಬಾವಿಗಳ ಸುತ್ತ ಮಲಿನ ನೀರು ಹರಿದು ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅದಕ್ಕೆ ಕಡಿವಾಣ ಹಾಕಲಾಗುವುದು.
    ಪ್ರಾಣೇಶ್ ಹೆಜಮಾಡಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ

    ಹೆಜಮಾಡಿ ಗ್ರಾಪಂ ಹಾಗೂ ಗುಂಡಿ ಪರಿಸರದಲ್ಲಿ ನಾಲ್ಕು ದಿನಗಳಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲೂ ನೀರಿಲ್ಲದೆ ಜನ ತೊಂದರೆ ಪಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆ ಗ್ರಾಪಂ ಅಧ್ಯಕ್ಷರಿಗೆ ಸೂಚಿಸಲಾಗಿದೆ. ದಿನದ 24 ಗಂಟೆ ಗ್ರಾಮಸ್ಥರ ಸಮಸ್ಯೆಗೆ ಕಿವಿಯಾಗಬೇಕಾದ ಪಿಡಿಒ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.
    ಶೇಖರ ಹೆಜಮಾಡಿ, ಸಾಮಾಜಿಕ ಹೋರಾಟಗಾರ

    ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಹೆಜಮಾಡಿ ಕ್ರೀಡಾಂಗಣ ಬಳಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ 14/30 ಅಡಿ ಆಳ ತೆರೆದ ಬಾವಿ ನಿರ್ಮಾಣ ಸಹಿತ ಪಂಪ್ ಅಳವಡಿಸುವ ಯೋಜನೆ ಪ್ರಗತಿಯಲ್ಲಿದೆ.
    ಶಶಿಕಾಂತ ಪಡುಬಿದ್ರಿ, ಜಿಪಂ ಸದಸ್ಯ ಪಡುಬಿದ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts