ಅಥಣಿ: ಅಥಣಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಾಗಿದ್ದು, ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಆತಂಕದಲ್ಲೇ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ತೋಟದ ವಸತಿಗಳಲ್ಲಿ ಲೋಡ್‌ಶೆಡ್ಡಿಂಗ್ ಹೆಚ್ಚಾಗಿದೆ. ಆದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಸುಮ್ಮನಿದ್ದು, ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಸ್ಥಳೀಯ ಶಾಸಕರು ಇತ್ತ ಗಮನಹರಿಸುತ್ತಿಲ್ಲ. ಇನ್ನು ಡಿಸಿಎಂ ಸಾಹೇಬರಿಗೆ ರಾಜ್ಯದ ಜವಾಬ್ದಾರಿ ಇರುವುದರಿಂದ ಇತ್ತ ತಲೆ ಹಾಕುತ್ತಿಲ್ಲ.
ವಿದ್ಯಾರ್ಥಿಗಳ ಸಮಸ್ಯೆ ಕೇಳಲು ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ ಎಂದು ಮಕ್ಕಳ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕ ಈಗಾಗಲೇ ಪ್ರಕಟವಾಗಿದೆ. ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ವ್ಯಾಸಂಗ ಮಾಡುವ ನಿಟ್ಟಿನಲ್ಲಿ ಆನ್‌ಲೈನ್ ತಂತ್ರಾಂಶ ಹಾಗೂ ಚಂದನ ವಾಹಿನಿ ಮೂಲಕ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಪರೀಕ್ಷಾವಾಣಿ’ ಎಂಬ ಕಾರ್ಯಕ್ರಮದಡಿ ಪಠ್ಯ ಪಾಠಗಳನ್ನು ಬೋಧನೆ ಮಾಡುತ್ತಿದೆ. ಆದರೆ, ಅಥಣಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಲೋಡ್‌ಶೆಡ್ಡಿಂಗ್ ವಿಪರೀತವಾಗಿದೆ. ಒಂದು ವಾರ ಹಗಲು ಹಾಗೂ ಮತ್ತೊಂದು ವಾರ ರಾತ್ರಿ ಹೊತ್ತು ವಿದ್ಯುತ್ ಪೂರೈಸಲಾಗುತ್ತಿದೆ.
ಈ ನಡುವೆ ಮಳೆ, ಗಾಳಿ ಬಂದರೆ ಸಂಪೂರ್ಣ ವಿದ್ಯುತ್ ನಿಲುಗಡೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಆಗ್ರಹಿಸಿದ್ದಾರೆ.
ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು !: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮಧ್ಯಾಹ್ನ ಮೂರು
ಗಂಟೆಯಿಂದ ನಾಲ್ಕೂವರೆ ವರೆಗೆ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಗೆ
ಆದೇಶಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶಕುಮಾರ ಅವರ ಮುತುವರ್ಜಿಯಿಂದ ಚಂದನ ವಾಹಿನಿಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷಾ ವಾಣಿ’ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಆದರೆ, ಲೋಡ್‌ಶೆಡ್ಡಿಂಗ್‌ನಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ಅಥಣಿ ತಾಲೂಕಿನ ಝಂಜುರವಾಡ, ಶಿರಹಟ್ಟಿ, ಯಲ್ಲಮ್ಮವಾಡಿ, ಕೊಕಟನೂರ, ಸುಟ್ಟಟ್ಟಿ, ಬುರ್ಲಟ್ಟಿ, ದೇಸಾರಟ್ಟಿ, ಜನವಾಡ, ಸವದಿ, ಬಡಚಿ, ಐಗಳಿ, ಹಲ್ಯಾಳ, ಸಪ್ತಸಾಗರ, ದರೂರ, ಕಟಗೇರಿ, ಬಾಳಿಗೇರಿ, ಮಲಾಬಾದ, ಗುಂಡೆವಾಡಿ ಗ್ರಾಮಗಳು ಹಾಗೂ ವಿವಿಧ ತೋಟದ ವಸತಿಗಳಲ್ಲಿ ಲೋಡ್‌ಶೆಡ್ಡಿಂಗ್ ಹೆಚ್ಚಾಗಿದೆ.
ಟಿವಿ ವೀಕ್ಷಿಸಲು ಕುಳಿತರೆ ಕರೆಂಟ್ ಕಟ್: ಹಳ್ಳಿಗಳಲ್ಲಿ ಲೋಡ್‌ಶೆಡ್ಡಿಂಗ್ ಜಾರಿಯಿಂದ ನಮಗೆ ‘ಪರೀಕ್ಷಾ ವಾಣಿ’ ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಎರಡು ಪಾಳೆಯಲ್ಲಿ ವಿದ್ಯುತ್ ಪೂರೈಸುತ್ತಿರುವುದರಿಂದ ವಿದ್ಯಾಭ್ಯಾಸಕ್ಕೂ ತೀವ್ರ ತೊಂದರೆಯಾಗುತ್ತಿದೆ. ಟಿವಿ ವೀಕ್ಷಿಸಲು ಕುಳಿತರೆ ಕರೆಂಟ್ ಹೋಗುತ್ತದೆ. ಪರೀಕ್ಷೆ ಸಮೀಪಿಸುತ್ತಿದ್ದು, ಸದ್ಯ ಚಿಮಣಿ ದೀಪ ಹಾಗೂ ಮೇಣದಬತ್ತಿ ಉರಿಸಿ ಅಭ್ಯಾಸ ಮಾಡುತ್ತಿದ್ದೇವೆ. ಪರೀಕ್ಷೆ ಮುಗಿಯುವವರಿಗೆ ನಿರಂತರ ವಿದ್ಯುತ್ ಪೂರೈಸಿ ಅನುಕೂಲ ಮಾಡಿಕೊಡಬೇಕು ಎಂದು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಾದ ಸಿರಾಜ್ ಮಿರಾಗೋಳ ಹಾಗೂ ಸುಪ್ರೀಯಾ ಅಡಹಳ್ಳಿ ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಆಯಾ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮಾಹಿತಿ ನೀಡಿ ನಿರಂತರ ವಿದ್ಯುತ್ ಪೂರೈಸಲು ಸೂಚಿಸುತ್ತೇನೆ. ಕೆಲವೆಡೆ ಮಳೆ ಹಾಗೂ ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಶೀಘ್ರ ದುರಸ್ತಿ ಮಾಡುತ್ತೇವೆ.
|ಗಿರಿಧರ ಕುಲಕರ್ಣಿ, ಹೆಸ್ಕಾಂ ಇಲಾಖೆಯ ವಿಭಾಗೀಯ ಅಧೀಕ್ಷಕ ಅಭಿಯಂತ, ಚಿಕ್ಕೋಡಿ
| ರಾಜು ಎಸ್.ಗಾಲಿ