ಡಾ.ದೇವಾನಂದ ಚವಾಣ್ ಟೆಂಪಲ್ ರನ್

Devananda Chavan Temple Run
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಾಗಠಾಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವಾಣ್ ವಿಶೇಷ ಪೂಜೆ ಸಲ್ಲಿಸಿದರು. ಡಾ. ಸುನಿತಾ ಚವಾಣ್ ಇದ್ದಾರೆ.
Published on

ವಿಜಯಪುರ: ನಾಗಠಾಣ ಕ್ಷೇತ್ರದಲ್ಲಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ವಿಧಾನ ಸಭೆ ಚುನಾವಣೆ ಕಣ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಡಾ.ದೇವಾನಂದ ಚವಾಣ್ ಟೆಂಪಲ್ ರನ್ ಶುರುಮಾಡಿದ್ದಾರೆ.

ಕಳೆದೊಂದು ತಿಂಗಳಿನಿಂದ ಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ದೇವಾನಂದ ಚವಾಣ್ ಮಂಗಳವಾರ ವಿಜಯಪುರ ನಗರದಲ್ಲಿರುವ ನಾಗಠಾಣ ಕ್ಷೇತ್ರದ ಜ್ಞಾನಯೋಗಾಶ್ರಮದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ವೈಯಕ್ತಿಕವಾಗಿ ಅಪಾರ ದೈವಭಕ್ತಿ ಹೊಂದಿರುವ ದೇವಾನಂದ ಅಂಬಾಭವಾನಿಯ ಆರಾಧಕರಾಗಿದ್ದಾರೆ. ಕುಲದೇವತೆ ಭವಾನಿಯ ಆಶೀರ್ವಾದದಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂಬುದು ದೇವಾನಂದ ಚವಾಣ್ ಅವರ ಅಭಿಮತ. ಅಂತೆಯೇ ಪ್ರತೀ ವರ್ಷ ನವರಾತ್ರಿ ಸಂದರ್ಭ ತಾಂಬಾದಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸುತ್ತಾ ಬಂದಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ನಾಗಠಾಣ ಕ್ಷೇತ್ರದ ವಿವಿಧ ಸಮುದಾಯಗಳ ಭವನ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿರುವ ಅವರು ಜಾತ್ರೆಗಳಿಗಾಗಿ ಅಪಾರ ಸಹಾಯಧನ ನೀಡಿದ್ದಾರೆ. ಇದೀಗ ಚುನಾವಣೆ ಹೊಸ್ತಿಲಲ್ಲಿಯೇ ಜ್ಞಾನಯೋಗಾಶ್ರಮದಲ್ಲಿ ಕುಟುಂಬ ಸಹ ಪರಿವಾರ ಸಮೇತ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.

ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದರು. ಸಿದ್ಧೇಶ್ವರ ಶ್ರೀಗಳನ್ನು ಸ್ಮರಿಸಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡರು. ಪತ್ನಿ ಡಾ.ಸುನಿತಾ ಚವಾಣ್ ಮತ್ತಿತರರಿದ್ದರು.

ನಂತರ ಭಾವಿಕಟ್ಟಿತಾಂಡಾ, ಸ್ಪಿನ್ನಿಂಗ್ ಮಿಲ್‌ತಾಂಡಾ, ಲಿಡ್ಕರ್ ಕಾಲೋನಿ ಮಖಣಾಪೂರ ತಾಂಡಾ-2ರಲ್ಲಿ ದೇವಾನಂದ ಪ್ರಚಾರ ಕೈಗೊಂಡರು. ಮುಖಂಡರಾದ ಗುಲಾಲ ಚವಾಣ್, ಅಶೋಕ ರಾಥೋಡ್, ಅಪ್ಪು ಚವಾಣ್, ಗೋಪಾಲ ರಾಥೋಡ್, ರವಿ ಚವಾಣ್, ಸಂಜು ರಾಥೋಡ್, ವಿಶಾಲ, ಅಶೋಕ, ಮಾನಿಕ್, ಚಂದ್ರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net