More

    ರಾಜಕಾರಣಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಬೇಕು: ಡಾ. ಬರಗೂರು

    ಬೆಂಗಳೂರು: ಪೊಲೀಸರಿಗೆ ಸಾಂಸ್ಕೃತಿಕ ಪ್ರಜ್ಞೆ ಮೂಡಿದರೆ, ಅವರಲ್ಲಿ ಮಾನವೀಯತೆಯೂ ತಂತಾನೇ ಬರುತ್ತದೆ. ಅಂತಹ ಪ್ರಜ್ಞೆ ರಾಜಕಾರಣಿಗಳಲ್ಲೂ ಮೂಡಬೇಕು ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

    ಕನ್ನಡ ಜನಶಕ್ತಿ ಕೇಂದ್ರವು ಕನ್ನಡ ಭವನದ ನಯನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಬಿ.ಕೆ. ಶಿವರಾಂ ಅವರಿಗೆ ‘ವರನಟ ಡಾ. ರಾಜ್‌ಕುಮಾರ್ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

    ಸಾಂಸ್ಕೃತಿಕ ಕಾಳಜಿ ಹೊಂದಿರುವವರಲ್ಲಿ ಮನುಷ್ಯತ್ವ ಮೂಡುವುದರ ಜತೆಗೆ ಇತರರೂ ಮನುಷ್ಯರು ಎಂಬ ಪ್ರಜ್ಞೆ ನೀಡುತ್ತದೆ. ಇಂತಹ ಪ್ರಜ್ಞೆ ಜನನಾಯಕರಲ್ಲಿ ಇದ್ದರೆ ಒಳ್ಳೆಯದು. ಆದರೆ ಅವರಿಗೆ ಎಷ್ಟೋ ಸಾರಿ ಈ ಪ್ರಜ್ಞೆ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪೊಲೀಸರು ಎಂದರೇ ಏಕವಚನದಲ್ಲಿಯೇ ಮಾತನಾಡುತ್ತಾರೆ ಎಂಬ ಭಾವನೆಯಿದೆ. ಅವರು ಯಾವಾಗ ಬಹುವಚನ ಬಳಸುತ್ತಾರೆಂದು ನೋಡುತ್ತಾ ಇರುತ್ತೇವೆ. ಬಿ.ಕೆ. ಶಿವರಾಂ ಅವರು ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದವರನ್ನೂ ಎಂದೂ ಏಕವಚನದಲ್ಲಿ ಮಾತನಾಡುತ್ತಿರಲ್ಲಿಲ್ಲವಂತೆ. ಶಿವರಾಮ ಅವರಿಗೆ ರಾಜಕುಮಾರ್ ಪ್ರಶಸ್ತಿ ನೀಡಲು ಈ ಒಂದು ಮಾನದಂಡ ಸಾಕು ಎಂದ ಅವರು, ಸಾಂಸ್ಕೃತಿಕ ಪ್ರಜ್ಞೆ ಹೊಂದಿರುವ ಶಿವರಾಂ ಅವರು ನಿವೃತ್ತಿಯ ಬಳಿಕವೂ ಮಲ್ಲೇಶ್ವರದಲ್ಲಿ ಸಾಂಸ್ಕೃತಿಕ ಕಾರ್ಯಕ್ರುಗಳನ್ನು ಏರ್ಪಡಿಸುತ್ತಿರುವುದನ್ನು ಶ್ಲಾಘಿಸಿದರು.

    ಡಾ. ರಾಜ್ ಪ್ರಬುದ್ಧ ನಾಯಕ: ರಾಜಕುಮಾರ್ ಅವರು ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದರೆ, ಅವರು ಜನರನ್ನು ಅಷ್ಟರ ಮಟ್ಟಿಗೆ ಗೌರವದಿಂದ ಕಂಡಿದ್ದರು. ಜನಸಾಮಾನ್ಯರ ಬಗ್ಗೆ ಗೌರವ ಇರುವವರು ಪ್ರಬುದ್ಧ ನಾಯಕರಾಗುತ್ತಾರೆ. ಕರ್ನಾಟಕದ ಭಕ್ತಿ ಪರಂಪರೆಗೆ ಅವರು ಜನಪ್ರಿಯತೆ ತಂದುಕೊಟ್ಟರು. ತಾರಾ ಮೌಲ್ಯವಿರುವ ಕಲಾವಿದ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ರಾಜಕುಮಾರ್ ತೋರಿಸಿಕೊಟ್ಟರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನಾಯಕತ್ವ ಗುಣ ಮುಖ್ಯ: ನಿವೃತ್ತ ಐಜಿಪಿ ಗೋಪಾಲ್ ಬಿ. ಹೊಸೂರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ನಾಯಕತ್ವ ಗುಣ ಮುಖ್ಯ. ಈ ಗುಣ ಉನ್ನತ ಹುದ್ದೆಯಿಂದ ಮಾತ್ರ ಬರುವುದಿಲ್ಲ. ಬದಲಾಗಿ ವ್ಯಕ್ತಿಗತವಾಗಿ ಬರುವಂತಹದ್ದು. ನಾಯಕತ್ವ ಗುಣದ ಕೊರತೆಯಿಂದ ಪೊಲೀಸ್ ಇಲಾಖೆಗೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನೇಮಕಾತಿ ಪ್ರಕ್ರಿಯೆ, ವರ್ಗಾವಣೆ ಸೇರಿ ವಿವಿಧ ಕಾರಣಗಳಿಂದಲೂ ಕೆಲವರು ನಾಯಕತ್ವ ಗುಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಿಬ್ಬಂದಿಯನ್ನು ಪ್ರೀತಿ ಗೌರವದಿಂದ ಕಾಣಬೇಕು ಎಂದು ಹೇಳಿದರು.

    ಸಂಸ್ಕೃತಿ ಚಿಂತಕ ಮೋಹನದೇವ ಆಳ್ವ, ನವಯುಗ ಹೋಟೆಲ್ ಮಾಲೀಕ ಕೆ.ಮೋಹನ್‌ರಾವ್, ಕನ್ನಡ ಜನಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ.ರಾಮೇಗೌಡ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts