More

    ಲಿಂ.ಡಾ. ತೋಂಟದ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಇಂದು

    ವಿಜಯವಾಣಿ ಸುದ್ದಿಜಾಲ ಅಣ್ಣಿಗೇರಿ

    ಇಲ್ಲಿನ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ರಾಜ್ಯ ಪ್ರಶಸ್ತಿ ಸಮಿತಿಯಿಂದ ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ. 29ರಂದು ಸಂಜೆ 6 ಗಂಟೆಗೆ ಇಲ್ಲಿಯ ನಿಂಗಮ್ಮ ಹೂಗಾರ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಎಸ್.ಎಸ್. ಹರ್ಲಾಪೂರ ತಿಳಿಸಿದರು.

    ಇಲ್ಲಿನ ನಿಂಗಮ್ಮ ಹೂಗಾರ ಕಾಲೇಜ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾಹಿತ್ಯ-ಸಂಸ್ಕೃತಿ ಸಂಶೋಧಕರಾದ ಡಾ. ವೀರಣ್ಣ ರಾಜೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ತೋಂಟದ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ರಂಜಾನ ದರ್ಗಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾಯಕ ಜೀವಿಗಳಾದ ಬಸಪ್ಪ ಪಲ್ಲೇದ, ನಿಂಗಣ್ಣ ಹುಗ್ಗಿ, ಶಿವಪ್ಪ ಹೊಸಮನಿ, ಕರಿಯಪ್ಪ ಕೌಜಗೇರಿ, ಎ.ಐ.ನಡಕಟ್ಟಿನ, ಸಂಗಯ್ಯ ಹುಣಶೀಮರದ, ಮೆಹಬೂಬ ಬಿಸ್ತಿ, ಪ್ರಲ್ಹಾದ ಬೆಳಗಲಿ, ಚನ್ನಬಸಯ್ಯ ಹಗೇದಕಟ್ಟಿಮಠ ಅವರನ್ನು ಸನ್ಮಾನಿಸಲಾಗುವುದು ಎಂದರು.

    ಕಾರ್ಯಕ್ರಮದಲ್ಲಿ ಎಂ.ಬಿ. ಸುರಕೋಡ, ಸಿ.ಎಸ್. ಹುಬ್ಬಳ್ಳಿ, ಹಾಲಪ್ಪ ತುರಕಾಣಿ, ಪ್ರಭಣ್ಣ ಉಳ್ಳಾಗಡ್ಡಿ, ಪ್ರೊ. ಎಸ್.ಎಸ್. ಹರ್ಲಾಪೂರ, ಮುತ್ತಣ್ಣ ನವಲಗುಂದ, ಶಿವಯೋಗಿ ಹುಬ್ಬಳ್ಳಿ, ಮುತ್ತಣ್ಣ ಹಾಳದೋಟರ, ಇಂದಿರಾ ಪಿ. ದ್ಯಾವನೂರ, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಪ್ರಶಸ್ತಿ ಪ್ರದಾನ ಸಮಿತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

    ಸಂಶೋಧಕ ಡಾ. ವೀರಣ್ಣ ರಾಜೂರ ಸಾಧನೆ: ವಿದ್ವಾಂಸ, ಪ್ರಾಧ್ಯಾಪಕ, ನಟ, ನಾಟಕಕಾರ ಆಗಿರುವ ಡಾ. ವೀರಣ್ಣ ರಾಜೂರ ಅವರು ಎರಡು ಸಲ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ, 22 ವರ್ಷ ಬಸವಪೀಠ ಸಂಯೋಜಕ, ಒಂದು ವರ್ಷ ಪ್ರಸಾರಾಂಗ ನಿರ್ದೇಶಕ, ಕಲಾ ನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ, ತೋಂಟದಾರ್ಯ ಮಠದ ಲಿಂಗಾಯತ್ ಅಧ್ಯಯನ ಸಂಸ್ಥೆಯ ಸಂಶೋಧಕ, ಮಹಾಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 14 ಪಿಎಚ್​ಡಿ ಹಾಗೂ 16 ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ 126 ಗ್ರಂಥಗಳನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ 15 ವಚನ ಸಂಪುಟಗಳಲ್ಲಿ 5 ಸಂಪುಟಗಳನ್ನು ರಾಜೂರ ಅವರೇ ಸಂಪಾದಿಸಿದ್ದಾರೆ. 22,000 ವಚನಗಳಲ್ಲಿ 5,000 ವಚನಗಳನ್ನು ಶೋಧಿಸಿ ಬೆಳಕಿಗೆ ತಂದ ಶ್ರೇಯಸ್ಸು ಡಾ. ರಾಜೂರ ಅವರದ್ದು.

    ಡಾ. ಆರ್.ಸಿ. ಹಿರೇಮಠ ಅವರು 33 ಶಿವಶರಣರ ವಚನ ಪ್ರಕಟಿಸಿದ್ದಾರೆ. ಡಾ. ರಾಜೂರ ಅವರು ಸಂಪಾದಿಸಿದ ಶಿವಶರಣೆಯರ ವಚನ ಸಂಪುಟದಲ್ಲಿ 35 ಶಿವಶರಣೆಯರು ಇದ್ದಾರೆ. ತೋಂಟದಾರ್ಯ ಸಮಗ್ರ ಸಾಹಿತ್ಯ ಪ್ರಕಟಣೆ ಯೋಜನೆಯ ಪ್ರಧಾನ ಸಂಪಾದಕತ್ವ ವಹಿಸಿಕೊಂಡ ಡಾ. ರಾಜೂರ ಅವರು ಬೇರೆ ಬೇರೆ ಸಂಪಾದಕರ ಮೂಲಕ 6,000 ಪುಟಗಳ ಎಲ್ಲ ಸಂಪುಟಗಳನ್ನು ಹೊರತಂದರು. ಡಾ. ರಾಜೂರ ಸೃಜನಶೀಲ ನಾಟಕಕಾರರಾಗಿದ್ದು, 18 ನಾಟಕಗಳನ್ನು ರಚಿಸಿದ್ದಾರೆ(5 ಪೂರ್ಣವಧಿ, 13 ಏಕಾಂತ ನಾಟಕ).

    ‘ಒಳ್ಳೆಯ ಸ್ನೇಹ ಜೀವಿ ಅಜಾತಶತ್ರು, ನನ್ನ ಉತ್ತಾರಧಿಕಾರಿ ಡಾ. ರಾಜೂರ’ ಎಂದು ಡಾ. ಎಂ.ಎಂ. ಕಲಬುರ್ಗಿ ಹೇಳಿದ್ದು ಔಚಿತ್ಯಪೂರ್ಣವಾಗಿದೆ. ಡಾ. ರಾಜೂರ ಕುರಿತು ಒಂದು ಪಿ.ಎಚ್.ಡಿ. ಹಾಗೂ 3 ಎಂ.ಫಿಲ್. ಪ್ರಬಂಧ ಮಂಡನೆಯಾಗಿವೆ.

    ಗದಗ ಲಿಂ.ಡಾ. ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮೀಜಿ 22 ಶಿವಾನುಭವ ಮತ್ತು ಪುರಾಣಗಳ ಮೂಲಕ ನಾಡಿನ ಎಲ್ಲ ಹೆಸರಾಂತ ವಿದ್ವಾಂಸರು, ಕಲಾವಿದರು ಮತ್ತು ಸಂಗೀತಗಾರರನ್ನು ಇಲ್ಲಿಗೆ ಕರೆತಂದು ಜನರ ಮನಸ್ಸನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಅವರು ಸಾಮಾನ್ಯ ಜನರನ್ನು ಪ್ರೀತಿಸುತ್ತಿದ್ದರಿಂದ ಅವರನ್ನು ಸಾಮಾನ್ಯರ ಸ್ವಾಮೀಜಿ ಮತ್ತು ವಿಶ್ವವಿದ್ಯಾಲಯಗಳಿಗಿಂತಲೂ ಹೆಚ್ಚಿನ ಪುಸ್ತಕಗಳನ್ನು ತೋಂಟದಾರ್ಯ ಅಧ್ಯಯನ ಸಂಸ್ಥೆಯಿಂದ ಪ್ರಕಟಿಸಿದ್ದರಿಂದ ಪುಸ್ತಕ ಸ್ವಾಮೀಜಿ, ಪೋಕ್ಸೊ, ಗೋಕಾಕ್, ಕಪ್ಪತಗುಡ್ಡ ಹೋರಾಟದ ನೇತೃತ್ವ ವಹಿಸಿಕೊಂಡಿದ್ದರಿಂದ ಅವರನ್ನು ಹೋರಾಟದ ಸ್ವಾಮೀಜಿ ಎಂದರು. ಇಷ್ಟೆಲ್ಲ ಕಾರ್ಯಗಳನ್ನು ಮಾಡಿದ ಲಿಂ.ಡಾ. ತೋಂಟದಾರ್ಯ ಸ್ವಾಮೀಜಿ ಹೆಸರಿನಲ್ಲಿ ಅದೂ ಅಣ್ಣಿಗೇರಿಯಲ್ಲಿಯೇ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

    ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ರಾಜ್ಯ ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts