ನವದೆಹಲಿ: ಉಭಯ ದೇಶದ ಸೇನೆಗಳ ಉನ್ನತ ಅಧಿಕಾರಿಗಳ ಮಧ್ಯೆ ಸೋಮವಾರ 11 ತಾಸು ನಡೆದ ಸುದೀರ್ಘ ಮಾತುಕತೆಯಲ್ಲಿ ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್ಎಸಿ) ಸೈನ್ಯ ಹಿಂಪಡೆಯಲು ಒಮ್ಮತದ ನಿರ್ಧಾರವಾಗಿರುವ ಹೊರತಾಗಿಯೂ ಭಾರತಕ್ಕೆ ಸೆಡ್ಡು ಹೊಡೆದಿರುವ ಚೀನಾ ಮತ್ತೆ ಬಾಲ ಬಿಚ್ಚಿದೆ. ಕೆಲವು ಗಡಿ ಪಾಯಿಂಟ್ಗಳಲ್ಲಿ ಚೀನಾ ಸೇನೆ 1 ಕಿ.ಮೀ. ಹಿಂದೆ ಸರಿದಿದ್ದರೂ ಹಲವೆಡೆ ತುಕಡಿಗಳ ಉಪಸ್ಥಿತಿ ಮುಂದುವರಿದಿದೆ. ಇದರಿಂದ ಚೀನಾದ ನಡೆ ನಿಗೂಢ ಮತ್ತು ಸಂದೇಹಾ ಸ್ಪದವಾಗಿರುವ ಕಾರಣ 3,488 ಕಿ.ಮೀ. ಗಡಿಯ ಆಯಕಟ್ಟಿನ ಸ್ಥಳ ಗಳಿಗೆ ಭಾರತ ಕೂಡ ಹೆಚ್ಚಿನ ಸೇನಾ ತುಕಡಿಗಳನ್ನು ರವಾನಿಸಿದೆ. ಹೀಗಾಗಿ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ಮತ್ತಷ್ಟು ಹೆಚ್ಚಿದೆ.
ಸೇನಾ ಬಲ ಹೆಚ್ಚಿಸುವ ನಿರ್ಧಾರವನ್ನು ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಪರಮ್ಜಿತ್ ಸಿಂಗ್ ಮತ್ತು ಭಾರತ-ಟಿಬೆಟ್ ಗಡಿ ಪೊಲೀಸ್ನ (ಐಟಿಬಿಪಿ) ಮುಖ್ಯಸ್ಥ ಎಸ್.ಎಸ್. ದೇಸ್ವಾಕ್ ಲೇಹ್ ಶಿಬಿರಕ್ಕೆ ಭೇಟಿ ನೀಡಿದ ಬೆನ್ನಿಗೆ ಕೈಗೊಳ್ಳಲಾಗಿದೆ. ಲಡಾಖ್ ಮತ್ತು ಲೇಹ್ಗೆ ಎರಡು ದಿನ ಭೇಟಿ ನೀಡಿದ್ದ ಭೂಸೇನಾ ಮುಖ್ಯಸ್ಥ ಜನರಲ್ ನರಾವಣೆ, ಪೂರ್ವ ಲಡಾಖ್ನ 65 ಪಾಯಿಂಟ್ಗಳಲ್ಲಿ ಗಸ್ತು ಹೆಚ್ಚಳ ಮಾಡುವಂತೆ ಸ್ಪಷ್ಟ ಸೂಚನೆ ನೀಡಿದ್ದರು.
ಗಡಿಯಲ್ಲಿ ಯಥಾಸ್ಥಿತಿ ಉಲ್ಲಂಘಿಸುವ ಉದ್ದೇಶದಿಂದಲೇ ಚೀನಾ ಇಂಥ ಚಟುವಟಿಕೆ ನಡೆಸಿದೆ. ಆದರೆ, ಮಾತುಕತೆ ಯಲ್ಲಿ ಒಪ್ಪಿದ ಮೇಲೂ ಈ ಕುತಂತ್ರ ಅನುಸರಿಸುವುದು ವಿಶ್ವಾಸ ಕೊರತೆ ಲಕ್ಷಣ.
| ನಿವೃತ್ತ ಜನರಲ್ ದೀಪಕ್ ಕಪೂರ್ ಭೂಸೇನೆಯ ಮಾಜಿ ಮುಖ್ಯಸ್ಥ
ಜೂ.6ರಂದು ನಡೆದ ಸೇನಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಚೀನಾ ಪಾಲಿಸದ ಕಾರಣ ಭಾರತದ ಯೋಧರು, 14ನೇ ಗಸ್ತು ಪಾಯಿಂಟ್ನಲ್ಲಿ ಚೀನಾ ನಿರ್ವಿುಸಿದ್ದ ಟೆಂಟ್ ಮತ್ತು ವೀಕ್ಷಣಾ ಗೋಪುರಗಳನ್ನು ಜೂನ್ 15ರಂದು ನಾಶ ಮಾಡಿದ್ದರು. ಈ ಕಾರಣ ಘರ್ಷಣೆ ನಡೆದು ಭಾರತದ 20 ಯೋಧರು ಹುತಾತ್ಮರಾದರು. 76 ಸೈನಿಕರಿಗೆ ಗಾಯಗಳಾದವು. ಚೀನಾ ಸೇನೆ ಸಾವು-ನೋವಿನ ವಿವರ ನೀಡಿಲ್ಲ. ಆದರೆ, 40 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾ ಕುತಂತ್ರಕ್ಕೆ ಉಪಗ್ರಹ ಸಾಕ್ಷ್ಯ: ಘರ್ಷಣೆಗೆ ಕಾರಣವಾದ 14ನೇ ಪಾಯಿಂಟ್ನಲ್ಲಿ ಚೀನಾ ಸೇನೆ ಮತ್ತೆ ವಕ್ಕರಿಸಿರುವುದು ಮತ್ತು ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದು ಉಪಗ್ರಹದ ಚಿತ್ರಗಳಿಂದ ಸ್ಪಷ್ಟವಾಗಿದೆ. 15 (ಕಾಂಗ್ಕಾ ಲಾ) ಮತ್ತು 17ನೇ (ಹಾಟ್ ಸ್ಪಿಂಗ್ಸ್) ಗಸ್ತು ಪಾಯಿಂಟ್ಗಳಲ್ಲೂ ಚೀನಾ ಯೋಧರ ಸಂಖ್ಯೆಯನ್ನು ಹೆಚ್ಚಿಸಿದೆ. ಈ ಗಡಿಗಳಲ್ಲಿ ಚೀನಾ ಸೇನೆಯು ಭಾರತದ ಸೇನೆಗಿಂತ ಒಂದು ಹೆಜ್ಜೆ ಮುಂದಿರುವುದು ಮತ್ತು ಈ ಸಾರಿ ಹೆಚ್ಚು ಬಲದೊಂದಿಗೆ ಬಂದಿರುವುದನ್ನು ಉಪಗ್ರಹದ ಚಿತ್ರಗಳಲ್ಲಿ ಗುರುತಿಸಬಹುದಾಗಿದೆ.